ಬೆಂಗಳೂರು ಸಂಚಾರಿ ಪೊಲೀಸರೀಗ ಮತ್ತಷ್ಟು ಸ್ಮಾರ್ಟ್

ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ನಾಗರೀಕರ ಸಹಕಾರದಲ್ಲೇ ಕಡಿವಾಣ ಹಾಕಲು ಮುಂದಾಗಿರುವ ಸಂಚಾರ ಪೊಲೀಸರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ನಾಗರೀಕರ ಸಹಕಾರದಲ್ಲೇ ಕಡಿವಾಣ ಹಾಕಲು ಮುಂದಾಗಿರುವ ಸಂಚಾರ ಪೊಲೀಸರು `ಪಬ್ಲಿಕ್ ಐ' ಹೆಸರಿನ ಸ್ಮಾರ್ಟ್ ಫೋನ್ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಜನಾಗ್ರಹ ಸಂಸ್ಥೆ ಅಭಿವೃದಿದ್ಧಿಪಡಿಸಿರುವ ಈ ಆ್ಯಪನ್ನು ಆ್ಯಂಡ್ರಾಯ್ಡ್ ಫೋನ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಫೋಟೊ ಕ್ಲಿಕ್ಕಿಸಿ, ಅದನ್ನು ಆ್ಯಪ್‍ನಲ್ಲಿ ಅಪ್ ಲೋಡ್ ಮಾಡಿದರೆ ಸಾಕು. 48 ತಾಸಿನ ಒಳಗೆ ಸಂಚಾರ ಪೊಲೀಸರು ಕೇಸ್ ದಾಖಲಿಸಿ ನೋಟಿಸ್ ನೀಡುತ್ತಾರೆ. ಸಂಚಾರ ನಿಯಮಗಳ ಪಾಲನೆ, ಸಂಚಾರ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಲು ಅಭಿವೃದ್ಧಿಪಡಿಸಲಾಗಿರುವ ಈ ಆ್ಯಪ್‍ಗೆ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಖ್ ಅವರು ಗುರುವಾರ ಅಧಿಕೃತವಾಗಿ ಚಾಲನೆ ನೀಡಿದರು.

2012ರ ನ.21ರಂದು ಪಬ್ಲಿಕ್ ಐ ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ನಾಗರೀಕರಿಗೆ ಇದರ ಬಳಕೆ ಕಠಿಣವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಬರೀ 29 ಸಾವಿರ ದೂರುಗಳು ಬಂದಿವೆ. ಹೀಗಾಗಿ ಬಳಕೆದಾರರ ಸ್ನೇಹಿಯಾಗಿಸಲು ಆ್ಯಪ್‍ನ ರೂಪ ಕೊಡಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಎಂ.ಎ.ಸಲೀಂ ತಿಳಿಸಿದರು.
ಪ್ರತ್ಯೇಕ ಆ್ಯಪ್: ಈ ಆ್ಯಪ್ ಡೌನ್‍ಲೋಡ್ ಮಾಡಿ ಒಮ್ಮೆ ತಮ್ಮ ವಿವರ ತುಂಬಿದರೆ ಸಾಕು. ಎಷ್ಟು ಸಲ ಬೇಕಾದರೂ ಫೋಟೋ ತೆಗೆದು ಅಪ್‍ಲೋಡ್ ಮಾಡಬಹುದು. ದೂರುಗಳ ಪರಿಶೀಲನೆ, ಕೇಸ್ ದಾಖಲಿಸಲು ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ. ದೂರುದಾರರ ಹೆಸರು ಗೌಪ್ಯವಾಗಿಡುವ ಪೊಲೀಸರು, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುತ್ತಾರೆ. ನೋಂದಣಿ ಸಂಖ್ಯೆಯ ಆಧಾರದ ಮೇಲೆ ಸಾರಿಗೆ ಇಲಾಖೆಯಿಂದ ಮಾಲೀಕನ ವಿಳಾಸ ಪತ್ತೆ ಮಾಡಿ ನೋಟಿಸ್ ನೀಡುತ್ತಾರೆ.

5,000 ವಾಹನಕ್ಕೆ ಒಬ್ಬ ಪೊಲೀಸ್: ನಗರದಲ್ಲಿ ಸದ್ಯ ಸರಿ ಸುಮಾರು 56 ಲಕ್ಷ ವಾಹನಗಳಿವೆ. ನಗರದಲ್ಲಿರುವ ಸಂಚಾರ ಪೊಲೀಸರಿಗೆ ಲೆಕ್ಕ ಹಾಕಿದರೆ ತಲಾ ಐದು ಸಾವಿರ ವಾಹನಗಳ ಮೇಲೆ ಒಬ್ಬ ಕಾನ್ ಸ್ಟೆಬಲ್ ಇದ್ದಂತೆ. ಎಲ್ಲರ ಮೇಲೂ ಪೊಲೀಸರು ನಿಗಾ ಇರಿಸಲಾಗದು. ಹೀಗಾಗಿ, ಸಾರ್ವಜನಿಕರ ಸಹಯೋಗದಲ್ಲಿ ನಗರ ಸಾರಿಗೆ ನಿಯಮ ಪಾಲನೆ ಸುಸೂತ್ರಗೊಳಿಸುವ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂದು ಎಂದು ಸಲೀಂ ವಿವರಿಸಿದರು. ನಾಗರಿಕರು ಮಾತ್ರವಲ್ಲದೆ ನಗರದಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿಯೂ ಅಂದರೆ ಪಿಸಿ ಟು ಪಿಸಿ' (ಪೊಲೀಸ್ ಕಾನ್ಸ್‍ಟೇಬಲ್ ಟು ಪೊಲೀಸ್ ಕಮಿಷನರ್) ಈ ಆ್ಯಪ್ ಬಳಸಬೇಕು ಎಂದು ಆಯುಕ್ತ ಮೇಘರಿಖ್ ವಿನಂತಿಸಿದರು. ಜನಾಗ್ರಹ ಸಹ ಸಂಸ್ಥಾಪಕಿ ಸ್ವಾತಿ ರಾಮ ನಾಥ್, ನಗರ ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತನಿಖೆಗೆ ಪೂರಕವಾಗಿಲ್ಲ ಮಾಹಿತಿ: ಟ್ವಿಟರ್ ಹಾಗೂ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಸಾಕಷ್ಟು ದೂರುಗಳು ಬರುತ್ತಿವೆ. ಆದರೆ, ತನಿಖೆಗೆ ಪೂರಕವಾಗುವಂತ ಮಾಹಿತಿಗಳನ್ನು ದೂರುದಾರರು ಒದಗಿಸುತ್ತಿಲ್ಲ. ಈ ಆ್ಯಪ್ ಆ ಸಮಸ್ಯೆ ಪರಿಹರಿಸಲಿದೆ ಎನ್ನುತ್ತಾರೆ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಖ್. ಹಿಂದಿನ ಆ್ಯಪ್ ಹೀಗಿತ್ತು: ಬಿಟಿಪಿ ಹೆಸರಿನಲ್ಲಿ ಈಗಾಗಲೇ ಇರುವ ಮೊಬೈಲ್ ಆ್ಯಪ್‍ನ ಒಂದು ಆಯ್ಕೆಯಾಗಿ ಪಬ್ಲಿಕ್ ಐ ಇತ್ತು. ಫೋಟೋ  ಅಪ್‍ಲೋಡ್ ಮಾಡಬೇಕಾದರೆ ಮೊದಲು ಬಿಟಿಪಿ ಆ್ಯಪ್‍ಗೆ ಹೋಗಿ ಅಲ್ಲಿಂದ ಪಬ್ಲಿಕ್ ಐ ಆಯ್ಕೆ ಮಾಡಿಕೊಳ್ಳಬೇಕಿತ್ತು. ಬಳಿಕ ತಮ್ಮ ಹೆಸರು, ಮೊಬೈಲ್ ಸಂಖ್ಯೆ, ದೂರಿನ ವಿವರಗಳನ್ನು ನೀಡಿ ಫೋಟೋ  ಅಪ್‍ಲೋಡ್ ಮಾಡಬೇಕಿತ್ತು. ಈ ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತಿದ್ದ ಕಾರಣ ಸಾರ್ವಜನಿಕರ ಪ್ರತಿಕ್ರಿಯೆ ಅಷ್ಟಕಷ್ಟೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com