ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಎಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ರಾಜ್ಯದಲ್ಲಿ ಪ್ರಸ್ತುತ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅಂದಾಜು ವೆಚ್ಚ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಇದು ಯಾವ ರೀತಿಯ ಲೆಕ್ಕಾಚಾರ ಎಂಬುದು ತಿಳಿಯುತ್ತಿಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಜಿನಿಯರ್‍ಗಳನ್ನು ತರಾಟೆ ತೆಗೆದುಕೊಂಡರು...

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅಂದಾಜು ವೆಚ್ಚ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಇದು ಯಾವ ರೀತಿಯ ಲೆಕ್ಕಾಚಾರ ಎಂಬುದು ತಿಳಿಯುತ್ತಿಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಜಿನಿಯರ್‍ಗಳನ್ನು ತರಾಟೆ ತೆಗೆದುಕೊಂಡರು.

ಕರ್ನಾಟಕ ಎಂಜಿನಿಯರುಗಳ ಒಕ್ಕೂಟ, ಕರ್ನಾಟಕ ಎಂಜಿನಿಯರುಗಳ ಸಂಘ ಮಂಗಳವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಏರ್ಪಡಿಸಿದ್ದ `ಸರ್ ಎಂ.ವಿಶ್ವೇಶ್ವರಯ್ಯ ಅವರ 155ನೇ ಜನ್ಮದಿನ ಹಾಗೂ ಎಂಜಿನಿಯರುಗಳ ದಿನ-2015' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಲ್ಲಿ ಹೋಗುತ್ತಿದೆ ಹಣ?: ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸುಮಾರು ರು.50ರಿಂದ 60 ಸಾವಿರ ಕೋಟಿ ವೆಚ್ಚ ತಗುಲಲಿದೆ ಎಂದು ಅಂದಾಜು ಮೊತ್ತ ನಿಗದಿ ಮಾಡಿದ್ದ ಎಂಜಿನಿಯರ್‍ಗಳು ಈಗ ಪ್ರತಿ ವರ್ಷ ಸುಮಾರು ರು.1 ಲಕ್ಷದ 10 ಸಾವಿರ ಕೋಟಿ ಬೇಕು ಎಂದು ಹೇಳಿದ್ದಾರೆ. ಮೊದಲಿನ ಹಾಗೂ ಈಗಿನ ಎರಡೂ ಮೊತ್ತ ನಿಗದಿ ಮಾಡಿದ್ದು ಎಂಜಿನಿಯರ್‍ಗಳೇ. ಆದರೂ ವ್ಯತ್ಯಾಸ ಬರುತ್ತಿದೆ. ಹಲವು ವರ್ಷಗಳಿಂದ ನೀರಾವರಿ ಯೋಜನೆಗಳಿಗಾಗಿ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆದರೂ ಯೋಜನೆ ಮುಕ್ತಾಯವಾಗಿಲ್ಲ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ಯಾವುದೇ ಕಾಮಗಾರಿಗೆ ಸಂಬಂಧಿಸಿದಂತೆ ಅಂದಾಜು ವೆಚ್ಚ ಹಾಗೂ ಪರಿಶೀಲನಾ ವೆಚ್ಚ ಸರಿದೂಗಿಸಬೇಕು. ಆಗಿರುವ ತಪ್ಪು ಸರಿಪಡಿಸಬೇಕು. ನಾನು ಹಣಕಾಸು ಸಚಿವ ಆದಾಗಿನಿಂದ ಗಮನಿಸುತ್ತಲೇ ಇದ್ದೇನೆ. ಪ್ರಸ್ತುತ ಕಾಮಗಾರಿಗಳ ಕುರಿತು ಆಯವ್ಯಯದಲ್ಲಿ ಸಾಕಷ್ಟು ವ್ಯತ್ಯಾಸ ಕಾಣಿಸುತ್ತಿದೆ. ಸರ್ಕಾರ ಅಧಿಕಾರಕ್ಕೆ ಬರುವಾಗ ಹೇಳಿದ್ದ ಹಾಗೂ ಈಗ ಹೇಳುತ್ತಿರುವ ಮೊತ್ತವೇ ಬೇರೆ. ಈ ಎರಡೂ ಆಯವ್ಯಯದ ವೆಚ್ಚ ಹೋಲಿಸಿದರೆ ಸಾಕಷ್ಟು ವ್ಯತ್ಯಾಸ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂಜಿನಿಯರ್‍ಗಳನ್ನು ತರಾಟೆಗೆ ತೆಗೆದು ಕೊಂಡರು.

ಎಲ್ಲರೂ ಮಹಾನ್ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಕೊನೆಪಕ್ಷ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಅದೇ ನಾವು ಅವರಿಗೆ ನೀಡುವ ಗೌರವ ಎಂದ ಅವರು, ಸಂಘ ಹಾಗೂ ಒಕ್ಕೂಟಗಳು ನೀಡಿರುವ ಮನವಿಯನ್ನು ಸರ್ಕಾರದ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಪರಿಶೀಲಿಸಿ, ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಅಶ್ವತ್ಥ ನಾರಾಯಣ, ಸಂಘ ಹಾಗೂ ಒಕ್ಕೂಟದ ಎಂಜಿನಿಯರ್‍ಗಳಾದ ಎಂ. ನಾಗರಾಜ್, ಎ.ಎಂ. ಶಿವಶಂಕರ್, ವಿ. ವೆಂಕಟಶಿವಾರೆಡ್ಡಿ, ಕೆ.ಟಿ. ನಾಗರಾಜ್ ಸೇರಿದಂತೆ ನೂರಾರು ಎಂಜಿನಿಯರ್ ಗಳು ಭಾಗವಹಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com