ಹಳಿ ತಪ್ಪಿದ ಬೆಂಗಳೂರು-ಮೈಸೂರು ರೈಲು

ಮೈಸೂರು ರಸ್ತೆ ನಾಯಂಡಹಳ್ಳಿ ತಿರುವಿನ ಬಳಿ ಶುಕ್ರವಾರ ಬೆಳಗ್ಗೆ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲಿನ ಎಂಜಿನ್ ಹಳಿ ತಪ್ಪಿತು. ಹೀಗಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು. ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮೈಸೂರು ರಸ್ತೆ ನಾಯಂಡಹಳ್ಳಿ ತಿರುವಿನ ಬಳಿ ಶುಕ್ರವಾರ ಬೆಳಗ್ಗೆ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲಿನ ಎಂಜಿನ್ ಹಳಿ ತಪ್ಪಿತು. ಹೀಗಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು. ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ, ಒಂದೂವರೆ ಗಂಟೆಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ವಿಳಂಬವಾಯಿತು.

ಹೇಗಾಯಿತು?: ಬೆಳಗ್ಗೆ 9 ಗಂಟೆಗೆ ನಗರ ರೈಲು ನಿಲ್ದಾಣದಿಂದ ಹೊರಟ 15 ಬೋಗಿಗಳ ಪ್ಯಾಸೆಂಜರ್ ರೈಲು ನಾಯಂಡಹಳ್ಳಿ ಬಳಿಯ ತಿರುವಿನಲ್ಲಿ ನಿಧಾನ ತೆರಳುತ್ತಿತ್ತು. 9.30ರ ಸುಮಾರಿಗೆ ಎಂಜಿನ್‍ನ ಮುಂದಿನ ಚಕ್ರಗಳು ಹಳಿ ತಪ್ಪಿದವು. ಚಾಲಕ ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಪ್ರಯಾಕರಿದ್ದ ಯಾವುದೇ ಬೋಗಿಗೂ ಅನಾಹುತಕ್ಕೆ ಸಿಲುಕಲಿಲ್ಲ. ಆದರೆ, ನಿಲ್ದಾಣವಲ್ಲದ ಕಡೆ ಏಕಾಏಕಿ ರೈಲುನಿಂತ ಕಾರಣ ಪ್ರಯಾಣಿಕರು ಆತಂಕಕ್ಕೊಳಗಾದರು. ಕೆಳಗಿಳಿದು ನೋಡಿದಾಗ ಎಂಜಿನ್ ಮುಂದಿನ ಚಕ್ರಗಳು ಹಳಿ ತಪ್ಪಿರುವುದು ಪ್ರಯಾಣಿಕರಿಗೆ ಗೊತ್ತಾಯಿತು.

ನಂತರ ಸ್ಥಳಕ್ಕೆ ಬಂದ ರೈಲ್ವೆ ಸಿಬ್ಬಂದಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜೀವ್ ಅಗರ್‍ವಾಲ್ ಸ್ಥಳದ ಪರಿಶೀಲನೆ ನಡೆಸಿದರು. ಬಳಿಕ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ರೈಲು ಎಂಜಿನ್ ಅನ್ನು ವಾಪಸ್ ಹಳಿ ಮೇಲೆ ತಂದು, ಕಿತ್ತುಹೋಗಿದ್ದ ಹಳಿಗಳನ್ನು ಸರಿಪಡಿಸಲಾಯಿತು. 11.15ರ ಸುಮಾರಿಗೆ, 90 ನಿಮಿಷ ತಡವಾಗಿ ರೈಲು ಮೈಸೂರಿನತ್ತ ಪ್ರಯಾಣ ಬೆಳೆಸಿತು. ರೈಲು ಓಡಾಟಕ್ಕೆ ಅಡಚಣೆಯಾಗಲಿಲ್ಲ: ಘಟನೆಯಿಂದ ಈ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳಿಗೇನೂ ಅಡಚಣೆ ಉಂಟಾಗಿಲ್ಲ. ಆದರೆ, 11 ಗಂಟೆಗೆ ನಗರದಿಂದ  ಸೂರಿಗೆ ಹೊರಡುವ ಶತಾಬ್ದಿ ಎಕ್ಸ್‍ಪ್ರೆಸ್ ರೈಲು ಮಾತ್ರ 15 ನಿಮಿಷ ತಡವಾಗಿ ಪ್ರಯಾಣ ಬೆಳೆಸಿತು ಎಂದು ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿರಿ ಸುವಂಕರ್ ಬಿಸ್ವಾರ್ ಹೇಳಿದ್ದಾರೆ. ಘಟನೆ ಬಗ್ಗೆ ಸುರಕ್ಷತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕಿಡಿಗೇಡಿಗಳ ಕೃತ್ಯವಿರಬಹುದೇ?:
ನಾಯಂಡಹಳ್ಳಿ, ಬಾಪೂಜಿನಗರ ಬಳಿ ತೀವ್ರ ತರದ ತಿರುವು ಇರುವ ಕಾರಣ ಎಲ್ಲಾ ರೈಲುಗಳು ಕಡಿಮೆ ವೇಗದಲ್ಲಿ ಸಂಚರಿಸುತ್ತವೆ. ಆದರೆ, ಇದೇ ಜಾಗದಲ್ಲಿ ಹಳಿಗಳ ಮೇಲೆ ಕಿಡಿಗೇಡಿಗಳು ಕಲ್ಲುಗಳನ್ನು ಇರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಕಾರಣದಿಂದ ಎಂಜಿನ್‍ನ ಮುಂಭಾಗದ ಚಕ್ರಗಳು ಹಳಿ ತಪ್ಪಿರಬಹುದು ಎಂದು ರೈಲ್ವೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com