ನಾಳೆ ಮೈಸೂರು ತಲುಪಲಿರುವ ದಸರಾ ಗಜಪಡೆ

ಆರು ಆನೆಗಳ ಮೊದಲ ತಂಡ ಶುಕ್ರವಾರ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿವೆ. ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ರಾಜ್ಯದಲ್ಲಿ ಬರ ಆವರಿಸಿರುವ ಹಿನ್ನೆಲೆಯಲ್ಲಿ ಈ ಭಾರಿ ಸರಳವಾಗಿ ದಸರಾ ಹಬ್ಬ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಆರು ಆನೆಗಳ ಮೊದಲ ತಂಡ ಶುಕ್ರವಾರ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿವೆ. ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ, ಬಲರಾಮ, ಅಭಿಮನ್ಯು, ಕಾವೇರಿ, ಚೈತ್ರ ಮತ್ತು ವಿಕ್ರಮ ಆನೆಗಳು ಶುಕ್ರವಾರ ಬೇರೆ-ಬೇರೆ ಶಿಬಿರಗಳಿಂದ ಮೈಸೂರಿಗೆ ಆಗಮಿಸಲಿವೆ. ಮೈಸೂರಿನ ಅರಣ್ಯ ಭವನದಲ್ಲಿ ಆನೆಗಳನ್ನು ಸ್ವಾಗತಿಸಲಾಗುತ್ತದೆ.


ಇನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಹರ್ಷ, ಗೋಪಿ, ಪ್ರಶಾಂತ, ದುರ್ಗಾ ಪರಮೇಶ್ವರಿ, ಗೋಪಾಲಸ್ವಾಮಿ ಆನೆಗಳು ಮೈಸೂರಿಗೆ ಆಗಮಿಸಲಿವೆ. 21 ವರ್ಷದ ಕೆಂಚಾಂಬಾ ಆನೆ ಮೊದಲ ಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. ಹಾಸನದ ಆಲೂರು ಬಳಿ ಇದನ್ನು ಸೆರೆ ಹಿಡಿಯಲಾಗಿತ್ತು. ಈ ಬಾರಿಯ ದಸರಾದಲ್ಲಿ ಬಲರಾಮನಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. 13 ಬಾರಿ ಅಂಬಾರಿ ಹೊತ್ತು ಅನುಭವವಿರುವ ಬಲರಾಮ ಈ ಬಾರಿ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸಲಿದ್ದಾನೆ. ಪಟ್ಟದ ಆನೆ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಗಜೇಂದ್ರ ಕೆಲವು ತಿಂಗಳ ಹಿಂದೆ ಕಾವಾಡಿಯನ್ನು ಕೊಂದು ಹಾಕಿದ್ದು, ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುತ್ತಿಲ್ಲ.

ವಿವಿಧ ಶಿಬಿರಗಳಲ್ಲಿರುವ ಆನೆಗಳು ಶುಕ್ರವಾರ ಬೆಳಗ್ಗೆ ಅಲ್ಲಿಂದ ಹೊರಡಲಿವೆ. ಲಾರಿಯ ಮೂಲಕ ಮೈಸೂರಿಗೆ ಆಗಮಿಸುವ ಆನೆಗಳನ್ನು ಅರಣ್ಯ ಭವನದಲ್ಲಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 14ರಿಂದ ದಸರಾ ಆಚರಣೆಗಳು ಆರಂಭವಾಗಲಿದ್ದು, ಅಕ್ಟೋಬರ್ 23ರ ಶುಕ್ರವಾರ ವಿಜಯದಶಮಿ ಇದೆ. ಅಂದೇ ಜಂಬೂ ಸವಾರಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com