ಕಲಾವಿದರು ಬಡವರು, ಅವರ ಕಲಾವಂತಿಕೆ ಶ್ರೀಮಂತ

`ಕಲಾವಿದರು ಬಡವರಿರಬಹುದು; ಆದರೆ ಅವರಿಗಿರುವ ಕಲಾವಂತಿಕೆ ಶ್ರೀಮಂತವಾದದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಾವಿದರ...
ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಸಾಧಕರು (ಕೃಪೆ : ಕೆಪಿಎನ್ )
ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಸಾಧಕರು (ಕೃಪೆ : ಕೆಪಿಎನ್ )
Updated on

ಬೆಂಗಳೂರು: `ಕಲಾವಿದರು ಬಡವರಿರಬಹುದು; ಆದರೆ ಅವರಿಗಿರುವ ಕಲಾವಂತಿಕೆ ಶ್ರೀಮಂತವಾದದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಾವಿದರ ಶ್ರದ್ಧಾಪೂರ್ವಕ ಸೇವೆಯನ್ನು ಕೊಂಡಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಏರ್ಪಡಿಸಿದ್ದ 2014ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಹನ್ನೆರಡು ಸಾಧಕರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ಒಂದು ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಲು ತಪಸ್ಸು ಮಾಡಬೇಕಾಗುತ್ತದೆ. ಸಾಹಿತ್ಯ, ಸಂಗೀತ, ನಾಟಕ ಸೇರಿದಂತೆ ಇನ್ನಿತರಕ್ಷೇತ್ರದಲ್ಲಿ ತಪಸ್ಸು ಮಾಡಿದವರು ಮಾತ್ರ ಸಾಧಕರಾಗುತ್ತಾರೆ. ಇವರೆಲ್ಲರೂ ಸಮಾಜದ ಆಸ್ತಿ. ಇವರನ್ನು ಗೌರವಿಸಿದರೆ ನಮ್ಮನ್ನು ನಾವೇ ಗೌರವಿಸಿಕೊಂಡಂತೆ. ನಮ್ಮ ಸರ್ಕಾರ ಎಲ್ಲ ಪ್ರಶಸ್ತಿಗಳನ್ನು ಪಾರದರ್ಶಕವಾಗಿ ಅರ್ಹರಿಗೆ, ಯೋಗ್ಯರಿಗೆ ನೀಡಬೇಕೆಂದು ಆಯ್ಕೆ ಸಮಿತಿ ರಚಿಸಿದೆ. ಯಾವುದೇ ಶಿಫಾರಸು, ಒತ್ತಾಯಕ್ಕೆ ಮಣಿಯದೆ ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಹಿಂದಿನ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ಗೊತ್ತು ಗುರಿ ಇಲ್ಲದೆ ಆಯ್ಕೆ ಮಾಡುತ್ತಿತ್ತು. ನಾವು ಅಧಿಕಾರಕ್ಕೆ ಬಂದು ಬದಲಾವಣೆ ತಂದಿದ್ದೇವೆ. ಆಯ್ಕೆ ಸಮಿತಿಯನ್ನು ರಚಿಸಿ, ಕರ್ನಾಟಕ ಏಕೀಕರಣವಾಗಿ ಎಷ್ಟು ವರ್ಷವಾಯಿತೋ ಅಷ್ಟೇ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಈ ಬಾರಿ 59 ಮಂದಿಗೆ ಪ್ರಶಸ್ತಿ ನೀಡಲಾ ಗುವುದು ಎಂದು ತಿಳಿಸಿದರು. ನಮ್ಮ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಳುಹಿಸಿಕೊಡುವ ಎಲ್ಲ ಪ್ರಸ್ತಾವನೆಗಳಿಗೂ ಅನುಮೋದನೆ ನೀಡಲಾಗುತ್ತಿದೆ. ಸಾಹಿತ್ಯ, ಸಂಸ್ಕೃತಿ, ಕಲೆ ಉಳಿಸಿ ಬೆಳೆಸಲು ಪಣ ತೊಟ್ಟಿದ್ದು, ಎಲ್ಲ ಪ್ರಶಸ್ತಿಗಳನ್ನು ಅದೇ ವರ್ಷ ನೀಡುವುದು, ಜತೆಗೆ ಮಾಸಾಶನಕ್ಕಾಗಿ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರು ಜಿಲ್ಲಾ ಉಸ್ತುವಾರಿ ಹಾಗೂಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಿ.ಜಿ. ನಂದಕುಮಾರ್, ನಿರ್ದೇಶಕ ಕೆ. ಎ, ದಯಾನಂದ ಉಪಸ್ಥಿತರಿದ್ದರು.



ಪ್ರಶಸ್ತಿ ಸ್ವೀಕರಿಸಿದ ಸಾಧಕರು
2014ನೇ ಸಾಲಿನ ವಿವಿಧ ಪ್ರಶಸ್ತಿಗೆ ಭಾಜನರಾದ ಲಯವಾದ್ಯಗಾರ ಎಲ್. ಭೀಮಾಚಾರ್ (ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ), ತಬಲವಾದಕ ರಘುನಾಥ ನಾಕೋಡ್ (ನಿಜಗುಣ ಪುರಂದರ ಪ್ರಶಸ್ತಿ), ಸುಗಮ ಸಂಗೀತಗಾರ ರಾಜಗುರು ಗುರುಸ್ವಾಮಿ ಕಲಿಕೇರಿ (ಸಂತ ಶಿಶುನಾಳ ಷರೀಫ ಪ್ರಶಸ್ತಿ), ವೃತ್ತಿ ರಂಗ ಕಲಾವಿದೆ ಕೆ. ರಂಗನಾಯಕಮ್ಮ (ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ), ಗಮಕ ವಿದ್ವಾಂಸರಾದ ಕಮಲಾ ರಾಮಕೃಷ್ಣ (ಕುಮಾರವ್ಯಾಸ ಪ್ರಶಸ್ತಿ), ಜಾನಪದ ಕಲಾವಿದ ಕಲ್ಮನೆ ಎ.ಎಸ್.ನಂಜಪ್ಪ (ಜಾನಪದಶ್ರೀ ಪ್ರಶಸ್ತಿ), ಚಿತ್ರಕಲಾವಿದ ವ್ಹಿ.ಟಿ.ಕಾಳೆ (ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ), ಶಿಲ್ಪಿ ಷಣ್ಮುಖಪ್ಪ ಕಾಶಪ್ಪ ಯರಕದ (ಜಕಣಾಚಾರಿ ಪ್ರಶಸ್ತಿ), ಲೇಖಕಿ ಡಾ.ಎಚ್.ಎಸ್.ಶ್ರೀಮತಿ (ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ), ಹೋರಾಟಗಾರ್ತಿ ಡಾ.ಬಿ.ಟಿ. ಲಲಿತಾನಾಯಕ್ (ಸಂಗೊಳ್ಳಿ ರಾಯಣ್ಣ ಪ್ರಶಸ್ತಿ), ನಿಘಂಟು ತಜ್ಞ
ಶಾಂತಪ್ಪ ಶರಣಪ್ಪ ದೇವರಾಯ (ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ) ಅವರಿಗೆ ಪ್ರಶಸ್ತಿ ಹಾಗೂ ರು.3 ಲಕ್ಷ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಂತಲಾ ನಾಟ್ಯ ಪ್ರಶಸ್ತಿಗೆ ಭಾಜನರಾಗಿದ್ದ ಮಾ. ವಿಠ್ಠಲ್ ಶೆಟ್ಟಿಅವರು ವಿಧಿವಶರಾದ ಹಿನ್ನೆಲೆಯಲ್ಲಿ ಅವರ ಪರವಾಗಿ ಸಹೋದರನ ಪುತ್ರಿ ಶಿಲ್ಪ ಪ್ರಶಸ್ತಿ ಸ್ವೀಕರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com