ತವರಿನಲ್ಲೇ ಮೊಯ್ಲಿಗೆ ಘೇರಾವ್

ಎತ್ತಿನಹೊಳೆ ಯೋಜನೆ ಬೆಂಬಲಿಸಿರುವ ಕೇಂದ್ರ ಮಾಜಿ ಸಚಿವ, ಸಂಸದ ವೀರಪ್ಪ ಮೊಯ್ಲಿ ಅವರಿಗೆ ಎತ್ತಿನಹೊಳೆ ವಿರೋಧಿ...
ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ

ಮಂಗಳೂರು: ಎತ್ತಿನಹೊಳೆ ಯೋಜನೆ ಬೆಂಬಲಿಸಿರುವ ಕೇಂದ್ರ ಮಾಜಿ ಸಚಿವ, ಸಂಸದ ವೀರಪ್ಪ ಮೊಯ್ಲಿ ಅವರಿಗೆ ಎತ್ತಿನಹೊಳೆ ವಿರೋಧಿ ಹೋರಾಟಗಾರರು ಶನಿವಾರ ಕಪ್ಪು ಬಾವುಟ ಮತ್ತು ಚಪ್ಪಲಿ ತೋರಿಸಿ ಘೇರಾವ್ ಹಾಕಿದ್ದಾರೆ.

ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಕಾರ್ಯಕ್ರಮಕ್ಕೆ ಬಂದಿದ್ದ ಅವರು, ಅಲ್ಲಿಂದ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಪ್ರತಿಭಟನಾಕಾರರು ಅವರ ಕಾರನ್ನು ಸುತ್ತುವರಿದರು. ಧಿಕ್ಕಾರ ಕೂಗಿ, ಕಪ್ಪು ಬಾವುಟ, ಚಪ್ಪಲಿ ತೋರಿಸಿದರು. ಆಗ ಕಾರಿನಿಂದ ಇಳಿದ ವೀರಪ್ಪ ಮೊಯ್ಲಿ ಅವರಿಗೆ ಎತ್ತಿನಹೊಳೆ ಜಾರಿ ಕುರಿತ 10 ಪ್ರಶ್ನೆಗೆ ಸೆ.19ರಂದು ಸಂವಾದದಲ್ಲಿ ಉತ್ತರಿಸುವಂತೆ ಹೋರಾಟಗಾರರು ಕರಪತ್ರ ನೀಡಿದರು.

ಈ ವೇಳೆ ಮಾತನಾಡಿದ ಮೊಯ್ಲಿ, `ಯೋಜನೆಗೂ ನನಗೂ ಸಂಬಂಧವಿಲ್ಲ. ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ನಾನೀಗ ಸಂಸದನಾಗಿದ್ದು, ಯೋಜನೆ ಬಗ್ಗೆ ರಾಜ್ಯ ಸರ್ಕಾರ ಮಾತನಾಡಬೇಕಷ್ಟೆ' ಎಂದರು. `ಜಿಲ್ಲೆಯವರೇ ಆಗಿದ್ದು ಎತ್ತಿನಹೊಳೆ ವಿರುದ್ಧ ಏಕೆ ಮಾತನಾಡುತ್ತಿಲ್ಲ ? ಯೋಜನೆ ಅವೈಜ್ಞಾನಿಕವಾಗಿದೆ.

ಅದನ್ನು ಸ್ಥಗಿತಗೊಳಿಸ ಬೇಕು' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದಕ್ಕೆ ಒಪ್ಪದ ಮೊಯ್ಲಿ, ಅಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಲಭ್ಯ ಎಂಬುದು ಗೊತ್ತಿಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದರು. ಈ ವೇಳೆ `ರಕ್ತ ಕೊಟ್ಟಾದರೂ ಚಿಕ್ಕಬಳ್ಳಾಪುರಕ್ಕೆ ನೀರು ಕೊಡುತ್ತೇನೆ ಎಂದು ಹೇಳಿದ್ದೀರಲ್ಲ' ಎಂದು ಹೋರಾಟಗಾರರು ಕೇಳಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಮೊಯ್ಲಿ `ನಾನು ಹಾಗೆ ಹೇಳಿಲ್ಲ' ಎಂದು ಅಲ್ಲಿಂದ ನಿರ್ಗಮಿಸಿದರು.

ಗ್ರಾಮಾಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದರು. ಸಭೆಗೆ ಒತ್ತಾಯಿಸುವೆ: ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮೊಯ್ಲಿ, ಎತ್ತಿನಹೊಳೆ ಯೋಜನೆಯ ಸಾಧಕ, ಬಾಧಕ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳ ಒಳಗಾಗಿ ಸಭೆ ಕರೆಯುವಂತೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು. ಎತ್ತಿನಹೊಳೆ ಯೋಜನೆ ಪರಮಶಿವಯ್ಯಅವರ ವರದಿಯಂತೆ ನೇತ್ರಾವತಿ ತಿರುವು ಅಲ್ಲ. ಇದು ಕುಡಿಯುವ ನೀರು ಪೂರೈಸುವ ಯೋಜನೆ.

ಮಾಜಿ ಸಿಎಂಗಳಾದ ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಇದನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಯೋಜನೆ ಜಾರಿಗೆ ಮುನ್ನ ಚರ್ಚೆಯಾಗಬೇಕಿದೆ. ಯೋಜನೆಯಿಂದ ಬಯಲು ಸೀಮೆಗೆ ಕುಡಿಯುವ ನೀರು ಸಿಗಲಿದೆ. ಆದರೆ, ಈ ಭಾಗದಲ್ಲಿ ಈಗಾಗಲೇ 9 ನದಿಗಳು ಬತ್ತಿವೆ. ಅಂತರ್ಜಲವೂ ಕುಸಿದೆ.

ಈ ಅಂಶಗಳನ್ನು ಪರಿಗಣಿಸಿ ಕುಡಿಯುವ ಉದ್ದೇಶಕ್ಕೆ ಮಾತ್ರ ಎತ್ತಿನಹೊಳೆ ಯೋಜನೆ ಜಾರಿಯಾಗುತ್ತಿದೆ. ಮಳೆಗಾಲದ 4 ತಿಂಗಳು ಮಾತ್ರ ಇಲ್ಲಿಂದ ನೀರು ತೆಗೆಯಲಾಗುವುದು. ಇದರಿಂದ ಪರಿಸರಕ್ಕೆ ಹಾನಿ ಇಲ್ಲ ಎಂದು ಹೇಳಿದರು. ಎತ್ತಿನಹೊಳೆಯಲ್ಲಿ 24 ಟಿಎಂಸಿ ನೀರು ಲಭ್ಯವಿಲ್ಲ ಇಲ್ಲ ಎಂದು ತಜ್ಞರು ನೀಡಿರುವ ವರದಿ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ `ಈ ವಿಚಾರ ನನಗೆ ಗೊತ್ತಿಲ್ಲ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com