
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಲಂಚ ಪ್ರಕರಣ ಆರೋಪ ಸಂಬಂಧ ಎಸ್ಐಟಿ ತನಿಖೆ ಎದುರಿಸುತ್ತಿರುವ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ವಿರುದ್ಧ ಹೈಕೋರ್ಟ್ ನಲ್ಲಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹುದ್ದೆಗೆ ರಾಜೀನಾಮೆ ನೀಡದೆಯೇ ಲೋಕಾಯುಕ್ತ ಹುದ್ದೆ ಸ್ವೀಕರಿಸಿದ್ದಾರೆ ಎಂದು ಆರೋಪಿ ಭ್ರಷ್ಟಾಚಾರ ವಿರೋಧಿ ಟ್ರಸ್ಟ್ ಅರ್ಜಿ ದಾಖಲಿಸಿದೆ.
ಆರೋಪವೇನು? ನ್ಯಾ.ಭಾಸ್ಕರ್ ರಾವ್ ಜೂನ್ 26 , 2000 ರಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತಗೊಂಡ ನಂತರ 2001 ರ ಜ.1 ರಂದು ಸುಪ್ರೀಂ ಕೋರ್ಟ್ ಸೀನಿಯರ್ ಕೌನ್ಸಿಲ್ ಗೆ ನೇಮಕಗೊಂಡಿದ್ದರು. 2013 ರ ಫೆಬ್ರವರಿಯಲ್ಲಿ ಕರ್ನಾಟಕ ಲೋಕಾಯುಕ್ತರಾಗಿ ನೇಮಕವಾಗಿದ್ದರು.
ಲೋಕಾಯುಕ್ತ ಕಾಯ್ದೆ 1984 ರ ಪ್ರಕಾರ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಹುದ್ದೆ ಹೊಂದುವ ವ್ಯಕ್ತಿ ಸರ್ಕಾರ ಅಥವಾ ಸರ್ಕಾರಿ ಪ್ರಾಧಿಕಾರ, ವಿಶ್ವವಿದ್ಯಾಲಯ ಮತ್ತು ಸಹಕಾರ ಹಾಗೂ ವಾಣಿಜ್ಯ ಕಂಪನಿಯಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದಿರಬಾರದು.
ಒಂದು ವೇಳೆ ಹುದ್ದೆ ಹೊಂದಿದ್ದರೂ, ಲೋಕಾಯುಕ್ತರಾಗಿ ನೇಮಕವಾಗುವ ಮುನ್ನ ಅಥವಾ ನಂತರ ಆ ಹುದ್ದೆ ತ್ಯಜಿಸಬೇಕು. ಆದರೆ ನ್ಯಾ.ರಾವ್ ನಡಾವಳಿ ಲೋಕಾಯುಕ್ತ ಕಾಯ್ದೆ ಮತ್ತು ಭಾರತೀಯ ವಕೀಲ ಪರಿಷತ್ ನ ಅಧಿನಿಯಮಗಳ ನಿಯಮ 49 ರ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
Advertisement