ಜಿಲ್ಲೆಗಳ ಉಸ್ತುವಾರಿ, ಸುಸ್ತು ಭಾರಿ

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಉಸ್ತುವಾರಿ ಸಚಿವರ ನಿಯೋಜನೆ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾರಿ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಉಸ್ತುವಾರಿ ಸಚಿವರ ನಿಯೋಜನೆ  ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾರಿ ಸುಸ್ತುಗೊಳಿಸಿದೆ.

ವಿಶೇಷವಾಗಿ ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ನೇಮಕ ವಿಚಾರ ಕಗ್ಗಂಟಾಗಿ ಉಳಿದಿದ್ದು, ಇನ್ನೂ ಎರಡು ದಿನ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನಾಗಿ ಕೆ.ಜೆ.ಜಾರ್ಜ್ ಅವರನ್ನು ನಿಯೋಜಿಸಲಾಗಿದೆ. ಆದರೆ ಇದಕ್ಕೆ ಬೆಂಗಳೂರು ನಗರದ ಶಾಸಕರು ಹಾಗೂ ಹಿರಿಯ ಮುಖಂಡರಿಂದಲೇ ಆಕ್ಷೇಪ ವ್ಯಕ್ತವಾಗಿದೆ.ಮೆಟ್ರೋ, ಜಲಮಂಡಳಿ, ಬಿಡಿಎ, ಬಿಬಿಎಂಪಿ, ನಗರ ಯೋಜನೆ ಸೇರಿದಂತೆ ಎಲ್ಲ ನಾಗರಿಕ ಸೌಲಭ್ಯ ಸಂಸ್ಥೆಗಳು ಈ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಆದರೆ ಅದನ್ನು ನಿಭಾಯಿಸುವುದಕ್ಕೆ ಬೇಕಾದ ತಾಳ್ಮೆ ಹಾಗೂ ಅರ್ಪಣಾ ಮನೋಭಾವ ಜಾರ್ಜ್ ಅವರಲ್ಲಿಲ್ಲ ಎಂದು ಕೆಲ ಶಾಸಕರು ದೂರಿದ್ದಾರೆ.

ಬೆಂಗಳೂರಿನ ಪೌರ ಸಮಸ್ಯೆಗಳ ವಿಚಾರದಲ್ಲಿ ಅವರಿಗೆ ಅಂಥ ಮಾಹಿತಿ ಇಲ್ಲ. ನಗರೋತ್ಥಾನ, ಕೆಎಂಸಿ ಕಾಯ್ದೆಗಳ ಪರಿಚಯವಿಲ್ಲ. ಹೀಗಿರುವಾಗ ರಾಜಧಾನಿ ಯ ಉಸ್ತುವಾರಿಯನ್ನೂ ಅವರಿಗೆ ನೀಡಿದರೆ ಸಮಸ್ಯೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಅದೇ ರೀತಿ ತುಮಕೂರು ಜಿಲ್ಲಾ ಉಸ್ತುವಾರಿ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ಸಂದಿಗ್ದಕ್ಕೆ ಸಿಲುಕಿದ್ದಾರೆ. ಡಾ.ಜಿ.ಪರಮೇಶ್ವರ ಹಾಗೂ ಟಿ.ಬಿ.ಜಯಚಂದ್ರ ಅವರು  ತುಮಕೂರು ಜಿಲ್ಲಾ ಉಸ್ತುವಾರಿಗೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಈ ಬಗ್ಗೆ ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟವಾಗಬಹುದು.ಉಸ್ತುವಾರಿ ವಿಚಾರದಲ್ಲಿ ಜಿ.ಪರಮೇಶ್ವರ ಅವರು ಶನಿವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಮೂವರಿಗೆ ಉಸ್ತುವಾರಿ: ಈ ಮಧ್ಯೆ ಸಚಿವ ವಿನಯ್ ಕುಲಕರ್ಣಿ ಅವರಿಗೆ ಹುಬ್ಬಳ್ಳಿ-ಧಾರವಾಡ, ಮನೋಹರ್ ತಹಶೀಲ್ದಾರ್ ಅವರಿಗೆ ಹಾವೇರಿ, ಎ.ಮಂಜು ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ. ಬೆಂಗಳೂರು ಉಸ್ತುವಾರಿ ಖಾತೆ ಇನ್ನೂ ರಾಮಲಿಂಗಾ ರೆಡ್ಡಿ ಅವರ ಬಳಿಯೇ ಇದೆ. ಹಾಸನ ಉಸ್ತುವಾರಿಯಿದ್ದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರಿಗೆ ಯಾವುದೇ ಜಿಲ್ಲೆಯ ಜವಾಬ್ದಾರಿ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com