ಜೆಡಿಎಸ್-ಪಕ್ಷೇತರರ ಟೂರು ಜೋರು
ಬೆಂಗಳೂರು: ಬಿಬಿಎಂಪಿ ಚುನಾವಣೆಗಿಂತ ಮೇಯರ್ ಚುನಾವಣೆ ಹೆಚ್ಚು ರಂಗೇರುತ್ತಿದ್ದು, ಜೆಡಿಎಸ್, ಕಾಂಗ್ರೆಸ್ ನಡುವೆ ಮಾತುಕತೆ ಶಾಸ್ತ್ರ ಮುಂದುವರಿದಿದೆ. ಹಾಗೆಯೇ ಎರಡೂ ಪಕ್ಷಗಳ ಸದಸ್ಯರು ಹಾಗೂ ಮುಖಂಡರ ರೆಸಾರ್ಟ್ ರಾಜಕೀಯ ಕೂಡ ಎಂದಿನಂತೆ ಸಾಗಿದೆ. ಕಾಂಗ್ರೆಸ್ ತೆಕ್ಕೆಯಲ್ಲಿರುವ 6ಮಂದಿ ಪಕ್ಷೇತರರು ರೆಸಾರ್ಟ್‍ನಲ್ಲಿ ಪ್ರತಿ ಕ್ಷಣವೂ ಆನಂದ ಅನುಭವಿಸುತ್ತಿದ್ದಾರೆ.
ಜೆಡಿಎಸ್ ಸದಸ್ಯರೂ ತಮ್ಮದೇ ಲೋಕದಲ್ಲಿ ತೇಲುತ್ತಿದ್ದಾರೆ. ಪಕ್ಷೇತರ ಸದಸ್ಯರಾದ ಸಗಾಯಪುರದ ವಿ. ಏಳುಮಲೈ, ಹೊಯ್ಸಳನಗರದ ಎಸ್. ಆನಂದಕುಮಾರ್, ಮಾರತ್‍ಹಳ್ಳಿ-ಎನ್. ರಮೇಶ್, ದೊಮ್ಮಲೂರು ಸಿ.ಆರ್. ಲಕ್ಷ್ಮಿ ನಾರಾಯಣ್, ಕೊನೇನ ಅಗ್ರಹಾರ-ಎಂ. ಚಂದ್ರಪ್ಪ ರೆಡ್ಡಿ ಹಾಗೂ ಕೆಂಪಾಪುರ ಅಗ್ರಹಾರದ ಎಂ. ಗಾಯತ್ರಿ ಅವರು ಕೊಚ್ಚಿಯ ರೆಸಾರ್ಟ್‍ನಲ್ಲಿ ವಾಸ್ತವ್ಯ ಮುಂದುವರಿಸಿದ್ದು, ಪಕ್ಷೇತರರು ರೆಸಾರ್ಟ್‍ನಲ್ಲಿ ಭಕ್ಷ ಭೋಜನ ಮತ್ತು ಮನಮೋಹಕ ರಂಜನೆಹಳಲ್ಲಿ ಮುಳುಗೇಳುತ್ತಿದ್ದಾರೆ. ಇವರ ಎಲ್ಲಾ ಸುಖವನ್ನು ಹೆಚ್ಚಿಸುವ ಹೊಣೆಯನ್ನು ಶಾಸಕರಾದ ಭೈರತಿ ಸುರೇಶ್ ಹಾಗೂ ಎಸ್.ಟಿ. ಸೋಮಶೇಖರ್ ಮತ್ತು ಮುನಿರತ್ನ ನೋಡಿಕೊಳ್ಳುತ್ತಿದ್ದಾರೆ.
ಅದೇ ರೀತಿ ಜೆಡಿಎಸ್‍ನ 14 ಸದಸ್ಯರ ರೆಸಾರ್ಟ್ ರಸತಾಣ ಕೂಡ ಕೊಚ್ಚಿಯಲ್ಲೇ ಮುಂದುವರಿದಿದ್ದು, ಇವರು ಪಕ್ಷೇತರರ ತಾಣದಿಂದ 30 ಕಿ.ಮೀ. ದೂರ ಐಷಾರಾಮಿ ರೆಸಾರ್ಟ್‍ನಲ್ಲಿದ್ದಾರೆ. ಇವರು ಕೂಡ ನಿತ್ಯ ಒಂದಲ್ಲ ಒಂದು ಕಡೆ ಪ್ರವಾಸ ಮುಗಿಸಿ ರಸತಾಣಕ್ಕೆ ವಾಪಸ್ಸಾಗುತ್ತಿದ್ದಾರೆ. ಇವರ ಸುಖ ಕಾಯ್ದುಕೊಳ್ಳುವ ಹೊಣೆಯನ್ನು ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಮತ್ತು ಗೋಪಾಲಯ್ಯ ವಹಿಸಿಕೊಂಡಿದ್ದಾರೆ. ಈ ಎಲ್ಲಾ ರೆಸಾರ್ಟ್ ರಾಜಕಾರಣಿಗಳೂ ಮೇಯರ್ ಚುನಾವಣೆ ನಡೆಯುವ ಸೆ.11ರ ಹಿಂದಿನ ದಿನ ನಗರಕ್ಕೆ ವಾಪಸ್ಸಾಗಲಿದ್ದಾರೆ. ಆದರೆ, ಇದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಂದೇಶ ರವಾನೆಯಾಗಬೇಕು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ