
ಬೀದರ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದಡಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಕಾರಂಜಾ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಲಕ್ಷ್ಮಣ ಗುಂಡಪ್ಪ ಅವರಿಗೆ ಜಿಲ್ಲಾ ನ್ಯಾಯಾಲಯ 7 ವರ್ಷ ಜೈಲುವಾಸ ಹಾಗೂ ರೂ.1 ಕೋಟಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಕಳೆದ 2007 ರಲ್ಲಿ ಕರಾಂಜಾ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಲಕ್ಷ್ಮಣ ಗುಂಡಪ್ಪ ಅವರ ಬೀದರ್ ನ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ ಪಿ ರಾಯ್ಕರ್ ನೇತೃತ್ವದಲ್ಲಿ ದಾಳಿ ನಡೆಸಿ ಆದಾಯಕ್ಕಿಂಟ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದರೆಂದು 2009 ರಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾ. ಸಂಜೀವಕುಮಾರ ಹಂಚಾಟೆ ಲಕ್ಷ್ಮಣ ಗುಂಡಪ್ಪ ಅವರಿಗೆ ಕಲಂ 13 (1 ) (ಸಿ) ರ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಸೆಕ್ಷನ್ 13 (2 ) ರಂತೆ 7 ವರ್ಷ ಸಾದಾ ಸಜೆ ಹಾಗೂ ರೂ.1 ಕೋಟಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಕಟ್ಟದಿದ್ದಲ್ಲಿ ಒಂದು ವರ್ಷಗಳ ಹೆಚ್ಚುವರಿ ಸಜೆ ನೀಡಿ ತೀರ್ಪಿತ್ತಿದ್ದಾರೆ.
ಲೋಕಾಯುಕ್ತ ದಾಳಿಯಲ್ಲಿ ಜಪ್ತಿ ಮಾಡಿಕೊಳ್ಳಲಾದ ಬೆಳ್ಳಿ, ಬಂಗಾರ ಹಾಗೂ ತೆಲಂಗಾಣದ ಹೊಸಳ್ಳಿ ಗ್ರಾಮದ ಬಳಿಯಿರುವ ಎಲ್ಲಾ ಜಮೀನು ಹಾಗೂ ಅವರ ಏರ್ ಗನ್ ಮತ್ತು ಪಿಸ್ತೂಲನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ತೀರ್ಪು ಹೊರಬೀಳುತ್ತಿದ್ದಂತೆ ಪೊಲೀಸರು ಲಕ್ಷ್ಮಣ ಅವರನ್ನು ವಶಕ್ಕೆ ಪಡೆದಿದ್ದು ಕಾರಾಗೃಹಕ್ಕೆ ಕಳುಹಿಸಿದ್ದಾರೆ.
Advertisement