ಪಂಪ ಪ್ರಶಸ್ತಿ ವಾಪಸ್ ಮಾಡಿದ ಚಂಪಾ

ಸಂಶೋಧಕ ಡಾ ಎಂ ಎಂ ಕಲಬುರ್ಗಿ ಹತ್ಯೆ ರಾಜ್ಯದ ಸಾಹಿತ್ಯಲೋಕದಲ್ಲಿ ಮಾತ್ರವಲ್ಲ, ದೇಶದೆಲ್ಲೆಡೆ ಸಂಚಲನ ಮೂಡಿಸಿದೆ. ಹತ್ಯೆ ಖಂಡಿಸಿ ನಿತ್ಯ ಹತ್ತಾರು...
ಡಾ. ಚಂದ್ರಶೇಖರಪಾಟೀಲ್
ಡಾ. ಚಂದ್ರಶೇಖರಪಾಟೀಲ್

ಬೆಂಗಳೂರು: ಸಂಶೋಧಕ ಡಾ ಎಂ ಎಂ ಕಲಬುರ್ಗಿ ಹತ್ಯೆ ರಾಜ್ಯದ ಸಾಹಿತ್ಯಲೋಕದಲ್ಲಿ ಮಾತ್ರವಲ್ಲ, ದೇಶದೆಲ್ಲೆಡೆ ಸಂಚಲನ ಮೂಡಿಸಿದೆ. ಹತ್ಯೆ ಖಂಡಿಸಿ ನಿತ್ಯ ಹತ್ತಾರು ಪ್ರತಿಭಟನೆಗಳು ವ್ಯಕ್ತವಾಗುತ್ತಿರುವ ನಡುವೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಸಾಹಿತಿ ಡಾ. ಚಂದ್ರಶೇಖರಪಾಟೀಲರು ತಮಗೆ ರಾಜ್ಯ ಸರ್ಕಾರ ಪ್ರದಾನ ಮಾಡಿದ್ದ ಪಂಪ ಪ್ರಶಸ್ತಿಯನ್ನು ಅಧಿಕೃತವಾಗಿ ಹಿಂದಿರುಗಿಸಿದ್ದಾರೆ. ಸೋಮವಾರ ಸಂಜೆ ಕನ್ನಡ, ಸಂಸ್ಕೃತಿ ಇಲಾಖೆಗೆಆಗಮಿಸಿದ ಚಂಪಾ ಅವರು ಇಲಾಖೆ ನಿರ್ದೇಶಕ ಕೆ ಎ ದಯಾನಂದ ಅವರನ್ನು ಭೇಟಿ ಮಾಡಿ ಪಂಪ ಪ್ರಶಸ್ತಿ, ನಗದು, ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ಗಳನ್ನು ವಾಪಸ್ ನೀಡಿದರು. ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಬನವಾಸಿ ಯಲ್ಲಿ 2011ರ ಡಿ. 2ರಂದು ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಅವರು 23ನೇ ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಪ್ರಶಸ್ತಿ ಹಿಂದಿರುಗಿಸಿದ ಬಳಿಕ ಮಾತನಾಡಿದ ಡಾ.ಚಂಪಾ, ``ಕೇವಲ ಕಲಬುರ್ಗಿ ಅವರ ಹತ್ಯೆ ಮಾತ್ರವಲ್ಲ, ಇಡೀ ದೇಶದಲ್ಲಿ ವೈಚಾರಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹತ್ಯೆ, ವಿಷಯುಕ್ತ ವಾತಾವರಣ ಖಂಡಿಸಿ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತಿದ್ದೇನೆ. ಆದಿಕವಿ ಪಂಪ ಮತ್ತು ನನ್ನ ಹೆಸರು ಚಂಪಾ ಎಂದಿರುವುದರಿಂದ ಈ ಪ್ರಶಸ್ತಿ ಮೇಲೆ ತುಂಬಾ ಗೌರವವಿದೆ. ಆದರೆ, ಬಹಳ ನೋವು ಮತ್ತು ಸಿಟ್ಟಿನಿಂದ ದೃಢ ನಿರ್ಧಾರ ಕೈಗೊಂಡಿದ್ದೇನೆ'' ಎಂದರು.

ಸರ್ಕಾರಕ್ಕೆ ಮೂರು ಬೇಡಿಕೆ: ಡಾ. ಕಲಬುರ್ಗಿ ಅವರ ಹತ್ಯೆ ತನಿಖೆ ಚುರುಕುಗೊಳಿಸಿ ಹಂತಕರನ್ನು ಪತ್ತೆ ಹಚ್ಚಿ ಅವರ ಹಿಂದಿರುವ ಕರಾಳ ಶಕ್ತಿಗಳನ್ನು ಬಯಲಿಗೆಳೆ ಯಬೇಕು. ಮೂರು ವರ್ಷಗಳ ಹಿಂದೆ ಕಲಬುರ್ಗಿಯಲ್ಲಿ ನಡೆದಿದ್ದ ವಿಚಾರವಾದಿ, ಸಾಹಿತಿ ನಿಂಗಣ್ಣ ಸತ್ಯಂಪೇಟೆ ಅವರ ಹತ್ಯೆ ಪ್ರಕರಣ ತನಿಖೆಗೆ ಮರು ಜೀವ ನೀಡಬೇಕು ಹಾಗೂ ಹಂತಕರನ್ನು ಬಂಧಿಸಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಮೌಢ್ಯವಿರೋಧಿ ವಿಧೇಯಕ ಮಂಡನೆಯಾಗಬೇಕು ಎಂಬುದು ತಮ್ಮ ಆಶಯ ಹಾಗೂ ಸರ್ಕಾರಕ್ಕೆ ಮೂರು ಬೇಡಿಕೆಗಳು ಎಂದ ಅವರು, ರಾಜ್ಯ ಸರ್ಕಾರ ಕಾಳಜಿ ವಹಿಸಿ ವಿಶೇಷ ಅಧಿವೇಶನ ಕರೆದು ಸರ್ವಪಕ್ಷಗಳಿಂದ ವಿಧೇಯಕ ಮಂಡಿಸಿ ಅನುಮೋದನೆಪಡೆಯಬೇಕೆಂದರು.ಒಂದು ವೇಳೆ ಸರ್ಕಾರ ತಮ್ಮ ಆಶಯಗಳನ್ನು ಈಡೇರಿಸಿದರೆ ಪ್ರಶಸ್ತಿಯನ್ನು ಮತ್ತೆ ಸ್ವೀಕರಿಸುವಿರಾ
ಎಂಬ ಪ್ರಶ್ನೆಗೆ, ಅದು ಮುಂದಿನ ಮಾತು. ನಾನು ಇವತ್ತು ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ. ನಾಳೆ ಏನಾಗುವುದೋ ಯಾರಿಗೆ ಗೊತ್ತು ನೋಡೋಣ ಎಂದಷ್ಟೇ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ ಎ ದಯಾನಂದ ಮಾತನಾಡಿ, ಇದೊಂದು ನೋವಿನ ವಿಚಾರವಾಗಿದ್ದು, ಕಳವಳವನ್ನುಂಟು ಮಾಡಿದೆ. ಇದೇ ಮೊದಲ ಬಾರಿಗೆ
ಪ್ರಶಸ್ತಿಯನ್ನು ಹಿಂತಿರುಗಿಸಿದ ಘಟನೆ ನಡೆದಿದೆ. ಚಂಪಾ ಅವರು ತಿಳಿಸಿರುವ ವಿಚಾರಗಳು ಸರ್ಕಾರದ ಮಟ್ಟದ್ದಾಗಿರುವು ದರಿಂದ ಈ ವಿಚಾರವನ್ನು ಸರ್ಕಾರಕ್ಕೆ ತಿಳಿಸಲಾಗುವುದು. ನಂತರ ಪ್ರಶಸ್ತಿಯನ್ನು ವಾಪಸ್ ನೀಡುವ ಪ್ರಯತ್ನ ಮಾಡಲಾಗುವುದು ಎಂದುತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com