
ಬೆಂಗಳೂರು: `ಧಾರ್ಮಿಕ, ಸಾಂಸ್ಕೃತಿಕ ಭಯೋತ್ಪಾದನೆ ನಮ್ಮ ಮನೆ ಬಾಗಿಲಿಗೆ ಬಂದಿದೆ. ಸತ್ಯ ಹೇಳುವುದು ಅಪಾಯ ತರುತ್ತಿದೆ. ಮಾನವನ ಅಭಿವೃದ್ಧಿ, ಆಹಾರ ಸ್ವಾತಂತ್ರ್ಯ
ಮತ್ತು ವಾಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿರುವುದರ ವಿರುದ್ಧ ಇಡೀ ಸಮಾಜ ಜಾಗೃತವಾಗಬೇಕಾದ ಅವಶ್ಯಕತೆ ಇದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ಮೂಢನಂಬಿಕೆ ಪ್ರತಿಬಂಧಕ ಮಸೂದೆ ಕುರಿತು ಜಾಗೃತಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ, ನಂಬಿಕೆ ಇಲ್ಲದೆ ಮನುಷ್ಯ ಕುಲ ಬದುಕುವುದಕ್ಕೆ ಸಾಧ್ಯವಿಲ್ಲ. ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮೌಢ್ಯ ಪ್ರತಿಬಂಧಕ ಕಾಯ್ದೆ ಜನರ ನಂಬಿಕೆ, ಧರ್ಮ, ದೈವತ್ವ, ಸದಾಚಾರ ಮತ್ತು ಒಳ್ಳೆಯ ಆಚರಣೆ ವಿರುದ್ಧ ಅಲ್ಲ. ಈ ಕಾಯ್ದೆ ಧರ್ಮ, ದೇವರ ಹೆಸರಿನಲ್ಲಿ ನಡೆಯುವ ಶೋಷಣೆ, ಅವಮಾನ, ನರಬಲಿ, ಸ್ತ್ರೀ ವಧೆ ಅಮಾನುಷ ಪದ್ಧತಿಗಳ ತಡೆ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಕಾಯ್ದೆ ಜಾರಿಗೆ ಬಂದರೆ ಮಾನವನ ಘನತೆ ಎತ್ತಿ ಹಿಡಿಯುತ್ತದೆ. ಅಲ್ಲದೆ ಮೂಲ ಸಂಸ್ಕೃತಿ ಆಚರಣೆಗೆ ತೊಡಕಿಲ್ಲ. ಮನುಷ್ಯನನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಈ ಕಾಯ್ದೆ ಜಾರಿಗಾಗಿ ಹೋರಾಟ ಮಾಡುತ್ತಿರುವ ನಾವು ದೇವರ ಅಸ್ತಿತ್ವವನ್ನೇ ನಿರಾಕರಣೆ ಮಾಡುತ್ತಿಲ್ಲ. ಬದಲಾಗಿ ಜನಸಾಮಾನ್ಯರ ಶೋಷಣೆ ತಡೆಯಬೇಕಾಗಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕಾದ ಟಿವಿ ಮಾಧ್ಯಮಗಳೇ ಇಂದು ಟಿಆರ್‍ಪಿಗಾಗಿ ಜೋತಿಷ್ಯ ಕಾರ್ಯಕ್ರಮ-ಗಳನ್ನು ಪ್ರಸಾರಮಾಡಿ ಮೂಢನಂಬಿಕೆ ಬಿತ್ತರಿಸುತ್ತಿವೆ. ಈ ಬಗ್ಗೆ ಮಾಧ್ಯಮಗಳು ಎಚ್ಚೆತ್ತುಕೊಂಡು ಸಮಾಜದ ಪ್ರಗತಿಗೆ ಉಂಟಾಗುವಂತೆ ಕಾರ್ಯಕ್ರಮ ಪ್ರಸಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಮಾತನಾಡಿ, ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಸಲಹೆ ನೀಡಲು ನ್ಯಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಕಾನೂನು ಸಂಸ್ಕರಣೆ ಸಲಹಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಈ ಕಾಯ್ದೆಗೆ ಯಾವ ವಿಷಯ ಸೇರಿಸಬೇಕು. ಮೂಢ ನಂಬಿಕೆಗಳೆಂದರೆ ಯಾವುವು? ಯಾವುದನ್ನು ನಿಷೇಧಿಸಬೇಕು ಎಂಬುವುದರ ಕುರಿತು ಚರ್ಚಿಸಿ ನಂತರ ಸರ್ಕಾರಕ್ಕೆ ಸಲಹೆ, ಸೂಚನೆ ನೀಡಲಿದೆ ಎಂದರು.
ಪ್ರೊ.ಮರುಳಸಿದ್ದಪ್ಪ ಮಾತನಾಡಿ, ಕೇವಲ ಕಾನೂನಿನ ಮೂಲಕ ಯಾವ ಸಮಸ್ಯೆಗಳು ಬಗೆಹರಿಯುವುದಿಲ್ಲ. ಜನರಲ್ಲಿ ಜಾಗೃತಿ ಮೂಡಿದಾಗ ಪರಿಹಾರ ಸಿಗುತ್ತದೆ. ರಾಜಕೀಯ ಪಕ್ಷಗಳು ಯಾವುದೇ ಕಾಯ್ದೆಯನ್ನು ಜಾರಿಗೆ ತರುವಾಗ ಆಡಳಿತ ಪಕ್ಷವಿರಲಿ, ವಿಪಕ್ಷವಿರಲಿ ವಿರೋಧಿಸಬೇಕೆಂದು ವಿರೋಧಿಸುತ್ತೇವೆ. ಇದು ಪ್ರಜಾಪ್ರಭುತ್ವದ ದುರಂತ. ಕಾಯ್ಜೆ ಜಾರಿಗೆ ಆಗ್ರಹಿಸಿ ಅ.30ಕ್ಕೆ ರಾಜ್ಯಾದ್ಯಂತ ಚಳವಳಿ ಹಮ್ಮಿಕೊಳ್ಳಲಾಗಿದೆ. ನಂತರ ನ.16ಕ್ಕೆ ರಾಜಧಾನಿಯಲ್ಲಿ ಬೃಹತ್ ರ್ಯಾಲಿ ನಡೆಸಿ ಸರ್ಕಾರಕ್ಕೆ ಕಾಯ್ದೆ ಜಾರಿಗೊಳಿಸಲು ಹಕ್ಕೋತ್ತಾಯ ಮಾಡಲಾಗುವುದು ಎಂದು ತಿಳಿಸಿದರು. ಸಿಪಿಎಂ ಪಕ್ಷದ ನಾಯಕ ಜಿ. ಎನ್.ನಾಗರಾಜ್ ಮಾತನಾಡಿದರು. ಪರ್ಯಾಯ ಕಾನೂನು ವೇದಿಕೆ ಸದಸ್ಯ ಗೌತಮ ಉಪಸ್ಥಿತರಿದ್ದರು.
Advertisement