ಬೆಳೆ ಹಾನಿ ಬರಪೀಡಿತ ಪ್ರದೇಶ ಪರಿಶೀಲಿಸಿದ ಕೃಷ್ಣ ಭೈರೇಗೌಡ

ಭೀಕರ ಬರಗಾಲದಿಂದ ರಾಜ್ಯದಲ್ಲಿ ರೂ.11 ಸಾವಿರ ಕೋಟಿ ಮೌಲ್ಯದ 25 ಲಕ್ಷ ಹೆಕ್ಟೇರ್ನಷ್ಟು ಬೆಳೆ ಹಾನಿಯಾಗಿದೆ. ಬರ ಪರಿಸ್ಥಿತಿ ನಿಭಾಯಿಸಲು ....
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ

ಬೆಳಗಾವಿ: ಭೀಕರ ಬರಗಾಲದಿಂದ ರಾಜ್ಯದಲ್ಲಿ ರೂ.11 ಸಾವಿರ ಕೋಟಿ ಮೌಲ್ಯದ 25 ಲಕ್ಷ ಹೆಕ್ಟೇರ್ನಷ್ಟು ಬೆಳೆ ಹಾನಿಯಾಗಿದೆ. ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರದಿಂದ ರೂ. 3050 ಕೋಟಿ ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಮಂಗಳವಾರ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಮತ್ತು ಗೋಕಾಕ ತಾಲೂಕಿನ ಅರಬಾವಿಯಲ್ಲಿ ಬರಕ್ಕೆ ಹಾನಿಯಾದ ಬೆಳೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 63 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 55 ಲಕ್ಷ ಹೆಕ್ಟೇರ್ ನಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಅದರಲ್ಲಿ 25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಗೀಡಾಗಿವೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದರು. ಈಗಾಗಲೇ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಬೆಳೆಹಾನಿ ಕುರಿತು ಜಂಟಿಯಾಗಿ ಸರ್ವೆ ಕಾರ್ಯ ಕೈಗೊಂಡಿದ್ದು, ಶೇ. 70ರಷ್ಟು ಸರ್ವೆಯಾಗಿದೆ. ಇನ್ನು ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಬರ ಪರಿಸ್ಥಿತಿ ನಿಭಾಯಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕನಿಷ್ಠ ರೂ. 1500 ಕೋಟಿ ಅನುದಾನ ಬರಬೇಕಿದೆ ಎಂದು ತಿಳಿಸಿದರು.

ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ರೂ. 103 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ರೂ. 360 ಕೋಟಿ ವೆಚ್ಚ ಮಾಡಿದೆ. ಬೀಕರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ಕುಡಿವ ನೀರಿನ ಸಮಸ್ಯೆಯೂ ಉಂಟಾಗಿದೆ. ಕುಡಿವ ನೀರಿನ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಈಗಾಗಲೇ ರೂ. 165 ಕೋಟಿ ಬಿಡುಗಡೆ ಮಾಡಿದೆ. 136 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಪ್ರತಿಯೊಂದು ತಾಲೂಕಿಗೆ ತಲಾ ರೂ. 50 ಲಕ್ಷ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ರೂ. 25 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com