
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ರಜೆಯಲ್ಲಿದ್ದ ನ್ಯಾ. ವೈ.ಭಾಸ್ಕರ್‍ರಾವ್ ಅವರನ್ನು ವಿಶೇಷ ತನಿಖಾ ತಂಡ(ಎಸ್ ಐಟಿ) ವಿಚಾರಣೆ ನಡೆಸಿತು. ಇದರೊಂದಿಗೆ ಸಂಸ್ಥೆ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಾಯುಕ್ತ ಹುದ್ದೆಯಲ್ಲಿರುವ ವ್ಯಕ್ತಿಯೇ ತನಿಖಾ ಸಂಸ್ಥೆಯಿಂದ ವಿಚಾರಣೆಗೆ ಒಳಪಟ್ಟ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣದ ಭಾಗವಾಗಿ ಭಾಸ್ಕರ್‍ರಾವ್ ಅವರನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ಎಸ್‍ಐಟಿ ಮುಖ್ಯಸ್ಥ ಕಮಲ್ ಪಂತ್ ಸುದ್ದಿಗಾರರಿಗೆ ಹೇಳಿದರು. ಸೆ.30ರವರೆಗೆ ದೀರ್ಘ ರಜೆ ಹಾಕಿ ಹೈದ್ರಾಬಾದ್‍ನ
ಮನೆಯಲ್ಲಿ ನೆಲೆಸಿರುವ ಭಾಸ್ಕರ್‍ರಾವ್ ಅವರನ್ನು ಎಸ್‍ಐಟಿ ತಂಡದ ಮುಖ್ಯ ತನಿಖಾಧಿಕಾರಿಗಳಾದ ಡಿಐಜಿ ಸೌಮೇಂದು ಮುಖರ್ಜಿ ಹಾಗೂ ಡಿಸಿಪಿ ಲಾಬೂರಾಮ್ ಅವರ ತಂಡ ಸುದೀರ್ಘ ವಿಚಾರಣೆ ನಡೆಸಿದರು.
ಪುತ್ರನನ್ನು ರಿಯಾಜ್ ಹಾಳು ಮಾಡಿದ್ದು!: ಅಧಿಕಾರಿಗಳ ವಿಚಾರಣೆಗೆ ಸಹಕರಿಸಿದ ಭಾಸ್ಕರ್‍ರಾವ್, ತಮ್ಮ ಪುತ್ರ ಅಮಾಯಕ. ಅಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವಂತವ ನಲ್ಲ. ಅಮಾನತಾಗಿರುವಪಿಆರ್‍ಒ ಸೈಯ್ಯದ್ ರಿಯಾಜ್ ಹಾಗೂ ಆತನ ತಂಡವೇ ಮಗನನ್ನು ಹಾಳು ಮಾಡಿದೆ. ಹೀಗಾಗಿ, ನನ್ನ ಮಗನ ಬದಲು ರಿಯಾಜ್‍ಗೆ ಶಿಕ್ಷೆಯಾಗಬೇಕು ಎಂದು ಪದೇ ಪದೇ ಅಲವತ್ತುಕೊಂಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಮೇ ಎರಡನೇ ವಾರದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‍ವೊಬ್ಬರು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್‍ರನ್ನು ಭೇಟಿ ಮಾಡಿ ನಿಮ್ಮ ಹೆಸರು ಹೇಳಿ ಲಂಚ ಕೇಳುತ್ತಿದ್ದಾರೆ ಎಂದು ದೂರಿದ್ದರು. ಅಲ್ಲದೇ, ಅದರಲ್ಲಿ ಲೋಕಾಪುತ್ರನ ಕೈವಾಡ ಇದೆ ಎನ್ನುವ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಭಾಸ್ಕರ್‍ರಾವ್ ರಾಜಿನಾಮೆಗೆ ಒತ್ತಡ ತೀವ್ರವಾಗಿತ್ತು.ಮೂಲಗಳ ಪ್ರಕಾರ, ಪ್ರಕರಣದಲ್ಲಿ ನಿಮ್ಮ ಯಾವ ಕೈವಾಡ ಇಲ್ಲ ಎಂದು ಸಾಬೀತಾಗಲು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಅಲ್ಲದೇ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಮೊದಲೇ ತಿಳಿಸಿದ್ದರು. ಅಶ್ವಿನ್‍ರಾವ್ ಲೋಕಾಯುಕ್ತ ಕಚೇರಿಯಲ್ಲಿರುವ ಕಾನ್ಫರೆನ್ಸ್ ಹಾಲ್ ಹಾಗೂ ಅಧಿಕೃತ ನಿವಾಸವನ್ನು ಹೇಗೆ ತನ್ನ ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಂಡ ಎನ್ನುವುದರ ಬಗ್ಗೆ ಉತ್ತರಿಸುವಾಗ ಭಾಸ್ಕರ್ ರಾವ್ ತಡವಡಿಸಿದರು. ಆದರೆ, ಭ್ರಷ್ಟಾಚಾರ ಪ್ರಕರಣದಲ್ಲಿ ಪುತ್ರ ಹಾಗೂ ತನ್ನ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ವಾದಿಸಿದರು ಎನ್ನಲಾಗಿದೆ.
ಅಶ್ವಿನ್‍ರಾವ್, ಸೈಯ್ಯದ್ ರಿಯಾಜ್ ಹಾಗೂ ಹೊಟ್ಟೆ ಕೃಷ್ಣ, ವಿ.ಭಾಸ್ಕರ್ ಸೇರಿದಂತೆ ಇತರೆ ಆರೋಪಿಗಳು ಹಲವು ಸರ್ಕಾರಿ ಅಧಿಕಾರಿಗಳೊಂದಿಗೆ ಯಾವ ರೀತಿ ಸಂಪರ್ಕ ಹೊಂದಿದ್ದರು
ಎನ್ನುವ ಬಗ್ಗೆ ಸಮಗ್ರ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದರು. ಅಶ್ವಿನ್‍ರಾವ್ ಕೆಲಸಗಳು ಹಾಗೂ ಆತನ ಆರ್ಥಿಕ ಸ್ಥಿತಿಯ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ, ತೆಲಂಗಾಣದ ರಂಗಾರೆಡ್ಡಿ
ಜಿಲ್ಲೆಯಲ್ಲಿ ಆತನ ವಿರುದಟಛಿ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ನಾನು ಆತನಿಂದ ದೂರವಾಗಿದ್ದೆ. ಅಲ್ಲದೇ ಆತನ ಮದುವೆಗೂ ನಾನು ಹಾಜರಾಗಿರಲಿಲ್ಲ ಎಂದು ರಾವ್ ಹೇಳಿದ್ದಾರೆ.
ಕೆಲ ವರ್ಷಗಳ ಹಿಂದಷ್ಟೇ ಅಶ್ವಿನ್ ಮತ್ತೆ ನನ್ನ ಸಂಪರ್ಕಕ್ಕೆ ಬಂದ. ನನ್ನ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲು ನಾನಾಗಿಯೇ ಯಾವುದೇ ಅವಕಾಶ ನೀಡಿಲ್ಲ. ಈ ಮೂಲಕ ಮಗನ ಕೃತ್ಯಗಳಲ್ಲಿ ತನ್ನದೇನೂ ನಂಟು ಇಲ್ಲ ಎಂದು ಭಾಸ್ಕರ್ ರಾವ್ ಪದೇ ಪದೇ ಹೇಳುತ್ತಿದ್ದರು ಎನ್ನಲಾಗಿದೆ. ಏಕೈಕ ಸರ್ಕಾರಿ ಅಧಿಕಾರಿಯಾಗಿರುವ ಸೈಯ್ಯದ್ ರಿಯಾಜ್ ಅವರ ಸಂಪರ್ಕದ ಬಗ್ಗೆಯೂ ಅ„ಕಾರಿಗಳುಭಾಸ್ಕರ್‍ರಾವ್ ಅವರನ್ನು ಪ್ರಶ್ನಿಸಿದ್ದರು. ಆಗ, ಪಿಆರ್‍ಒ ರಿಯಾಜ್‍ನನ್ನು ಹತ್ತಿರಕ್ಕೆ ಸೇರಿಸಿಕೊಂಡು ಅತ್ಯಂತ ದೊಡ್ಡ ತಪ್ಪು ಮಾಡಿದೆ. ನನ್ನ ಮಗ ಅಷ್ಟು ಕೆಟ್ಟವನಲ್ಲ.ಇದೆಲ್ಲದಕ್ಕೂ ಕಾರಣ ರಿಯಾಜ್, ಆತನನ್ನು ಗಂಭೀರ ಶಿಕ್ಷೆಗೆ ಒಳಪಡಿಸಬೇಕು ಎಂದು ನ್ಯಾ.ಭಾಸ್ಕರ್‍ರಾವ್ ಅವರು ಮತ್ತೆ ಮತ್ತೆ ಹೇಳಿದರು ಎನ್ನಲಾಗಿದೆ. ವಿ.ಭಾಸ್ಕರ್, ಹೊಟ್ಟೆ ಕೃಷ್ಣ ಹಾಗೂ ನರಸಿಂಹಮೂರ್ತಿ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವಿಡಿಯೋ ಬಗ್ಗೆಯೂ ಅಧಿಕಾರಿಗಳು ಭಾಸ್ಕರ್‍ರಾವ್ ಅವರನ್ನು ಪ್ರಶ್ನಿಸಿದ್ದಾರೆ.ಬಂ„ತ ಆರೋಪಿಗಳು ರಿಯಾಜ್ ಮೂಲಕ ಪರಿಚಯವಾಗಿದ್ದರು. ನಾನು ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದು ಭಯ ಭಕ್ತಿ ಇದೆ. ಆಗಾಗ ದೇವಸ್ಥಾನಗಳಿಗೆ ಹೋಗುತ್ತಿರುತ್ತೇನೆ.ಅದರಂತೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿರುವ ದೇವಸ್ಥಾನಕ್ಕೆ ಅವರು ನನ್ನನ್ನು ಕರೆದೊಯ್ದಿದ್ದರು. ಈ ಮೂಲಕ ಅವರು ನನ್ನನ್ನು ಹತ್ತಿರ ಮಾಡಿಕೊಳ್ಳಲು ಯತ್ನಿಸುತ್ತಿದ್ದರು. ಆದರೆ, ಅವರು ಈ ರೀತಿಯ ಕಾನೂನು ವಿರೋಧ ಕೆಲಸಗಳನ್ನು ಮಾಡುತ್ತಾರೆಂದು ನಾನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಅಶ್ವಿನ್‍ರಾವ್ ಹಾಗೂ ಸೈಯ್ಯದ್ ರಿಯಾಜ್ ಬಂಧನದ ಬಳಿಕ ಸಿಐಡಿ ಅಧಿಕಾರಿಗಳು ಲೋಕಾಯುಕ್ತರ ಅಧಿಕೃತ ನಿವಾಸ ಹಾಗೂ ಹೈದ್ರಾಬಾದ್‍ನಲ್ಲಿರುವ ಖಾಸಗಿ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಉತ್ತರ ಇಲ್ಲದ ಪ್ರಶ್ನೆಗಳು
ಸಂಸ್ಥೆಯೊಳಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ನೀಡಿದ ದೂರಿನ ಬಗ್ಗೆ ಯಾಕೆ ತನಿಖೆ ನಡೆಸಲು ಮುಂದಾಗಲಿಲ್ಲ? ಅಲ್ಲದೇ ಎಸ್ಪಿ ಸೋನಿಯಾ ನಾರಂಗ್ ಅವರು ಸಂಸ್ಥೆ ಹಾಗೂ ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ಕೆಲವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರು ನೀಡಿದರೂ ತನಿಖೆ ನಡೆಸಲು ಆದೇಶಿಲ್ಲವೇಕೆ ಎನ್ನುವ ಪ್ರಶ್ನೆಗಳನ್ನು ಎಸ್‍ಐಟಿ ಅಧಿಕಾರಿಗಳು ಭಾಸ್ಕರ್‍ರಾವ್ ಅವರ ಮುಂದಿಟ್ಟಿದ್ದರು. ಆದರೆ, ಅದಕ್ಕೆ ಸೂಕ್ತ ಉತ್ತರಗಳನ್ನು ನೀಡಿಲ್ಲ. ಅಲ್ಲದೇ, ಅಧಿಕಾರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಲು ಲೋಕಾಯುಕ್ತ ಕಚೇರಿ ಹಾಗೂ ಅಧಿಕೃತ ನಿವಾಸದ ಫೋನ್ ಲೈನ್‍ಗಳನ್ನು ಬಳಕೆ ಮಾಡಿರುವ ಕಾಲ್ ಡಿಟೇಲ್‍ಗಳ ಬಗ್ಗೆಯೂ ಭಾಸ್ಕರ್‍ರಾವ್ ಅವರನ್ನು ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಆರೋಪಿಯೋ ಸಾಕ್ಷಿಯೋ?
ನ್ಯಾ.ಭಾಸ್ಕರ್‍ರಾವ್ ಅವರ ವಿಚಾರಣೆಯಿಂದ ಪಡೆದುಕೊಳ್ಳಲಾಗಿರುವ ಹೇಳಿಕೆಗಳ ಬಗ್ಗೆ ಸಮಗ್ರ ವಿಶ್ಲೇಷಣೆ ನಡೆಯಲಿದೆ. ಬಳಿಕವಷ್ಟೇ ಅವರನ್ನು ಆರೋಪಿ ಅಥವಾ ಸಾಕ್ಷಿದಾರರನ್ನಾಗಿಸಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement