ಪೇದೆಯನ್ನೇ ಹಿಡಿದ ಪೊಲೀಸರು

ಕಾನೂನು, ಸುವ್ಯವಸ್ಥೆ ಕಾಪಾಡುವ ಪೊಲೀಸರು ಜನರಿಗೆ ರೋಲ್ ಮಾಡಲ್ . ಆದರೆ, ಆ ರೋಲ್ ಮಾಡಲ್‍ಗಳೇ ತಪ್ಪು ಮಾಡಿದರೆ?...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾನೂನು, ಸುವ್ಯವಸ್ಥೆ ಕಾಪಾಡುವ ಪೊಲೀಸರು ಜನರಿಗೆ ರೋಲ್  ಮಾಡಲ್ . ಆದರೆ, ಆ ರೋಲ್ ಮಾಡಲ್‍ಗಳೇ ತಪ್ಪು ಮಾಡಿದರೆ? ಅಂಥವರನ್ನೂ ಸಂಚಾರ ಪೊಲೀಸರು ಬಿಡುವುದಿಲ್ಲ. ಅಂಥ ಪ್ರಸಂಗ ನಗರದಲ್ಲಿ ನಡೆದಿದ್ದು, ಕುಡಿದು ವಾಹನ ಓಡಿಸುತ್ತಿದ್ದ ಪೇದೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ ನೋ ಪಾರ್ಕಿಂಗ್‍ನಲ್ಲಿ ನಿಂತಿದ್ದ ಪೊಲೀಸ್ ವಾಹನದ ಚಕ್ರಕ್ಕೆ ಲಾಕರ್ ಹಾಕಿ ದಂಡ ವಿಧಿಸಿದ್ದು, ಹೆಲ್ಮೆಟ್ ಹಾಕದ ಸಿಬ್ಬಂದಿಗೆ ದಂಡ ವಿಧಿಸಿದ್ದು ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದ ಪೊಲೀಸ್ ಸಿಬ್ಬಂದಿಗೆ, ಇತರೆ ಸರ್ಕಾರಿ ಅಧಿಕಾರಿಗಳಿಗೆ ದಂಡ ವಿಧಿಸಿರುವ ಉದಾಹರಣೆಗಳಿವೆ. ಈಗ ಮದ್ಯಸೇವಿಸಿದ ಪೊಲೀಸ್ ಪೇದೆಯ ಸರದಿ.

ಕೇಸು ದಾಖಲಿಸದಿರಲು ಮನವಿ: ಉಪ್ಪಾರ ಪೇಟೆ ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆಯೊಬ್ಬರು ಅ.20ರಂದು ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗುವಾಗ ಮದ್ಯ ಸೇವಿಸಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಮಾರ್ಗದಲ್ಲಿ ಪೊಲೀಸರು ಪರಿಶೀಲಿಸಿದರು. ಇದರಿಂದ ಗಾಬರಿಗೊಂಡ ಅವರು ತಕ್ಷಣ ತಾನು ಪೊಲೀಸ್ ಎಂದು ಹೇಳಿ ದಂಡ ವಿಧಿಸದಂತೆ ಮನವಿ ಮಾಡಿದ್ದಾರೆ. ಆದರೂ ಕಾನೂನು ಪಾಲಕರೇ ಹೀಗೆ ತಪ್ಪು ಮಾಡುವುದು ಸರಿಯಲ್ಲ ಎಂದು ಪೊಲೀಸರು ದಂಡ ವಿಧಿಸಿ, ಪ್ರಕರಣವನ್ನು ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.

ಅಮಾನತ್ತಿನ ಶಿಕ್ಷೆ: ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಸರಿಯಲ್ಲ. ಅದರಲ್ಲೂ
ಕಾನೂನು ಪಾಲಕರೇ  ಹೀಗೆ ಮಾಡುವುದು ಇಲಾಖೆಗೂ ಶೋಭೆಯಲ್ಲ. ಆದ್ದರಿಂದ ಅವರನ್ನು ಇಲಾಖಾ ವಿಚಾರಣೆಗೊಳಪಡಿಸಲು ಸೂಚಿಸಲಾಗಿದೆ. ಸದ್ಯ ಅವರನ್ನು ಅಮಾನತು ಮಾಡಲಾಗಿದೆ. ಸಮಿತಿ ವರದಿ ಬಂದ ಮೇಲೆ ಎಷ್ಟು ದಿನ ಅಮಾನತ್ತಿನಲ್ಲಿಡಬೇಕು ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ.

3 ಸಾವಿರ ದಂಡ?
ಮದ್ಯಪಾನ ಸೇವಿಸಿ ವಾಹನ ಚಾಲನೆ ಮಾಡುವ ಪ್ರಕರಣಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಕಳುಹಿಸುತ್ತಾರೆ. ಈ ತಪ್ಪಿಗೆ 2,500ರಿಂದ 3 ಸಾವಿರ ದಂಡ ವಿಧಿಸಲಾಗುತ್ತದೆ. ದಂಡ ವಿಧಿಸುವುದು ನ್ಯಾಯಾಧೀಶರಿಗೆ ಬಿಟ್ಟ ವಿಚಾರ.ಪ್ರಕರಣವನ್ನು 2ನೇ ಟ್ರಾಫಿಕ್ ಕೋರ್ಟ್‍ಗೆ ಕಳುಹಿಸಲಾಗಿದೆ. ರಜೆ ಇರುವ ಕಾರಣ ಪ್ರಕರಣ ವಿಚಾರಣೆ ಹಾಗೂ ಶಿಕ್ಷೆ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com