ಬೆಂಗಳೂರು: ಮಲ ಮಗಳು ಎಂದೂ ನೋಡದೆ 14 ವರ್ಷದ ಬಾಲಕಿ ಮೇಲೆ 45 ವರ್ಷದ ದುಷ್ಟನೊಬ್ಬ ಅತ್ಯಾಚಾರ ಎಸಗಿದ್ದಾನೆ. ವಿಷಯ ತಿಳಿಸಿದರೆ ಕೊಂದು ಬಿಡುತ್ತೇನೆ ಎಂದು ಗದರಿದ್ದಾನೆ. ಕೊನೆಗೆ ಈತನಾ ಕಾಟ ತಾಳಲಾರದೆ ಆಕೆ ಅಜ್ಜಿ, ಸೋದರ ಮಾವನಿಗೆ ವಿಷಯ ಮುಟ್ಟಿಸಿದ್ದಾಳೆ. ಈಗ ಆ ಕಿರಾತಕ ಕಂಬಿ ಹಿಂದಿದ್ದಾನೆ.
ಆಟೋ ಚಾಲಕನಾಗಿರುವ ಆರೋಪಿಗೆ 14 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೊದಲ ಪತ್ನಿ ಮೃತಪಟ್ಟಿದ್ದರು. ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು, 12 ವರ್ಷಗಳ ಹಿಂದೆ ಮತ್ತೊಂದು ವಿವಾಹವಾಗಿದ್ದ. ಅವರೂ ಮೊದಲ ಪತಿಯಿಂದ ಪ್ರತ್ಯೇಕವಾಗಿ ತನ್ನ ಮಗಳ ಜತೆ ನೆಲೆಸಿದ್ದರು.
ಎರಡನೇ ಪತ್ನಿಯ ಮಗಳಿಗೆ ಈಗ 14 ವರ್ಷ. ತಾಯಿ ಮನೆಯಲ್ಲಿ ಇಲ್ಲದ ವೇಳೆ ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದ. ಮಲತಂದೆಯ ಕಿರುಕಳ ಹೆಚ್ಚಾದಾಗ ಬಾಲಕಿಯು ಕಲಾಸಿಪಾಳ್ಯದಲ್ಲಿರುವ ತನ್ನ ಅಜ್ಜಿ ಹಾಗೂ ಸೋದರ ಮಾವನ ಬಳಿ ಹೇಳಿಕೊಂಡಿದ್ದಳು.
ವಿಷಯ ತಿಳಿದು ಆಕ್ರೋಶಗೊಂಡ ಸೋದರ ಮಾವ ಸೋಮವಾರ ರಾತ್ರಿ ಸಂಬಂಧಿಕರ ಜತೆ ಮನೆಗೆ ಸಂಬಂಧಿಕರ ಜತೆ ಮನೆಗೆ ಹೋಗಿ ಗಲಾಟೆ ಮಾಡಿದ್ದರು. ಹಲ್ಲೆ ಮಾಡುತ್ತಾರೆನ್ನುವ ಭೀತಿಯಿಂದ ಆರೋಪಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಹಡಿಯಿಂದ ಕೆಳಗೆ ಬಿದ್ದಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದ ಸಂಬಂಧಿಕರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.