
ಹುಬ್ಬಳ್ಳಿ: ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ನಡೆದು ವಾರದ ಬಳಿಕ ಮಂಗಳವಾರ ನಗರಕ್ಕೆ ಭೇಟಿ ನೀಡಿದ ಸಿಐಡಿ ಐಜಿ ಕೆ.ವಿ. ಶರತ್ ಚಂದ್ರ, ಕಲಬುರ್ಗಿ ಅವರ ಮನೆ ಇರುವ ಕಲ್ಯಾಣ ನಗರದಲ್ಲಿ ಸುಮಾರು ಹೊತ್ತು ಜನಸಾಮಾ ನ್ಯರಂತೆ ಸುತ್ತಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಹತ್ಯೆ ನಡೆದು ವಾರ ಕಳೆದರೂ ಹಂತಕರ ಸುಳಿವು ಪತ್ತೆಯಾಗಿಲ್ಲ, ತನಿಖೆ ಪ್ರಗತಿ ಕಾಣುತ್ತಿಲ್ಲ, ಸಿಐಡಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ ಎನ್ನುವ ಅಸಮಾಧಾನ ಡಾ. ಕಲಬುರ್ಗಿಯವರ ಅಭಿಮಾನಿಗಳು ಬಹಿರಂಗವಾಗಿ ವ್ಯಕ್ತಪಡಿಸಿದ್ದಕ್ಕೋ ಅಥವಾ ಪ್ರಕರಣದ ತೀವ್ರತೆ ಅರಿತೋ ಐಜಿ ಶರತ್‍ಚಂದ್ರ ಆಗಮಿಸಿರುವುದು ಧಾರವಾಡಿಗರಲ್ಲಿ ತುಸು ಸಮಾಧಾನ ತಂದಿದೆ.
ಶರತ್‍ಚಂದ್ರ ಕಲ್ಯಾಣ ನಗರಕ್ಕೆ ಬೊಲೆರೋ ಏರಿ ಬಂದಿದ್ದರೂ ಅದನ್ನು ಕಲಬುರ್ಗಿ ಅವರ ನಿವಾಸದಿಂದ ದೂರದಲ್ಲಿರುವ ಮೈಸೂರ್ ಬ್ಯಾಂಕ್ ಪಕ್ಕದಲ್ಲಿ ನಿಲ್ಲಿಸಿ ಜನಸಾಮಾನ್ಯರಂತೆ ಬೀದಿ ಬೀದಿ ಸುತ್ತುತ್ತ ಹಂತಕರ ಸಾಕ್ಷಿಗಳಿಗಾಗಿ ತಡಕಾಡಿದರು. ಅಕ್ಕ-ಪಕ್ಕದ ಮನೆ, ಎದುರಿನ ಕಾಂಪ್ಲೆಕ್ಸ್, ತಿರುವಿನಲ್ಲಿರುವ ಹಾಸ್ಟೆಲ್, ಪಕ್ಕದ ರಸ್ತೆಯ ಕಾಲೇಜು, ಸಮೀಪದ ವೃತ್ತಗಳನ್ನು ನಡೆದಾಡುತ್ತಲೆ ಪರಿಶೀಲಿಸಿದರು. ಯಾರದೋ ಮನೆ ಹುಡುಕುತ್ತಿರಬಹುದು ಎಂದು ಸ್ಥಳೀಯರು ಭಾವಿಸಿದ್ದರು. ಸುಮಾರು ಎರಡೂವರೆ ಗಂಟೆಗಳ ಬಳಿಕ ಕಲಬುರ್ಗಿಯವರ ಮನೆಗೆ ಬಂದು ತಮ್ಮನ್ನು ಪರಿಚಯಿಸಿಕೊಂಡಾಗಲೇ ಗೊತ್ತಾಗಿದ್ದು, ಅವರು ಶರತ್‍ಚಂದ್ರ ಎನ್ನುವುದು. ಈ ಸಂದರ್ಭದಲ್ಲಿ ಛಾಯಾಚಿತ್ರ ತೆಗೆಯಲು ಮುಂದಾದ
ಪತ್ರಕರ್ತರಿಗೆ ನಿರ್ಬಂಧ ಹಾಕಿದರು. ಎಲ್ಲ ರೀತಿಯಿಂದಲೂ ತನಿಖೆ ನಡೆಯುತ್ತಿದೆ. ಆದರೆ, ತನಿಖೆಯ ಪ್ರತಿ ಹಂತದ ವಿವರಗಳನ್ನು ಮಾಧ್ಯಮಗಳಿಗೆ ನೀಡಲು ಆಗುವುದಿಲ್ಲ. ಕೊಲೆಗಾರರ ಪತ್ತೆಯಾಗುತ್ತಿ ದ್ದಂತೆ ನಿಮಗೆ ತಿಳಿಸುತ್ತೆವೆ.
ಅಲ್ಲಿಯವರೆಗೂ ಏನನ್ನೂ ಕೇಳದೇ ಸಹಕರಿಸಿ ಎಂದು ಪತ್ರಕರ್ತರಲ್ಲಿ ಮನವಿ ಮಾಡಿದರು. ಬಳಿಕ ಇವರ ಜತೆ ಸಿಐಡಿ ರಾಜಪ್ಪ ಮತ್ತು ಇನ್ನುಳಿದ ಅಧಿಕಾರಿಗಳು ಸೇರಿಕೊಂಡು ಹಲವು ಕೋನದಿಂದ ಇಡೀ ಪ್ರದೇಶವನ್ನು ಅವಲೋಕಿಸಿ ದರು. ಈ ಸಂದರ್ಭದಲ್ಲಿ ಕಲಬುರ್ಗಿ ಕುಟುಂಬದ ಸದಸ್ಯರು ಶೀಘ್ರದಲ್ಲಿ ಪ್ರಕರಣ ಬೇಧಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಮನವಿ ಮಾಡಿದರು. ಬಳಿಕ ಸುಮಾರು ಹೊತ್ತು ತನಿಖಾ ತಂಡದೊಂದಿಗೆ ಪ್ರಕರಣದ ಪರಾಮರ್ಶೆ, ಮುಂದಿನ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು. ತನಿಖೆ ಯನ್ನು ಇನ್ನಷ್ಟು ಚುರುಕುಗೊಳಿಸಲು ತಂಡದಲ್ಲಿ ಈಗಿರುವ ಕೆಲವು ಅಧಿಕಾರಿಗಳ ಬದಲಾವಣೆಗೂ ಅವರು ಮುಂದಾಗಿದ್ದಾರೆಂದು ಮೂಲಗಳು ಹೇಳಿವೆ.
Advertisement