
ಬೆಂಗಳೂರು: ಬಿಡಿಎಯಿಂದ ಬಿಬಿಎಂಪಿಗೆ ಹಸ್ತಾಂತರವಾಗದ ಹೊರವರ್ತುಲ ರಸ್ತೆಯನ್ನು ಷರತ್ತುಗಳನ್ನು ವಿಧಿಸಿ ನಿರ್ವಹಣೆ ಮಾಡಬೇಕು ಎಂದು ಬಿಬಿಎಂಪಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದಲ್ಲಿ ನಡೆದ ಬಿಡಿಎ-ಬಿಬಿಎಂಪಿ ಸಭೆಯಲ್ಲಿ, ಬಿಡಿಎ ಅಧೀನದಲ್ಲೇ ಇರುವ ಹೊರವರ್ತುಲ ರಸ್ತೆಯಲ್ಲಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಷರತ್ತು ವಿಧಿಸಬೇಕು. ಇದಕ್ಕೆ ಒಪ್ಪಿದರೆ ಮಾತ್ರ ನಿರ್ವಹಣೆ ಕೈಗೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ.
ಹೊರವರ್ತುಲ ರಸ್ತೆಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಬೇಕು ಎಂದು 2013ರಲ್ಲಿ ಸರ್ಕಾರಿ ಆದೇಶವಾಗಿತ್ತು. ಆದರೂ ಬಿಡಿಎ ಹಸ್ತಾಂತರ ಪ್ರಕ್ರಿಯೆಗೆ ವಿಳಂಬ ಮಾಡುತ್ತಿದೆ. ರಸ್ತೆಯಲ್ಲಿ ಕಸ ಹಾಗೂ ಕಟ್ಟಡ ತ್ಯಾಜ್ಯ ಹೆಚ್ಚಿದ್ದು, ನಿತ್ಯ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಕಸ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಬಿಬಿಎಂಪಿ ಹೊತ್ತಿದ್ದರೂ, ಹೊರವರ್ತುಲ ರಸ್ತೆ ಇನ್ನೂ ಹಸ್ತಾಂತರವಾಗದಿರುವುದರಿಂದ ಇಲ್ಲಿ ಕಸ ವಿಲೇವಾರಿ ಮಾಡುತ್ತಿಲ್ಲ. ರಸ್ತೆಯ ನಿರ್ವಹಣೆಯನ್ನೂ ಸಮರ್ಪಕವಾಗಿ ಮಾಡುತ್ತಿಲ್ಲ. ಹೀಗಾಗಿ ಬಿಬಿಎಂಪಿ ವತಿಯಿಂದಲೇ ನಿರ್ವಹಣೆ ಮಾಡಲಾಗುವುದು. ಆದರೆ, ಬಾಕಿ ಉಳಿದ ಕಾಮಗಾರಿಗಳ ಸ್ಥಳದಲ್ಲಿ ಮಾತ್ರ ಷರತ್ತಿನ ಮೇಲೆ ನಿರ್ವಹಣೆ ಮಾಡಲಾಗುವುದು ಎಂದು ನಿರ್ಧರಿಸಲಾಯಿತು.
ಸಭೆ ನಂತರ ಮಾತನಾಡಿದ ವಿಜಯಭಾಸ್ಕರ್, ಹೊರವರ್ತುಲ ರಸ್ತೆಯಲ್ಲಿ ಕಸ ಹಾಗೂ ಕಟ್ಟಡ ತ್ಯಾಜ್ಯ ಹೆಚ್ಚುತ್ತಿರುವ ಬಗ್ಗೆ ನಿತ್ಯ ದೂರು ಬರುತ್ತಿವೆ. ಇದು ಬಿಡಿಎಗೆ ಸೇರಿರುವ ಕೆಲಸವಾದರೂ, ಕಸ ವಿಲೇವಾರಿ ವಿಚಾರದಲ್ಲಿ ಬಿಬಿಎಂಪಿಯನ್ನೇ ದೂರಲಾಗುತ್ತಿದೆ. ರಸ್ತೆಗೆ ಸೇರಿದ ಬೀದಿದೀಪ, ಮೇಲ್ಸೇತುವೆ, ಕಸ ನಿರ್ವಹಣೆಯನ್ನು ಮಾಡಲಾಗುವುದು. ಕೆಲವೆಡೆ ಕಾಮಗಾರಿಗಳು ಬಾಕಿ ಉಳಿದಿವೆ.
ಇವನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ಷರತ್ತಿನ ಮೇಲೆ ನಿರ್ವಹಣೆ ಮಾಡಲಾಗುವುದು. ಕಸ ಹಾಗೂ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಲು ಅಲ್ಪಾವಧಿ ಟೆಂಡರ್ ಕರೆಯಲಾಗುವುದು. ಯಂತ್ರಗಳನ್ನು ಬಳಸಿ ಕಸ ವಿಲೇವಾರಿ ಮಾಡಲಾಗುವುದು. ಇದಕ್ಕೂ ಮುನ್ನ ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಜಂಟಿಯಾಗಿ ರಸ್ತೆಯ ತಪಾಸಣೆ ಮಾಡಲಿದ್ದಾರೆ. ಸರ್ವಿಸ್ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕಿದ್ದು, ಇನ್ನು 5-6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ತೆರಿಗೆ ಪರಿಷ್ಕರಣೆಗೆ ಪ್ರಸ್ತಾವನೆ
ಆಸ್ತಿ ತೆರಿಗೆ ದರ ಪರಿಷ್ಕರಣೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದು ಜಾರಿ ಬಂದರೆ ರು.500-600 ಕೋಟಿ ಹೆಚ್ಚುವರಿ ಆದಾಯ ಸಂಗ್ರಹವಾಗಲಿದೆ. ಸರ್ಕಾರದಿಂದ ಶೀಘ್ರದಲ್ಲಿ ಪ್ರಸ್ತಾವನೆಗೆ ಒಪ್ಪಿಗೆ ದೊರೆಯಬಹುದು ಎಂದು ವಿಜಯಭಾಸ್ಕರ್ ತಿಳಿಸಿದರು.
Advertisement