
ಬೆಂಗಳೂರು: ದೇಶದ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹೀರೇಮಠ್ ಹೈಕೋರ್ಟ್‍ನಲ್ಲಿ ವಾದ ಮಂಡಿಸಿದರು.
ನೈಸರ್ಗಿಕ ಸಂಪನ್ಮೂಲ ರಕ್ಷಣೆ ನನ್ನ ಹಕ್ಕು, ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ವಿರುದ್ಧ ಪ್ರಾಣ ಒತ್ತೆಯಿಟ್ಟು ಸುಪ್ರೀಂಕೋರ್ಟ್‍ವರೆಗೂ ಹೋಗಿ ಹೋರಾಟ ಮಾಡಿದ್ದೇನೆ. ದೇಶದಲ್ಲಿ ಭೂ, ಗಣಿ ಮತ್ತು ಟಿಂಬರ್ ಮಾಫಿಯಾಗಳು ನಡೆಯುತ್ತಿವೆ. ಇದು ಸಮಾಜಕ್ಕೆ ಕೆಟ್ಟ ಸಂದೇಶವಾಗಿದ್ದು ಇದನ್ನು ತಪ್ಪಿಸುವುದಕ್ಕಾಗಿ ನನ್ನ ಹೋರಾಟ ನಡೆಯುತ್ತಿದೆ. ಸಮಾಜದ ಆಸ್ತಿಯನ್ನು ರಕ್ಷಣೆ ಮಾಡುವುದಕ್ಕೆ ಅವಕಾಶ ನೀಡಿ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಜಾಯ್ ಐಸ್‍ಕ್ರೀಂ ಭೂಮಿ ಪ್ರಕರಣ:
ಕೆಐಎಡಿಬಿಯಿಂದ ಜಾಯ್ ಐಸ್‍ಕ್ರೀಂಗೆ ನೀಡಿದ್ದ ಜಮೀನನ್ನು ಪ್ರೆಸ್ಟೀಜ್ ಗ್ರೂಪ್‍ಗೆ ವರ್ಗಾವಣೆ ಮಾಡಿದ್ದ ಹಿನ್ನೆಲೆಯಲ್ಲಿ ಜಮೀನನ್ನು ಹಿಂಪಡೆಯುವುದಾಗಿ ಸರ್ಕಾರ ನೊಟೀಸ್ ಜಾರಿ ಮಾಡಿತ್ತು. ಪ್ರೆಸ್ಟೀಜ್ ಸಂಸ್ಥೆ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಹಿರೇಮಠ್ ಏಳನೇ ಪ್ರತಿವಾದಿಯಾಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ನ್ಯಾಯಪೀಠ, ವಿಚಾರಣೆ ನಡೆಯುತ್ತಿರುವಾಗ ಪ್ರಕರಣ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಏಳನೆ ಪ್ರತಿವಾದಿ ಯಾರು? ಎಂದು ಪ್ರಶ್ನಿಸಿದರು. ಆಗ ಹಿರೇಮಠ ಹಾಜರಾದಾಗ, ನ್ಯಾಯಾಲಯ ಪ್ರಾಮಾಣಿಕವಾಗಿ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿವಾದಿಯಾಗಿರುವ ನೀವು ವಕೀಲರನ್ನಿಟ್ಟು ವಾದ ಮಂಡಿಸುತ್ತಿದ್ದೀರಿ. ಹೀಗಿರುವಾಗ ಪತ್ರಿಕಾ ಹೇಳಿಕೆ ನೀಡುವುದು ಸರಿಯೇ? ಎಂದು ಪ್ರಶ್ನಿಸಿ, ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಓದುವಂತೆ ತಿಳಿಸಿದರು. ಆಗ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಹಿರೇಮಠ ಅವರು ಗಟ್ಟಿಯಾಗಿ ಓದಿದರು. ಇದೆಲ್ಲ ನಿಮ್ಮ ಹೇಳಿಕೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಹೀರೇಮಠ್, ನಾನು ನೀಡಿರುವ ಎಲ್ಲ ಅಂಶಗಳು ಪ್ರಕಟವಾಗಿಲ್ಲ, ಕೊಂಚ ಬದಲಾವಣೆಯೊಂದಿಗೆ ಪ್ರಕಟಿಸಲಾಗಿದೆ ಎಂದರು.
ಸತ್ಯಮೇವ ಜಯತೆ: `ಒಂದು ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲಿ ಅದೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆ ನೀಡುವುದು ನ್ಯಾಯಾಂಗ ನಿಂದನೆಯಾಗುತ್ತದೆ.ಕರ್ನಾಟಕ ಹೈಕೋರ್ಟ್ ಇತಿಹಾಸದಲ್ಲಿ ಇದೊಂದು ಕರಾಳ ದಿನ' ಎಂದ ನ್ಯಾಯಮೂರ್ತಿಗಳು, ಸಂವಿಧಾನದ ಅನುಚ್ಛೇದ 215ರ ಪ್ರಕಾರ ನಿಮ್ಮ ಮೇಲೆ ಏಕೆ ನ್ಯಾಯಾಂಗ ನಿಂದನೆ ಕೈಗೊಳ್ಳಬಾರದು? ಎಂದು ಪ್ರಶ್ನಿಸಿ ಉತ್ತರಿಸಲು ಹಿರೇಮಠ್ ಅವರಿಗೆ ಅವಕಾಶ ನೀಡಿದರು. ಸತ್ಯಮೇವ ಜಯತೆ ಎಂದು ಮತ್ತೆ ವಾದ ಮಂಡನೆ ಮುಂದುವರಿಸಿದ ಹಿರೇಮಠ, `ನಾನು ಬಾಲಗಂಗಾಧರ ತಿಲಕ್ ಮತ್ತು ಗಾಂಧೀಜಿಯವರ ಸಿದ್ಧಾಂತಗಳು, ಶರಣರ ವಚನಗಳು ಭಗವದ್ಗೀತೆಯ ತತ್ವಾದರ್ಶಗಳನ್ನು ಅಳವಡಿಸಿಕೊಂಡವ ನಾಗಿದ್ದೇನೆ. ಸುಮಾರು 14 ವರ್ಷ ಅಮೆರಿಕದಲ್ಲಿದ್ದು ಅಲ್ಲಿಂದ ನೇರವಾಗಿ ಭಾರತದ ಹಳ್ಳಿಗೆ ಬಂದು ದೇಶದ ಸಂಪತ್ತು ರಕ್ಷಣೆ ಮಾಡುವುದಕ್ಕೆ ಜವಾಬ್ದಾರಿಯುತವಾಗಿ ಹೋರಾಡುತ್ತಿದ್ದೇನೆ. ಈ ವಿಷಯದಲ್ಲಿ ಪ್ರಾಣ ಬಿಡುವುದಕ್ಕೂ ಸಿದ್ಧ' ಎನ್ನುತ್ತಾ ವಾದವನ್ನು ಮುಕ್ತಾಯಗೊಳಿಸಿದರು. ಎಲ್ಲ ಅಂಶಗಳನ್ನು ಆಲಿಸಿದ ನ್ಯಾಯಪೀಠ,
ನಿಮ್ಮ ವಾದ ಮಂಡನೆಯಿಂದ ನ್ಯಾಯಾಲಯದ ಅಮೂಲ್ಯವಾದ 15 ನಿಮಿಷ ಸಮಯ ವ್ಯರ್ಥವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿ, ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿದರು.
Advertisement