ಪ್ರಧಾನಿ ಸಂವಾದ ತಂದ ಖುಷಿ : ಲಿಟ್ಲ್ ಫ್ಲವರ್ ಶಾಲೆ ವಿದ್ಯಾರ್ಥಿಗಳು

ದೇಶದ ಪ್ರಧಾನ ಮಂತ್ರಿಯೊಂದಿಗೆ ಮನ ಬಿಚ್ಚಿ ಮಾತನಾಡುವ ಅವಕಾಶ ಪಡೆದುಕೊಂಡ ಬೆಂಗಳೂರಿನ ಎರಡು ಶಾಲೆಯ ವಿದ್ಯಾರ್ಥಿಗಳಿಗೆ ಜಗತ್ತೇ ಗೆದ್ದಷ್ಟು ಖುಷಿ...
ಪ್ರಧಾನಿ ಮೋದಿ ಮತ್ತು ವಿದ್ಯಾರ್ಥಿಗಳ ಸಂವಾದದಲ್ಲಿ ಬೆಂಗಳೂರು ಶಾಲೆ ವಿದ್ಯಾರ್ಥಿಗಳು
ಪ್ರಧಾನಿ ಮೋದಿ ಮತ್ತು ವಿದ್ಯಾರ್ಥಿಗಳ ಸಂವಾದದಲ್ಲಿ ಬೆಂಗಳೂರು ಶಾಲೆ ವಿದ್ಯಾರ್ಥಿಗಳು
Updated on

ಬೆಂಗಳೂರು: ದೇಶದ ಪ್ರಧಾನ ಮಂತ್ರಿಯೊಂದಿಗೆ ಮನ ಬಿಚ್ಚಿ ಮಾತನಾಡುವ ಅವಕಾಶ ಪಡೆದುಕೊಂಡ ಬೆಂಗಳೂರಿನ ಎರಡು ಶಾಲೆಯ ವಿದ್ಯಾರ್ಥಿಗಳಿಗೆ ಜಗತ್ತೇ ಗೆದ್ದಷ್ಟು ಖುಷಿ.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ  ನರೇಂದ್ರ ಮೋದಿಯವರು ಹಮ್ಮಿಕೊಂಡ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲು ಬೆಂಗಳೂರಿನ ನ್ಯೂ ಹೊರೈಜನ್ ಮತ್ತು ಲಿಟ್ಲ್ ಫ್ಲವರ್ ಶಾಲೆಯ 6 ಮಕ್ಕಳಿಗೆ ಅವಕಾಶ ಲಭ್ಯವಾಗಿತ್ತು.

ಈ ಪೈಕಿ ಹೊಸಕರೆಹಳ್ಳಿಯ ಲಿಟ್ಲ್ ಫ್ಲವರ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಆತ್ಮಿಕ್ ಅಜೋಯ್ ಪ್ರಧಾನಿಗೆ ಪ್ರಶ್ನೆ ಕೇಳಿ ಉತ್ತರ ಪಡೆದು ಕೊಂಡರು. `ಇತ್ತೀಚಿನ ದಿನಗಳಲ್ಲಿ ಯುವಕರು ಬೋಧನಾ ವೃತ್ತಿ ಆರಿಸಿಕೊಳ್ಳಲು ಆಸಕ್ತಿ ವಹಿಸುತ್ತಿಲ್ಲ. ಆದರೆ, ವಿದ್ಯಾರ್ಥಿಗಳು ಮಾತ್ರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಂತಹ ಶಿಕ್ಷಕರನ್ನು ಅಪೇಕ್ಷಿಸುತ್ತಿದ್ದಾರೆ. ನೀವು ಈ ಅಪೇಕ್ಷೆಯನ್ನು ಈಡೇರಿಸಲು ಸಾಧ್ಯವೇ?' ಎಂಬುದು ಆತ್ಮಿಕ್ ಪ್ರಶ್ನೆಯಾಗಿತ್ತು. ಪ್ರಧಾನಿಯವರ ಉತ್ತರಕ್ಕೆ ತೃಪ್ತಿ ವ್ಯಕ್ತಪಡಿಸಿದ ಆತ್ಮಿಕ್, ನಾನು ಪ್ರಧಾನಿಯವರೊಂದಿಗೆ ಮಾತನಾಡುತ್ತೇನೆ ಎಂದೆಣಿಸಿರಲಿಲ್ಲ. ಬಹಳ ಖುಷಿ ಆಯಿತು. ಅವರು ಉತ್ತರ ನೀಡಿದ ಬಗೆ ಮೆಚ್ಚುಗೆಯಾಯಿತು ಎಂದು ಅಬಿsಪ್ರಾಯಪಟ್ಟ.

ಅದೇ ರೀತಿ, ಸ್ವಚ್ಛ ಭಾರತಕ್ಕೆ ಸರ್ಕಾರದ ಪಾಲುದಾರಿಕೆ ಏನೆಂಬ ಪ್ರಶ್ನೆಗೆ, ಪ್ರಧಾನಿಯವರು ಸಾರ್ವಜನಿಕರ ಪಾಲು ದಾರಿಕೆಯೂ ಮುಖ್ಯವಾಗುತ್ತದೆ. ಎರಡೂ ವರ್ಗ ಒಟ್ಟಿಗೆ ಹೆಜ್ಜೆ ಇಟ್ಟಾಗಲಷ್ಟೇ ಸ್ವಚ್ಛ ಭಾರತವಾಗಲು ಸಾಧ್ಯ ಎಂದು ನೀಡಿದ ಉತ್ತರ ಮಕ್ಕಳಲ್ಲಿ ಖುಷಿ ತಂದಿದೆ. ಅದೇ ರೀತಿ ಈ ಹಿಂದೆ ಸ್ವಚ್ಛ ಭಾರತಕ್ಕೆ ಸಂಬಂಧಿಸಿದಂತೆ ಮೊಬೈಲ್ ಆಪ್ ರಚಿಸಿ ತಮ್ಮ ಮುಂದೆ ಪ್ರಸ್ತಾಪಿಸಿದ್ದ ವಿದ್ಯಾರ್ಥಿಗಳನ್ನು ಕಂಡ ಮೋದಿಯವರು, ವಿದ್ಯಾರ್ಥಿಗಳ ಗುರುತು ಹಿಡಿದರು. ಇದರಿಂದ ಪುಳಕಿತರಾದ ವಿದ್ಯಾರ್ಥಿಗಳು, ನಿಮಗೆ ಹೇಗೆ ಗುರುತಿಸಲು ಸಾಧ್ಯವಾಯಿತೆಂದು ಅಚ್ಚರಿಪಟ್ಟರು.

ಸ್ವಸ್ತಿ ಪಿ.ರಾವ್, ಸಂಜನಾ, ನಿತೀಶ್ ಶಾಸ್ತ್ರಿ, ಅನುಪಮಾ, ಮಹಿಮಾ ಅವರು ಸಂವಾದದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು. ದೇಶದ ಪ್ರಧಾನಿಯವ ರೊಬ್ಬರು ನಮ್ಮೊಂದಿಗೆ ಆತ್ಮೀಯತೆಯಿಂದ ಮಾತನಾಡಿದ್ದು ನಮ್ಮ ಜೀವನದ ಅಪರೂಪದ ಘಳಿಗೆ ಎಂದು ಭಾವಿಸುತ್ತೇವೆ ಎಂದು ಅಭಿಪ್ರಾಯ ಹಂಚಿಕೊಂಡರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಆತ್ಮಿಕ್ ಆರೋಗ್ಯವನ್ನು ಪ್ರಧಾನಿಯವರು ಸಂವಾದದ ತರುವಾಯ ವಿಚಾರಿಸಿದ್ದು ಹಲವರನ್ನು ಹುಬ್ಬೇರಿ ಸುವಂತೆ ಮಾಡಿತು.

ಕೈಕೊಟ್ಟ ವಿದ್ಯುತ್
ಬೆಂಗಳೂರಿನ ಅನೇಕ ಸರ್ಕಾರಿ ಶಾಲೆಯಲ್ಲಿ ಪ್ರಧಾನಿ-ವಿದ್ಯಾರ್ಥಿಗಳ ನಡುವಿನ ಸಂವಾದ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ವಿದ್ಯುತ್ ಕೈ ಕೊಟ್ಟಿದ್ದರಿಂದ ವಿದ್ಯಾರ್ಥಿಗಳು ನಿರಾಸೆ ಪಡಬೇಕಾಯಿತು. ವಿದ್ಯುತ್ ವ್ಯತ್ಯಯದಿಂದ ಬಹತೇಕ ಕಡೆ 90 ನಿಮಿಷದ ಕಾರ್ಯಕ್ರಮದಲ್ಲಿ  15 ನಿಮಿಷವಷ್ಟೆ ವೀಕ್ಷಿಸಲು ಸಾಧ್ಯವಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com