
ಧಾರವಾಡ: ಡಾ. ಎಂ.ಎಂ. ಕಲಬುರ್ಗಿ ಅವರನ್ನುಗುಂಡಿಟ್ಟು ಕೊಂದವರನ್ನು ತಿಂಗಳಲ್ಲಿ ಬಂಧಿಸದಿದ್ದರೆ ಧಾರವಾಡದಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಜಧಾನಿಗೆ ವರ್ಗವಾಗಲಿದೆ.
ಇದು ಪ್ರಗತಿಪರ ಚಿಂತಕರ, ಸಾಹಿತಿಗಳ, ಪ್ರಾಧ್ಯಾಪಕರ ಹಾಗೂ ಸಾವಿರಾರು ವಿದ್ಯಾರ್ಥಿಗಳ ಗುಡುಗು. ಕಲಬುರ್ಗಿ ಅವರ ಹತ್ಯೆಯಾಗಿ 15 ದಿನ ಕಳೆದರೂ ಸಿಐಡಿ ತನಿಖೆಯಲ್ಲಿ ಯಾವುದೇ ಬೆಳವಣಿಗೆಯಾಗದ ಹಿನ್ನೆಲೆಯಲ್ಲಿ `ಕಲಬುರ್ಗಿ ಹತ್ಯೆ ವಿರೋಧ ಹೋರಾಟ ಸಮಿತಿ' ನೇತೃತ್ವದಲ್ಲಿ ಕಡಪ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಆರೋಗ್ಯವಂತ ಸಮಾಜಕ್ಕೆ ಮಾರಕ ಗೊಡ್ಡು ಸಂಪ್ರದಾಯ, ಧರ್ಮಾಂಧತೆ, ಕೋಮುವಾದ, ಮನುವಾದವನ್ನು ಕಲಬುರ್ಗಿ ವಿರೋಧಿಸಿದ್ದರು. ಅವರನ್ನು ಕೊಲ್ಲುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಕಾರ್ಯ ನಡೆದಿದೆ. ಇದು ವೈಚಾರಿಕ ಕೊಲೆ, ಸಾಂಸ್ಕೃತಿಕ ಭಯೋತ್ಪಾದನೆ. ಕೊಲೆಯಾಗಿ ಹದಿನೈದು ದಿನಗಳಾದರೂ ಹಂತಕರನ್ನು ಹಿಡಿಯದೆ ಸರ್ಕಾರ ಮೌನವಾಗಿದೆ. ಗುಪ್ತಚರ ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸದಿರುವುದೇ ಇದಕ್ಕೆ ಕಾರಣ.
ಕೂಡಲೇ ಒಂದು ಕಾಲಮಿತಿಯಲ್ಲಿ ರಾಜ್ಯ ಸರ್ಕಾರ ತನಿಖೆಯನ್ನು ಚುರುಕುಗೊಳಿಸಿ ಹಂತಕರನ್ನು ಬಂಧಿಸಬೇಕೆಂದು ಭಾಗವಹಿಸಿದ್ದ ಎಲ್ಲ ಪ್ರಗತಿಪರ ಚಿಂತಕರು ಸರ್ಕಾರದ ಮೇಲೆ ಒತ್ತಡ ಹೇರಿ, ಜಿಲ್ಲಾಧಿಕಾರಿಗೆ 9 ಹಕ್ಕೊತ್ತಾಯಗಳ ಮನವಿ ಸಲ್ಲಿಸಿದ್ದಾರೆ.
150 ಚಿಂತಕರು ಭಾಗಿ: ನಾಡೋಜ ಚೆನ್ನವೀರ ಕಣವಿ, ಗದುಗಿನ ತೋಂಟದಾರ್ಯ ಶ್ರೀಗಳು, ಡಾ. ಸಿದಟಛಿಲಿಂಗ ಪಟ್ಟಣಶೆಟ್ಟಿ, ಡಾ. ಗಿರಡ್ಡಿ ಗೋವಿಂದರಾಜ, ಎಸ್.ಆರ್. ಹಿರೇಮಠ, ಡಾ. ಮಾಲತಿ ಪಟ್ಟಣಶೆಟ್ಟಿ, ಡಾ. ರಾಜೇಂದ್ರ ಚಿನ್ನಿ, ಡಾ. ಜೋಗನ್ ಶಂಕರ, ಡಾ. ರಹಮತ್ ತರಿಕೇರೆ, ಬಂಜಗೆರೆ ಜಯಪ್ರಕಾಶ, ಕೆ. ನೀಲಾ, ಸಿ. ಬಸವಲಿಂಗಯ್ಯ, ಬಿ. ಗಂಗಾಧರ ಮೂರ್ತಿ, ಬಿ.ಟಿ. ಜಾಹ್ನವಿ, ಶ್ರೀರಾಮರೆಡ್ಡಿ, ಆರ್.ಕೆ. ಹುಡುಗಿ, ವೀರಣ್ಣ ರಾಜೂರ, ಬಾಳಣ್ಣ ಶೀಗಿಹಳ್ಳಿ, ಡಾ. ಮಂದಾಕಿನಿ ಪುರೋಹಿತ, ಡಾ. ವೀಣಾ ಶಾಂತೇಶ್ವರ, ಡಾ. ವಿನಯಾ ವಕ್ಕುಂದ, ಡಾ. ಡಿ.ಎಂ. ಹಿರೇಮಠ, ಡಾ. ಮೀನಾಕ್ಷಿ ಬಾಳಿ, ಚಂದ್ರಶೇಖರ ತಾಳ್ಯ, ಡಾ. ರಾಜಪ್ಪ ದಳವಾಯಿ, ಸತೀಶ ಕುಲಕರ್ಣಿ, ಕೆ. ವೈ. ನಾರಾಯಣಸ್ವಾಮಿ, ಶಾಸಕ ವಿನಯ ಕುಲಕರ್ಣಿ ಸೇರಿ ರಾಜ್ಯದ ಸುಮಾರು 150 ಚಿಂತಕರು ಭಾಗವಹಿಸಿದ್ದರು.
ಸಂಘಟನೆಗಳ ಬೆಂಬಲ: ಕನ್ನಡ ಸಾಹಿತ್ಯಪರಿಷತ್, ಸಾಹಿತ್ಯ ಅಕಾಡೆಮಿ, ಪುಸ್ತಕಪ್ರಾ„ಕಾರ, ಸಮಾಜ ಪರಿವರ್ತನಾ ಸಮಿತಿ, ದಲಿತ ಸಂಘರ್ಷ ಸಮಿತಿ, ರಾಜ್ಯ ರೈತಸಂಘ,
ಪ್ರಾಂತ ರೈತಸಂಘ, ಜನಸಾಹಿತ್ಯ ಸಂಘಟನೆ, ಸಮುದಾಯ, ಜನವಾದಿ ಮಹಿಳಾ ಸಂಘಟನೆ, ಉತ್ತರ ಕರ್ನಾಟಕ ಲೇಖಕಿಯರ ಸಂಘ, ಸಮಾನತಾ ಮಹಿಳಾ ವೇದಿಕೆ, ಕವಿವಿ ಕನ್ನಡ ಅಧ್ಯಾಪಕರ ಪರಿಷತ್, ರಾಣಿ ಚೆನ್ನಮ್ಮ ವಿವಿ ಕನ್ನಡ ಅಧ್ಯಾಪಕರ ಪರಿಷತ್, ರಂಗಾಯಣ, ರಂಗಪರಿಸರ, ಜನಶಕ್ತಿ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್, ಅನ್ವೇಷಣಾ ಕೂಟ, ದಲಿತ ಸಾಹಿತ್ಯ ಪರಿಷತ್, ಧಾರವಾಡ ವಕೀಲರ ಸಂಘ, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಪ್ರತಿಷ್ಠಾನ, ಅಧ್ಯಕ್ಷರ ಸಾಹಿತ್ಯ ವೇದಿಕೆ, ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ, ಎಐಡಿಎಸ್‍ಒ, ಎಸ್‍ಎಫ್‍ಐ ಸೇರಿದಂತೆ ಹತ್ತಾರು ಸಂಘಟನೆಗಳ ಪದಾ„ಕಾರಿಗಳು ಕಲಬುರ್ಗಿ ಹತ್ಯೆ ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವೀರಶೈವ ಮಠಗಳೇಕೆ ಮಾತನಾಡುತ್ತಿಲ್ಲ
ಕಲಬುರ್ಗಿ ಅವರ ಹತ್ಯೆ ಕುರಿತು ವೀರಶೈವ ಮಠಗಳೇಕೆ ಮಾತನಾಡುತ್ತಿಲ್ಲ ಎಂದು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ. ಬಸವಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಕಲಬುರ್ಗಿ ಅವರ ಹತ್ಯೆ ಧಾರ್ಮಿಕ ಭಯೋತ್ಪಾದನೆ-ಯಂತೆ ಕಾಣುತ್ತಿದೆ. ಈ ವಿಷಯದಲ್ಲಿ ವೀರಶೈವ ಮಠಗಳು ಏತಕ್ಕೆ ಮೌನವಾಗಿವೆ. ಸತ್ಯ ಹೇಳುವರು ಸಾಯೋದಕ್ಕೆ ಹೆದರೋದಿಲ್ಲ ಎಂಬುದನ್ನು ಡಾ. ಕಲಬುರ್ಗಿ ತೋರಿಸಿಕೊಟ್ಟಿದ್ದಾರೆ. ಹೊಸ ವೈಚಾರಿಕ ಹೋರಾಟಕ್ಕೆ ಕಲಬುರ್ಗಿ ಅವರು ನಾಂದಿ ಹಾಡಿದ್ದು, ಅವರ ದಾರಿಯಲ್ಲಿ
ನಾವೆಲ್ಲ ನಡೆಯುವ ಮೂಲಕ ಅವರ ಕನಸುಗಳನ್ನು ನನಸು ಮಾಡೋಣ ಎಂದು ಕರೆ ನೀಡಿದರು.
ಇಂದು ಸಾಹಿತಿಗಳ ನಿಯೋಗದಿಂದ ಸಿಎಂ ಭೇಟಿ
ಬೆಂಗಳೂರು: ಡಾ.ಎಂ.ಎಂ.ಕಲಬುರ್ಗಿ ಹಂತಕರ ಬಂಧನಕ್ಕೆ ಆಗ್ರಹಿಸಿ ರಾಜ್ಯದ ಮಠಾಧೀಶರು ಮತ್ತು ಸಾಹಿತಿಗಳ ನಿಯೋಗ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 3.30ಕ್ಕೆ ಮುಖ್ಯಮಂತ್ರಿ ಭೇಟಿಗೆ ಈ ನಿಯೋಗಕ್ಕೆ ಸಮಯಾವಕಾಶ ಕಲ್ಪಿಸಲಾಗಿದೆ. ನಿಯೋಗದಲ್ಲಿ ದಾಭೋಲ್ಕರ್ ಪುತ್ರಿ ಮುಕ್ತಾ ಮತ್ತು ಪಾನ್ಸರೆ ಸೊಸೆ ಮೇಘನಾ ಪಾನ್ಸರೆ ಇರಲಿದ್ದಾರೆ.
ಕಲಬುರ್ಗಿ ಅವರ ಹತ್ಯೆ ಸಾಂಸ್ಕೃತಿಕ ಹತ್ಯೆ. ಅವರ ಹತ್ಯೆಯ ತನಿಖೆಯನ್ನು ಸಿಬಿಐ, ಸಿಐಡಿ ಬದಲು ವಿಶೇಷ ತನಿಖಾ ದಳಕ್ಕೆ ನೀಡುವ ಮೂಲಕ ಆದಷ್ಟು ಶೀಘ್ರ ಹಂತಕರನ್ನು
ಬಂಧಿಸಿ ಶಿಕ್ಷಿಸಬೇಕು.
-ಗದಗ ತೋಂಟದಾರ್ಯ ಶ್ರೀಗಳು
ಈ ನಾಡಿನಲ್ಲಿ ಇಂತಹ ಹತ್ಯೆಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವವನ್ನೇ ಪ್ರಶ್ನಿಸುತ್ತದೆ. ಸರ್ಕಾರ ಕೂಡಲೇ ಕಲಬುರ್ಗಿ ಅವರ ಹಂತಕರನ್ನು ಹಿಡಿಯಲು ಗಂಭೀರ ಪ್ರಯತ್ನ
ಮಾಡುವ ಮೂಲಕ ನಾಗರಿಕರ ರಕ್ಷಣೆಗೆ ಮುಂದಾಬೇಕು.
-ಎಸ್.ಆರ್. ಹಿರೇಮಠ, ಹೋರಾಟಗಾರ
ಕಲಬುರ್ಗಿ ಅವರದ್ದು ವ್ಯಕ್ತಿಯ ಸಾವಲ್ಲ, ವಿದ್ವತ್ ಸಾವು. ವಿಚಾರದಲ್ಲಿ ಭಿನ್ನತೆ ಇದ್ದರೆ ವಿಚಾರದ ಮೂಲಕವೇ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಈ ರೀತಿ 77 ವಯಸ್ಸಿನ ಹಿರಿಯರಿಗೆ ಗುಂಡಿಟ್ಟು ಕೊಲ್ಲುವುದು ಹೇಡಿತನ.
-ಬಂಜಗೆರೆ ಜಯಪ್ರಕಾಶ ,ಸಾಹಿತಿ
ಕನ್ನಡದ ನೆಲ, ಜಲಕ್ಕಾಗಿ ಧಾರವಾಡದಲ್ಲಿ ದೊಡ್ಡ ದೊಡ್ಡ ಪ್ರತಿಭಟನೆಗಳು ನಡೆದಿದ್ದು, ಇದೀಗ ವಿದ್ವಾಂಸ ಕಲಬುರ್ಗಿ ಹತ್ಯೆಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವುದು ಸೋಜಿಗದ ಸಂಗತಿ. ಇದು ಇಲ್ಲಿಗೇ ಕೊನೆಯಾಗಬೇಕಿದೆ.
- ರಾಜೇಂದ್ರ ಚೆನ್ನಿ ,ಚಿಂತಕ
ನಾಡಿನ ಚಿಂತಕರನ್ನು ಬದುಕಿಸಲಾಗದ ಸರ್ಕಾರ ಆರ್ಥಿಕ ಭವಿಷ್ಯ ಗಟ್ಟಿಮಾಡಿಕೊಂಡರೆ ಏನು ಬಂತು? ಸಮಾಜದಲ್ಲಿ ವೈಚಾರಿಕ ಸಂಘರ್ಷ ನಡೆಯುತ್ತಿದ್ದು, ಇದಕ್ಕೆ
ಕಡಿವಾಣ ಹಾಕಬೇಕಿದೆ.
-ಡಾ. ಮಾಲತಿ ಪಟ್ಟಣಶೆಟ್ಟಿ ,ಸಾಹಿತಿ
ಸಿಐಡಿ ತನಿಖೆ ಪ್ರಗತಿಯಲ್ಲಿದೆ: ಡಿಜಿಪಿ ಕಿಶೋರ್‍ಚಂದ್ರ
ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಕುರಿತ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಈ ಕುರಿತು ಯಾವ ಮಾಹಿತಿಯನ್ನೂ ನೀಡಲಾಗದು ಎಂದು ಸಿಐಡಿ ಡಿಜಿಪಿ ಕಿಶೋರ್‍ಚಂದ್ರ ಹೇಳಿದರು.
ಸೋಮವಾರ ಇಲ್ಲಿನ ಡಾ. ಎಂ.ಎಂ. ಕಲಬುರ್ಗಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ತನಿಖೆಯ ಪ್ರಗತಿ ವರದಿಯನ್ನು ನಿತ್ಯವೂ ಸರ್ಕಾರಕ್ಕೆ ನೀಡುತ್ತಿದ್ದು, ನಿರ್ದಿಷ್ಟವಾಗಿ ಯಾವುದೇ ಮಧ್ಯಂತರ ವರದಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಮಧ್ಯಾಹ್ನವೇ ನಗರಕ್ಕೆ ಆಗಮಿಸಿದ ಕಿಶೋರ್ ಚಂದ್ರ ಅವರು ಸಿಐಡಿ ಹಾಗೂ ಸ್ಥಳೀಯ ಪೊಲೀಸರಿಂದ ತನಿಖೆಯ ಮಾಹಿತಿ ಪಡೆದರು. ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರನ್ನು ಸಕ್ರ್ಯುಟ್ ಹೌಸ್‍ಗೆ ಕರೆಸಿಕೊಂಡು ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಡಾ. ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿದ ಅವರು, ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದರು. ಅವರ ಮನೆಯಲ್ಲಿ ಎಸ್‍ಪಿ ಡಾ. ಡಿ.ಸಿ. ರಾಜಪ್ಪ ಹಾಗೂ ಕಿಶೋರಚಂದ್ರ ಮಾತ್ರ ಇದ್ದರು. ಉಳಿದ ಸಿಐಡಿ ಪೊಲೀಸರಿಗೂ ಪ್ರವೇಶ ನಿರ್ಬಂಧಿ ಸಲಾಗಿತ್ತು. ನಂತರ ಎದುರಿಗಿರುವ ವಸತಿ ಸಮುಚ್ಛಯದ ಕೆಲವು ನಿವಾಸಿಗಳಿಂದ ಹಾಗೂ ಘಟನೆ ನಡೆದ ಸಂದರ್ಭದಲ್ಲಿ ಇದ್ದ ಕೆಲವೊಂದಿಷ್ಟು ಮಂದಿಯಿಂದ ಹೇಳಿಕೆ ಪಡೆದರು. ಅಂತಿಮವಾಗಿ ಹಿರಿಯ ಕವಿ ಡಾ. ಚನ್ನವೀರ ಕಣವಿ ಅವರ ಮನೆಗೆ ಭೇಟಿ ಅವರಿಂದಲೂ ಕೆಲವೊಂದು ಮಾಹಿತಿ ಪಡೆದರು.
Advertisement