ಡಾ.ಎಂ.ಎಂ. ಕಲಬುರ್ಗಿ ಹಂತಕರನ್ನು ಶೀಘ್ರ ಬಂಧಿಸಿ

ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆ ಹಂತಕರನ್ನು ಆಡಳಿತ ವ್ಯವಸ್ಥೆಯು....
ಡಾ,ಎಂ,ಎಂ.ಕಲ್ಬುರ್ಗಿ
ಡಾ,ಎಂ,ಎಂ.ಕಲ್ಬುರ್ಗಿ

ಬೆಂಗಳೂರು: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆ ಹಂತಕರನ್ನು ಆಡಳಿತ ವ್ಯವಸ್ಥೆಯು ಅತಿ ಶೀಘ್ರ ಬಂಧಿಸಿ, ನ್ಯಾಯ ಒದಗಿಸಬೇಕೆಂದು ಬಸವ ಸಮಿತಿ ಆಗ್ರಹಿಸಿದೆ. ನಗರದ ಬಸವ ಸಮಿತಿ ಸಭಾಂಗಣದಲ್ಲಿ ಶನಿವಾರ ನಡೆದ ಡಾ.ಎಂ.ಎಂ. ಕಲಬುರ್ಗಿ ವಿಚಾರ ಸ್ಮರಣೆ ಸಭೆಯಲ್ಲಿ ನಾಡಿನ ವಿದ್ವಾಂಸರು ಕೈಗೊಂಡ ನಿರ್ಣಯಗಳನ್ನು ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಪ್ರಕಟಿಸಿದರು. ನಿರ್ಣಯದ ಸಾರಾಂಶ ಇಂತಿದೆ.

`ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಇಡೀ ಸಾಹಿತ್ಯ ಸಾಂಸ್ಕೃತಿಕ ಲೋಕಕ್ಕೆ ಅಘಾತಕಾರಿಯಾಗಿ ಪರಿಣಮಿಸಿದೆ. ಹಿರಿಯ ಕನ್ನಡಿಗ ವಿದ್ವಾಂಸರೊಬ್ಬರ ಹತ್ಯೆಯಾದಾಗ ಸಮಸ್ತ ಕನ್ನಡಿಗರು ಸಹ ಪ್ರತಿಭಟಿಸಬೇಕಾದದ್ದು ಅನಿವಾರ್ಯ. ಡಾ.ಕಲಬುರ್ಗಿ ಅವರು ಬಹುಭಾಷಾ ವಚನ ಅನುವಾದ ಯೋಜನೆಯ ನಿರ್ದೇಶಕರಾಗಿ ಮಾಡಿರುವ ಸಾಹಿತ್ಯ ಸೇವೆ ಅನನ್ಯ. ವಿಶೇಷವಾಗಿ ಸಂಶೋಧನಾ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ. ಇಂತಹ ಅಪರೂಪದ ಕನ್ನಡಿಗನನ್ನು ಕನ್ನಡ ಸಾಹಿತ್ಯ ಲೋಕ ಕಳೆದುಕೊಂಡಿದ್ದು ದುರದೃಷ್ಟಕರ. ಒಬ್ಬ ಸರಳ, ಸಜ್ಜನ, ನಿಷ್ಠೂರವಾದಿ, ವೈಚಾರಿಕ ನಿಲುವುಗಳನ್ನು ಸಮಾಜ ಗೌರವಿಸಲೇಬೇಕಾಗುತ್ತದೆ. ಕಲಬುರ್ಗಿ ಅವರ ಸ್ಮರಣ ಕಾರ್ಯಕ್ರಮದಲ್ಲಿ ಅವರು ನಡೆದ ಬಂದ ಮಾರ್ಗವನ್ನು ಅವಲೋಕಿಸಿ ಎಲ್ಲ ವಿದ್ವಾಂಸರು ಒಕ್ಕೊರಲಿ ನಿಂದ ಖಂಡಿಸಿದ್ದಾರೆ. ಆಡಳಿತ ವ್ಯವಸ್ಥೆ ಚುರುಕಾಗಿ ಹಂತಕರನ್ನು ಅತಿ ಶೀಘ್ರ ಬಂಧಿಸಿ, ನ್ಯಾಯ ಒದಗಿಸಬೇಕೆಂದು ತೀರ್ಮಾನಿಸಲಾಯಿತು' ಎಂದು ಜತ್ತಿ ಪ್ರಕಟಿಸಿದರು.

ಇದಕ್ಕೂ ಮುನ್ನ ಸ್ಮರಣ ಕಾರ್ಯಕ್ರಮವನ್ನು ಬೇಲಿಮಠದ ಶಿವರುದ್ರಸ್ವಾಮೀಜಿ ಉದ್ಘಾಟಿಸಿದರು. ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಕಲಬುರ್ಗಿ ಅವರೊಂದಿಗೆ ಒಡನಾಟ ಹೊಂದಿದವರು, ಶಿಷ್ಯರು, ಸಾಹಿತಿಗಳು ವಿಚಾರ ಮಂಡಿಸಿದರು. `ಬಹುಭಾಷಾ ವಚನ ಅನುವಾದ ಯೋಜನೆಯ  ನಿರ್ದೇಶಕರು' ಎಂಬ ವಿಚಾರ ಕುರಿತ ಮಾತನಾಡಿದ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಕಲಬುರ್ಗಿ ಅವರು ಶಾಸನಶಾಸ್ತ್ರ, ಸಾಹಿತ್ಯಶಾಸ್ತ್ರ ಜ್ಞಾನ ಹೊಂದಿ ಮಹಾಮಾರ್ಗದಲ್ಲಿ ಸಾಗುತ್ತಿದ್ದರು. ನಾನು ಬಿದ್ದಾಗ ಕೈಕೊಟ್ಟು ಮೇಲೆತ್ತಿದ ಮಾನವೀಯ ವ್ಯಕ್ತಿ ಅವರು. ಅವರ ಮಾರ್ಗ ಕೃತಿಯು ದೇಶದ 9 ಭಾಷೆಗಳಿಗೆ ಅನುವಾದವಾಗಿದ್ದು, ಉಳಿದ 14 ಭಾಷೆಗಳಿಗೂ ಅನುವಾದವಾಗಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ಅನುವಾದದ ಮುಖ್ಯ ಕೆಲಸವೆಂದರೆ ಇಷ್ಟವಾದದ್ದು, ಪ್ರಿಯವಾದದ್ದನ್ನು ತಿಳಿಸುವುದಾಗಿದೆ. 22 ಸಾವಿರ ವಚನ ಓದಿ ಪಠ್ಯ ರೂಪಿಸುವಲ್ಲಿ ಕಲಬುರ್ಗಿ ಅವರ ಶ್ರಮ ಸಾಕಷ್ಟಿದೆ. 12ನೇ ಶತಮಾನದಿಂದ ಇಂದಿನವರೆಗೂ ನಡೆದು ಬಂದ ಶರಣ ಪರಂಪರೆಯನ್ನು ಹಿಡಿಯಾಗಿ ಕೊಟ್ಟಿದ್ದಾರೆ ಎಂದರು.

`ಸಮಗ್ರ ವಚನ ಸಂಪುಟಗಳ ಪ್ರಧಾನ ಸಂಪಾದಕರಾಗಿ ಕಲಬುರ್ಗಿ' ವಿಷಯ ಕುರಿತು ಮಾತನಾಡಿದ ಪ್ರಾಧ್ಯಾಪಕಿ ಡಾ. ಜಯಶ್ರೀ ದಂಡೆ, ಸಮಗ್ರ ವಚನ ಸಾಹಿತ್ಯವನ್ನು ಒಟ್ಟು 14 ಸಂಪುಟಗಳಲ್ಲಿ ಮತ್ತು ಒಂದು ಪಾರಿಭಾಷಿಕ ಸಂಪುಟ ಹೊರತರುವಲ್ಲಿ ಕಲಬುರ್ಗಿ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಗುರು ಆರ್.ಸಿ.ಹಿರೇಮಠ್, ಪಂ.ರಾಜೀವ್, ಎಂ.ಎನ್. ಸಂಕನಪುರ ಅವರ ಜತೆಗೂಡಿ ಈ 15 ಸಂಪುಟಗಳನ್ನು ಹೊರತಂದರು. ಧಾರವಾಡ ವಿವಿಯ ಕನ್ನಡ ಅಧ್ಯಯನ ವಿಭಾಗದಲ್ಲಿ ವಚನ ಬ್ಯಾಂಕ್ ಅನ್ನು ತೆರೆದು ಅಲ್ಲಿ ನೂರಾರು ಆಕರಗಳನ್ನು ಸಂಗ್ರಹಿಸಿದ್ದರು ಎಂದು ಸ್ಮರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com