
ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡಿದ್ದ ಒಂದಂಕಿ ಲಾಟರಿ ಪ್ರಕರಣ ಸಂಬಂಧ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಅಲೋಕ್ ಕುಮಾರ್ ಅವರನ್ನು ತರಬೇತಿ ಇಲಾಖೆಯ ಐಜಿಪಿ ಹುದ್ದೆಗೆ ನೇಮಕಮಾಡಲಾಗಿದೆ. ಇಲಾಖೆ ವಿಚಾರಣೆ ಬಾಕಿ ಉಳಿಸಿ ಸರ್ಕಾರ ನೇಮಕಾತಿ ಆದೇಶ ಹೊರಡಿಸಿದೆ. ನಾಳೆಯಿಂದ ಅಲೋಕ್ ಕುಮಾರ್ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಲಾಟರಿ ದಂಧೆ ರೂವಾರಿ ಪಾರಿ ರಾಜನ್ ಜತೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ಹುದ್ದೆಯಲ್ಲಿದ್ದ ಅಲೋಕ್ ಕುಮಾರ್ ಅವರನ್ನು 5 ತಿಂಗಳ ಹಿಂದೆ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಪಾರಿ ರಾಜನ್ ಜತೆ ಸಂಪರ್ಕ ಹೊಂದಿದ್ದಲ್ಲದೆ ಆತ ನನ್ನ ಹಿತೈಷಿ ಎಂದು ಅಲೋಕ್ ಕುಮಾರ್ ನೀಡಿದ್ದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲೋಕ್ ಕುಮಾರ್ ಅವರನ್ನು ತಕ್ಷಣ ಅಮಾನತುಗೊಳಿಸಿದ್ದರು.
ಏನಿದು ಲಾಟರಿ ಹಗರಣ?
ಕರ್ನಾಟಕದಲ್ಲಿ ನಿಷೇಧವಿದ್ದರೂ ಹೊರಗಡೆ ಮುದ್ರಿಸಿ ರಾಜ್ಯದಲ್ಲಿ ಅಕ್ರಮವಾಗಿ ಲಾಟರಿ ಮಾರಲಾಗುತ್ತಿತ್ತು. ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ, ಮೇಲಧಿಕಾರಿಗಳ ಸೂಚನೆಯಂತೆ ಸುಮ್ಮನಿದ್ದರು. ಇದಕ್ಕಾಗಿ ಪೊಲೀಸ್ ಇಲಾಖೆಗೆ ಪ್ರತಿ ತಿಂಗಳೂ "ಕಾಣಿಕೆ' ಸಲ್ಲುತ್ತಿತ್ತು ಎಂದು ಆರೋಪಿಸಲಾಗಿತ್ತು.
Advertisement