
ಬೆಂಗಳೂರು: ಮೈಸೂರಿನ ಜನರಿಗೆ ಸಿಹಿ ಸುದ್ದಿ. ಸುಮಾರು ಒಂದು ವರ್ಷದ ಬಳಿಕ ಮೈಸೂರು-ಬೆಂಗಳೂರು ನಡುವಿನ ವಿಮಾನ ಸೇವೆ ಸೆ.3ರಂದು ಪುನಃ ಆರಂಭವಾಗಲಿದೆ. ಪ್ರತಿದಿನ ಬೆಳಗ್ಗೆ ಎರಡೂ ನಗರಗಳ ನಡುವೆ ಅಲೆಯನ್ಸ್ ಏರ್ ವಿಮಾನ ಹಾರಾಟ ನಡೆಸಲಿದೆ. ಏರ್ ಇಂಡಿಯಾ ಸಂಸ್ಥೆಯ ನಿಲ್ದಾಣ ವ್ಯವಸ್ಥಾಪಕ ಆರ್.ಕಣ್ಣನ್ ನೇತೃತ್ವದ ತಂಡ ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಸೆ.3ರ ಗುರುವಾರದಿಂದ ವಾರದಲ್ಲಿ 6 ದಿನಗಳ ಕಾಲ ಮೈಸೂರು-ಬೆಂಗಳೂರು ನಡುವೆ ವಿಮಾನ ಸಂಚರಿಸಲಿದೆ.ವೇಳಾಪಟ್ಟಿ : ಏರ್ ಇಂಡಿಯಾದ ಅಲೆಯನ್ಸ್ ಏರ್ ವಿಮಾನವು ಸೆ.3ರಂದು ಬೆಳಗ್ಗೆ 6ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, 6.40ಕ್ಕೆ ಮೈಸೂರಿಗೆ ತಲುಪಲಿದೆ. ಮೈಸೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿರುವ ವಿಮಾನ 7.40ಕ್ಕೆ ಬೆಂಗಳೂರಿಗೆ ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ಮೈಸೂರು-ಬೆಂಗಳೂರು ನಡುವೆ ವಿಮಾನ ಸಂಚಾರ ನಡೆಸಲಿದೆ. ಎಟಿಆರ್ - 72 ವಿಮಾನ ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಆನ್‌ಲೈನ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.
2014ರಲ್ಲಿ ಸ್ಥಗಿತಗೊಂಡಿತ್ತು : ಬೆಂಗಳೂರು-ಮೈಸೂರು ನಡುವಿನ ವಿಮಾನ ಸಂಚಾರ 2014 ಸೆಪ್ಟೆಂಬರ್‌ನಲ್ಲಿ ಸ್ಥಗಿತಗೊಂಡಿತ್ತು. ಸ್ಪೈಸ್ ಜೆಟ್ ಸೆ.5ರಿಂದ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದಕ್ಕೂ ಮೊದಲು ಕಿಂಗ್ ಫಿಷರ್ ವಿಮಾನ ಹಾರಾಟ ಪ್ರಾರಂಭಿಸಿತ್ತು. ಸಂಸ್ಥೆ ನಷ್ಟ ಅನುಭವಿಸಿದ ನಂತರ ಹಾರಾಟ ನಿಲ್ಲಿಸಲಾಗಿತ್ತು ಬುಕ್ಕಿಂಗ್ ಗಾಗಿ 7259579122, 9986938281 ಸಂಪರ್ಕಿಸಬಹುದು.
Advertisement