
ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ದಾಖಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ತನಿಖೆಯಲ್ಲಿ ಸಿಐಡಿ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೊದಲನೇ ಪ್ರಕರಣದಲ್ಲಿ ಸ್ವಾಮೀಜಿ ಅವರು ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿ ಮೊದಲ ಬಾರಿಗೆ 2014ರ ಆ.28ರಂದು ದೂರು ದಾಖಲಾಗಿತ್ತು. ದೂರು ದಾಖಲಾಗಿ ಬರೋಬ್ಬರಿ ಒಂದು ವರ್ಷ ಕಳೆದರೂ ಸಿಐಡಿ ಪ್ರಕರಣದ ಕುರಿತು ವರದಿಯಾಗಲೀ ಅಥವಾ ಚಾರ್ಜ್‍ಶೀಟ್ ಆಗಲಿ ಇನ್ನು ದಾಖಲಾಗಿಲ್ಲ.
ಪ್ರಕರಣ ರದ್ದು ಪಡಿಸುವಂತೆ ಕೋರಿ ಸ್ವಾಮೀಜಿ ಹೈಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿ ದಾಖಲಿಸಿದ ವೇಳೆ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪೊ್ರ.ರವಿವರ್ಮ ಕುಮಾರ್ ಅವರು, `ಪ್ರಕರಣ ಕುರಿತಂತೆ ಸಿಐಡಿ ತನಿಖೆ ಸದ್ಯದಲ್ಲೇ ಮುಕ್ತಾಯವಾಗಲಿದೆ. ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ಪ್ರಾಸಿಕ್ಯೂಶನ್ ವಾದಕ್ಕೆ ಪೂರಕವಾಗಿದೆ.
ಡಿಎನ್‍ಎ ಪರೀಕ್ಷೆ ವರದಿ ಕೂಡ ಪ್ರಾಸಿಕ್ಯೂಶನ್ ವಾದವನ್ನು ದೃಢಪಡಿಸುತ್ತಿರುವುದರಿಂದ ಈ ಅರ್ಜಿ ಪುರಸ್ಕರಿಸಬಾರದು' ಎಂದು ವಾದ ಮಂಡಿಸಿದ್ದರು. ನಿಧಾನವೇ ಪ್ರಧಾನ: ಇಷ್ಟೆಲ್ಲದರ ಮಧ್ಯೆ ಪ್ರಕರಣದ ತನಿಖೆ ಮಂದಗತಿಯಲ್ಲಿ ಸಾಗುತ್ತಿರುವುದಾಗಿ ಅತ್ಯಾಚಾರ ಸಂತ್ರಸ್ಥೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದರು.
ಈ ಕುರಿತು ಆಯೋಗದ ಅಧ್ಯಕ್ಷೆಗೆ ಲಲಿತಾ ಕುಮಾರಮಂಗಳಂ ಬೆಂಗಳೂರಿಗೆ ಆಗಮಿಸಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಅಂದು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ಲಲಿತಾ ಅವರು ವಿಚಾರಿಸಿದಾಗ ಪ್ರಕರಣ ಕೊನೆಯ ಹಂತದಲ್ಲಿದ್ದು, ಒಂದು ವಾರದ ಒಳಗಾಗಿ ಚಾಜ್ರ್ ಶೀಟ್ ದಾಖಲಿಸುವುದಾಗಿ ಭರವಸೆ ನೀಡಿದ್ದರು.
ಆದರೆ, ತಿಂಗಳು ಕಳೆದರೂ ಸಿಐಡಿ ಮಾತ್ರ `ಚಾರ್ಜ್' ಆಗಲೇ ಇಲ್ಲ. ಸದ್ಯ ಸ್ವಾಮೀಜಿ ವಿರುದ್ಧ ಎರಡನೇ ಬಾರಿ ಅತ್ಯಾಚಾರ ಆರೋಪ ದಾಖಲಾಗಿದ್ದು, ಇದನ್ನು ಕೂಡ ಸಿಐಡಿಗೆ ಒಪ್ಪಿಸಲಾಗಿದೆ. ಮೊದಲ ಪ್ರಕರಣದಂತೆ ಈ ಪ್ರಕರಣ ತನಿಖೆ ಕೂಡ ವಿಳಂಬ ಮಾಡುವ ಮೂಲಕ ಸಿಐಡಿ ಅಧಿಕಾರಿಗಳು ಹಳ್ಳ ಹಿಡಿಸುತ್ತಾರಾ ಎಂಬ ಅನುಮಾನಗಳು ಕಾಡಲಾರಂಭಿಸಿವೆ.
ಬಂಧನದಿಂದ ನಿರಂತರ ಬಚಾವ್: ಪ್ರಕರಣಗಂಭೀರ ಸ್ವರೂಪದ್ದಾಗಿದ್ದರೂ ಅತ್ಯಾಚಾರ ಪ್ರಕರಣದಲ್ಲಿ ಸ್ವಾಮೀಜಿಗೆ ಕೆಲವರು ಸಹಕರಿಸಿದ್ದಾರೆಂದು ದೂರು ದಾಖಲಾದರೆ ಸರ್ಕಾರದ ಪರ ಎಸ್‍ಪಿಪಿ ನಿರೀಕ್ಷಣಾ ಜಾಮೀನು ನೀಡಬಹುದೆಂದು ಪೀಠದ ಮುಂದೆ ವಾದ ಮಂಡಿಸುತ್ತಾರೆ. ಅದಕ್ಕೆ ಪುಷ್ಟಿ ನೀಡುವಂತೆ ಮತ್ತೊಂದೆಡೆ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವೀ ಆಗುತ್ತಾರೆ.
ಇದೆಲ್ಲವನ್ನು ಗಮನಿಸಿದರೆ `ಹೈ ಪ್ರೊಫೈಲ್' ಎಂಬ ಪಟ್ಟಿ ಹೊಂದಿದವರು ಮಾತ್ರ ಬಚಾವ್ ಆಗಲೂ ಸಾಧ್ಯ ಎಂಬ ಶಂಕೆ ಕಾಡುತ್ತದೆ. ಎರಡನೇ ಬಾರಿ ಅತ್ಯಾಚಾರ ಪ್ರಕರಣ ದಾಖಲಾದರೂ ಆರೋಪಿಯನ್ನು ಬಂಧಿಸಬೇಕಾದ ಕೈಗಳು ಯಾವುದೋ ಒತ್ತಡಕ್ಕೆ ಮಣಿದು ಕೈಕಟ್ಟಿ ಕುಳಿತಿವೆಯೇ ಎಂಬ ಅನುಮಾನ ವ್ಯಕ್ತವಾಗುತ್ತದೆ.
ಪ್ರಕರಣ ನಡೆದು ಬಂದ ಹಾದಿ
Advertisement