ಕಳಸಾ ಬಂಡೂರಿ ವಿವಾದ: ಸದ್ಯದಲ್ಲೇ ಸರ್ವಪಕ್ಷ ನಿಯೋಗ

ಕಳಸಾ ಬಂಡೂರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದಕ್ಕಾಗಿ ಶೀಘ್ರದಲ್ಲೇ ಸರ್ವಪಕ್ಷ ನಿಯೋಗದ ಜತೆಗೆ ದೆಹಲಿಗೆ ತೆರಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ವಪಕ್ಷ ಸಭೆ(ಸಾಂದರ್ಭಿಕ ಚಿತ್ರ)
ಸರ್ವಪಕ್ಷ ಸಭೆ(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕಳಸಾ ಬಂಡೂರಿ ನದಿ ನೀರು ಹಂಚಿಕೆ ವಿವಾದದಲ್ಲಿ ರಾಜ್ಯದ ಪರವಾಗಿ ಮಧ್ಯಂತರ ಅರ್ಜಿ ಹಾಕುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದಕ್ಕಾಗಿ ಶೀಘ್ರದಲ್ಲೇ ಸರ್ವಪಕ್ಷ ನಿಯೋಗದ ಜತೆಗೆ ದೆಹಲಿಗೆ ತೆರಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ವಿಧಾನಮಂಡಲದ ಉಭಯ ಸದನಗಳ ಮುಖಂಡರಾದ ಜಗದೀಶ್ ಶೆಟ್ಟರ್, ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಕೆ.ಎಸ್. ಈಶ್ವರಪ್ಪ, ಬಸವರಾಜ ಹೊರಟ್ಟಿ, ಸಚಿವರಾದ ಎಂ.ಬಿ.ಪಾಟೀಲ್, ಟಿ.ಬಿ. ಜಯಚಂದ್ರ, ಎಚ್.ಕೆ.-ಪಾಟೀಲ್ ಹಾಗೂ ಕಾನೂನು ತಜ್ಞರಜತೆ ಮಹದಾಯಿ, ಕಳಸಾ ಬಂಡೂರಿ ವಿಚಾರ ಸಂಬಂಧ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ.
ಕಳಸಾಬಂಡೂರಿ ವಿಚಾರದಲ್ಲಿ ಕಳೆದ ಮೂರು ತಿಂಗಳಿಂದ ಹೋರಾಟ ನಡೆಯುತ್ತಿದೆ. ರಾಜ್ಯದ ಹಿತಾಸಕ್ತಿ ಕಾಪಾಡುವುದಕ್ಕೆ ಹಲವು ಪ್ರಯತ್ನಗಳನ್ನು ನಡೆಸಲಾಗಿದೆ. ಇಂದಿನ ಸಭೆಯಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ ಎಂದು ವಿವರಿಸಿದರು.
ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯಪಡೆಯುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷಗಳ  ಮುಖಂಡರ ಜತೆಗೆ ದೆಹಲಿಗೆ ತೆರಳಿ ರಾಜ್ಯದ ಪರ ವಕೀಲ ನಾರಿಮನ್ ಅವರ ಜತೆಗೆ ಚರ್ಚೆ ಮಾಡಲಾಗುವುದು. ಅವರ ಅಭಿಪ್ರಾಯ ಪಡೆದ ಬಳಿಕ ಮಧ್ಯಂತರ ಅರ್ಜಿ ಸಲ್ಲಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಮತ್ತೊಮ್ಮೆ ನಿಯೋಗ ಕರೆದೊಯ್ಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ಆ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದರು. 
ನಾರೀಮನ್ ವಿರೋಧ : ಆದರೆ ರಾಜ್ಯದ ಈಗಿನ ಹೋರಾಟದ ಪರಿಗೆ ಜಲ ತಗಾದೆ ವಿಚಾರದಲ್ಲಿ ರಾಜ್ಯದ ಪರ ವಾದ ಮಂಡಿಸುವ ಹಿರಿಯ ವಕೀಲ ನಾರೀಮನ್ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. 7.5 ಟಿಎಂಸಿ ವಿಚಾರದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರೆ ಅದು ಬಿದ್ದು ಹೋಗುತ್ತದೆ. 3.5  ಟಿಎಂಸಿ ವಿಚಾರದಲ್ಲಿ ಅರ್ಜಿ ಸಲ್ಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಪರಿಸ್ಥಿತಿ ಹೀಗಿರುವಾಗ ಮಧ್ಯಂತರ ಅರ್ಜಿ ಸಲ್ಲಿಕೆಯಿಂದ ರಾಜ್ಯಕ್ಕೆ ಯಾವುದೇ ಲಾಭವಾಗುವುದಿಲ್ಲ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com