
ಬೆಂಗಳೂರು: ಕನ್ನಡ ಕೆಲಸಗಳಿಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಸಮಾಧಾನ ಹೊರ ಹಾಕಿದ್ದಾರೆ.
ವೀರಲಕ್ಷ್ಮಿ ಕ್ರಿಯೇಷನ್ಸ್ ಕಸಾಪದ ಶ್ರೀಕೃಷ್ಣರಾಜ ಪರಿಷನ್ಮಂದಿರ ದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಹರಿ ಆಡಿಯೋ ಹೊರತಂದಿರುವ `ಸೆರೆಯೊಳಗಿನ ಬಣ್ಣಗಳು' ಧ್ವನಿಸಾಂದ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಹಾಗೂ ಸಚಿವರು ನಮ್ಮ ಮನವಿಗೆ ಸ್ಪಂದಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಕಸಾಪ ಕಳುಹಿಸಿದ ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಕಾಳಜಿ ವಹಿಸುತ್ತಿಲ್ಲ.
ಕಡತಗಳನ್ನು ನೋಡಿ ಬೀಸಾಕುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶೀಘ್ರ ಶತಮಾನ ಭವನ: ಪರಿಷತ್ತಿಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ನೆನಪಿನ ಭವನ ನಿರ್ಮಿಸಲು ರಾಜ್ಯ ಸರ್ಕಾರ ಮೂರುವರೆ ಕೋಟಿ ಹಾಗೂ ಬಿಬಿಎಂಪಿ ಒಂದೂವರೆ ಕೋಟಿ ನೀಡಿದೆ. ಭವನ ನಿರ್ಮಾಣಕ್ಕೆ ಅಧಿಕಾರಿಗಳಿಂದ ತಾಂತ್ರಿಕ ತೊಂದರೆ ಎದುರಾಗಿತ್ತು. ಈಗ ಅವೆಲ್ಲವನ್ನು ಬಗೆಹರಿಸಿದ್ದು ಮುಂದಿನ ಒಂದು ವಾರದೊಳಗೆ ಕರ್ನಾಟಕ ಗೃಹ ಮಂಡಳಿಯವರು ಭವನ ನಿರ್ಮಾಣ ಕಾಮಗಾರಿ ಆರಂಬಿsಸಲಿದ್ದಾರೆ ಎಂದರು.
ಕಸಾಪ ಶತಮಾನೋತ್ಸವದ ಹಿನ್ನೆಲೆಯಲ್ಲಿ ನಾಲ್ವಡಿ ಕೃಷ್ಣರಾಜರ ಊರಾದ ಮೈಸೂರಿನಲ್ಲಿ ಅ. 30 ಮತ್ತು 31ರಂದು ಸಂಭ್ರಮಾಚರಣೆ ಏರ್ಪಡಿಸಲಾಗಿದೆ. ಕನ್ನಡ ಪರಿಚಾರಕರು ಎಲ್ಲರೂ ಭಾಗವಹಿಸಬೇಕು. ಈ ಸಂಭ್ರಮಾಚರಣೆ ಪ್ರಯುಕ್ತ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯನ್ನು ಪ್ರಕಟಿಸಿದ್ದು, ಈಗಾಗಲೇ 700 ಕೃತಿಗಳು ಮಾರಾಟವಾಗಿವೆ. ಡಾ.ಎಸ್.ಎಲ್. ಭೈರಪ್ಪ ಅವರ ಗೃಹಭಂಗ ಕೃತಿಯನ್ನು ಮರುಮುದ್ರಣ ಮಾಡಬೇಕೆಂಬ ಆಸೆ ಇನ್ನೂ ಕೈಗೂಡಿಲ್ಲ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಆರ್. ಸೋಮಶೇಖರ್, ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆನಂದ ಮಾದಲಗೆರೆ ಇದ್ದರು.
Advertisement