ಪಿವಿಎನ್ ಮೊಮ್ಮಗನಂತೆ ಅಶ್ವಿನ್‍ರಾವ್!

ಲೋಕಾಯುಕ್ತ ಭ್ರಷ್ಟಾಚಾರದ ಬಗ್ಗೆ ಎಸ್‍ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಲೋಕಾಯುಕ್ತರ ಪುತ್ರನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲೋಕಾಯುಕ್ತ ಭ್ರಷ್ಟಾಚಾರದ ಬಗ್ಗೆ ಎಸ್‍ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಲೋಕಾಯುಕ್ತರ ಪುತ್ರನ ಅಕ್ರಮ ಚಟುವಟಿಕೆಗಳ ಹೂರಣ ಜಗಜ್ಜಾಹೀರಾಗಿದೆ.

ಲೋಕಾಯುಕ್ತದಲ್ಲಿನ ಕೇಸ್ ಮುಚ್ಚಿಹಾಕಲು,ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವುದು, ದಾಳಿ ನಡೆಯದಂತೆ ನೋಡಿಕೊಳ್ಳುವುದು ಹೀಗೆ ಹಲವು ಸುಳ್ಳುಗಳ ಸರಮಾಲೆ ಸೃಷ್ಟಿಸುತ್ತಾ ಸುಲಿಗೆಗೆ ಇಳಿದಿದ್ದ ಅಶ್ವಿನ್‍ರಾವ್ ತಾನು ಮಾಜಿ ಪ್ರಧಾನಿ ದಿ.ಪಿ.ವಿ ನರಸಿಂಹರಾವ್ ಅವರ ಮೊಮ್ಮಗ ಎಂದು ಹೇಳಿಕೊಂಡಿದ್ದ. ತಾನು ಕೇಂದ್ರದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು ಎಲ್ಲ ಕೆಲಸಗಳನ್ನು ಮಾಡಿಕೊಡುವುದಾಗಿ ಬುರುಡೆಬಿಟ್ಟಿದ್ದ.

ಈ ಸಂಬಂಧ ಹಾವೇರಿ ಶಾಸಕ ಮನೋಹರ್ ತಹಸೀಲ್ದಾರ್ ಅವರ ಆಪ್ತ ಹಾಗೂ ಜಲ್ಲಿ ಕ್ರಷರ್ವೊಂದರ ಮಾಲೀಕ ಶಿವಯೋಗಿ ಹಿರೇಮಠ್ ಎಸ್ ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಹಾನಗಲ್ ಜಿಲ್ಲಾ ಕಾಂಗ್ರೆಸ್ ಸದಸ್ಯನಾದ ನಾನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಜಿಲ್ಲಾ ಸಂಚಾಲಕ. ಹಲವು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು,ಪಕ್ಷ ಅಧಿಕಾರದಲ್ಲಿರುವ ಕಾರಣ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗಬಹುದೆಂದು ನಿರೀಕ್ಷಿಸಿದ್ದೆ. ಕೆಲ ಶಾಸಕರ ಶಿಫಾರಸಿನೊಂದಿಗೆ ನನ್ನ ವಿವರಗಳನ್ನು ಪಕ್ಷದ ಅಧ್ಯಕ್ಷರಿಗೆ ಕಳುಹಿಸಿದ್ದೆ.ಅದಕ್ಕಾಗಿ ಓಡಾಡಿಕೊಂಡಿದ್ದಾಗ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ  ಕಾರ್ಯದರ್ಶಿಯಾಗಿದ್ದ ಸುರೇಶ್ ಹಿರೇಮಠ ಅವರು ಬೆಂಗಳೂರಿನ ರೇಸ್‍ವ್ಯೂ ಹೋಟೆಲ್ ನಲ್ಲಿ ಅಚಾನಕ್ ಭೇಟಿಯಾಗಿದ್ದರು. ನಿಗಮ ಮಂಡಳಿ ಸ್ಥಾನಕ್ಕಾಗಿ ಓಡಾಡುತ್ತಿರುವ ವಿಷಯ ತಿಳಿದ ಅವರು, 2015ರ ಫೆಬ್ರವರಿಯಲ್ಲಿ ಅಶೋಕ್ ಕುಮಾರ್ ಎಂಬುವವರನ್ನು ಪರಿಚಯಿಸಿದರು. ಮಾರ್ಚ್‍ನಲ್ಲಿ ಎರಡು ಮೂರು ಬಾರಿ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ವಿ.ಭಾಸ್ಕರ್‍ನನ್ನು ಭೇಟಿ ಮಾಡಿಸಿ, ಇವರೇ ನಿಮ್ಮ ಕೆಲಸ ಮಾಡಿಸಿಕೊಡುತ್ತಾರೆ. ಇವರ ಜತೆ ಹೈದ್ರಾಬಾದ್‍ಗೆ ಹೋಗಬೇಕಾಗುತ್ತದೆ. ನಿಮ್ಮ ಪ್ರೊಫೈಲ್ ರೆಡಿ ಮಾಡಿಕೊಳ್ಳಿ. ಈ ತಿಂಗಳ ಕೊನೆ ವಾರದಲ್ಲಿ ಹೈದ್ರಾಬಾದ್‍ಗೆ ಹೋಗಬೇಕು. ಅಲ್ಲಿ ಮಾಜಿ ಪ್ರಧಾನಿ ದಿ.ಪಿ.ವಿ ನರಸಿಂಹರಾವ್ ಅವರ ಮೊಮ್ಮಗನನ್ನು ನಿಮಗೆ ಭೇಟಿ ಮಾಡಿಸುತ್ತೇವೆ ಎಂದು ಅಶೋಕ್ ಹೇಳಿದ್ದರು.

ನನಗೆ ಹಾವೇರಿ ತುಂಗಾ ಮೇಲ್ದಂಡೆ ಯೋಜನೆ ಎಂಜಿನಿಯರ್ ಚನ್ನಬಸಪ್ಪ ಅವರ ಪರಿಚಯವಿದ್ದು ಅವರ ವಿರುದ್ಧ ಲೋಕಾಯುಕ್ತ ದಾಳಿ ನಡೆದಿರುವ ವಿಚಾರ ತಿಳಿದಿತ್ತು.ಮಾತನಾಡುವಂತೆ ಅವರನ್ನು ಅಶೋಕ್‍ಗೆ ಪರಿಚಯಿಸಿದ್ದೆ. ಚನ್ನಬಸಪ್ಪ ಅವರ ಕೇಸ್ ಅನ್ನು ಮುಚ್ಚಿಹಾಕಲು ಸಹಾಯ ಮಾಡುವುದಾಗಿ ಅಶೋಕ್ ಅಶ್ವಾಸನೆ ನೀಡಿದ್ದ.
2015ರ ಏ.2ರಂದು ನಾನು, ಭಾಸ್ಕರ್ ಮತ್ತು ಚನ್ನಬಸಪ್ಪ ಏರ್ ಕೋಸ್ಟಾ ವಿಮಾನದಲ್ಲಿ ಬೆಂಗಳೂರಿನಿಂದ ಹೈದ್ರಾಬಾದ್‍ಗೆ ಹೋಗಿ, ಅಮೀರ್‍ಪೇಟ್‍ನಲ್ಲಿರುವ ಸಿತಾರ ಲಾಡ್ಜ್‍ಗೆ ಹೋದೆವು. ಅಲ್ಲಿಗೆ ಕರ್ನಾಟಕ ಕೋ-ಆಪರೇಟಿವ್ ಸೊಸೈಟಿ ಫೆಡರೇಷನ್ ಸೊಸೈಟಿ ಉಪಾಧ್ಯಕ್ಷ ಸಿದ್ದರಾಮರೆಡ್ಡಿ ಹಾಗೂ ಶಹಾಪುರದಲ್ಲಿ ಕಂಟ್ರಾಕ್ಟರ್ ಆಗಿರುವ ನಿಂಗನಗೌಡ ಹೊಸಮನಿ ಕೂಡ ಬಂದರು.

ಸಿದ್ದರಾಮರೆಡ್ಡಿ ಅವರು ಯಾವುದಾದರೂ ವರ್ಕ್ ಇದ್ದರೆ ಹೇಳಿ. ಗೆಳೆಯ ಹೊಸಮನಿ ಅವರಿಗೆ ಕೊಡಿಸಿ ಅವರೂ ಟೆಂಡರ್ ಹಾಕುತ್ತಾರೆ ಎಂದರು. ಆದರೆ, ಹೊಸಮನಿಯವರು ನಿಮ್ಮ ಏರಿಯಾ ದೂರವಾಗುತ್ತದೆ. ನಮ್ಮ ಕಲಬುರ್ಗಿ ಜಿಲ್ಲೆಯ ಡಿ.ವೈ.ಉಪ್ಪಾರ ಅವರಿಗೆ 350-400 ಕೋಟಿ ರೂಪಾಯಿ ಟೆಂಡರ್ ಮಂಜೂರಾಗಿದ್ದು ನಮಗೆ ಸಬ್ ಕಾಂಟ್ರ್ಯಾಕ್ಟ್ ಮಾಡಿಸಿ ಕೊಡಿ ಎಂದರು. ಈ ವಿಚಾರ ಅಶೋಕ್‍ಗೆ ತಿಳಿಸಿದ ಕಾರಣ ಆ ಇಬ್ಬರನ್ನು ಅಶೋಕ್
ಆಹ್ವಾನದ ಮೇರೆಗೆ ಹೈದ್ರಾಬಾದ್‍ಗೆ ಬರಲು ಹೇಳಿದ್ದೆ.

ಅದರಂತೆ ಎಲ್ಲರೂ ಹೈಟೆಕ್ ಸಿಟಿಯಲ್ಲಿರುವ ಅವಾಸ್ ಹೋಟೆಲ್‍ನಲ್ಲಿ ಕುಳಿತಿದ್ದಾಗ ಅಶೋಕ್ ಹಾಗೂ ವಿ.ಭಾಸ್ಕರ್, ಅಶ್ವಿನ್‍ರಾವ್ ಅವರನ್ನು ಕರೆತಂದು ಇವರೇ ಪಿ.ವಿ.ನರಸಿಂಹರಾವ್ ಅವರ ಮೊಮ್ಮಗ ಎಂದು ಪರಿಚಯಿಸಿದರು. ನಮ್ಮ ಕೆಲಸದ ಬಗ್ಗೆ ವಿವರಿಸಿದಾಗ ಅಶ್ವಿನ್ ಅವರು ಭಾಸ್ಕರ್‍ನನ್ನು ಒಮ್ಮೆ ಸೆಕ್ರೆಟರಿ ಅಂತಲೂ ಮತ್ತೊಮ್ಮೆ ಕೃಷ್ಣರಾವ್
ಎಂದೂ ಕರೆಯುತ್ತಿದ್ದರು.

ನಾನು ನಿಗಮ ಮಂಡಳಿ ಸ್ಥಾನದ ಬಗ್ಗೆ ಹೇಳಿದೆ.ಚನ್ನಬಸಪ್ಪ ಲೋಕಾಯುಕ್ತ ಕೇಸ್ ಬಗ್ಗೆ ಹೇಳಿದರು.ಆಗ ಅಶ್ವಿನ್ `ಓ ಕೆ ಐ ವಿಲ್ ಹೆಲ್ಪ್ ಯು' ಎಂದರು.ಬಳಿಕ ಸಿದ್ದರಾಮರೆಡ್ಡಿ ಹಾಗೂ ಹೊಸಮನಿ ಅವರು ತಮಗೆ 25 ಕೋಟಿ ರೂಪಾಯಿ ಗುತ್ತಿಗೆ ಕೊಡಿಸುವ ವಿಷಯ ಪ್ರಸ್ತಾಪಿಸಿದರು. ಎಲ್ಲ ಕೆಲಸಗಳನ್ನು ಮಾಡಿಕೊಡುವ ಭರವಸೆಯನ್ನು ಅಶ್ವಿನ್ ನೀಡಿದರು. ನಂತರ ನಾವು ಬೆಂಗಳೂರಿಗೆ ವಾಪಸ್ ಆದೆವು.

ಏ.4ರಂದು ಭಾಸ್ಕರ್ ಮತ್ತು ಅಶೋಕ್ ಕರೆ ಮಾಡಿ, ಅಶ್ವಿನ್‍ರಾವ್ ಸಾಹೇಬರು ಕಾಂಟ್ರ್ಯಾಕ್ಟ್ ವಿಚಾರ ಮಾತನಾಡಿದ್ದಾರೆ. ಹೀಗಾಗಿ ಮತ್ತೆ ಹೈದ್ರಾಬಾದ್‍ಗೆ ಬರಲು ಹೇಳಿದ್ದಾರೆ ಎಂದರು. ಅನಾರೋಗ್ಯದಿಂದಿದ್ದ ಶಾಸಕ ಮನೋಹರ್ ಕೂಡ ಚಿಕಿತ್ಸೆ ಪಡೆಯಲು ನಮ್ಮೊಂದಿಗೆ ಹೈದ್ರಾಬಾದ್‍ಗೆ ಬಂದರು. ಎಂದಿನಂತೆ ಎಲ್ಲರೂ ಏ.5ರಂದು ಅವಾಸ್ ಹೋಟೆಲ್‍ನ ಕೊಠಡಿಯಲ್ಲಿ ಅಶ್ವಿನ್ ಅವರನ್ನು ಭೇಟಿ ಮಾಡಿದೆವು. ಎಲ್ಲ ಕೆಲಸಗಳು ಆಗುತ್ತಿವೆ.ಚನ್ನಬಸಪ್ಪ ಅವರ ಕೇಸ್ ಕ್ಲೀಯರ್ ಮಾಡಲು ಹೇಳಿದ್ದೇನೆ. ನೀವು ಅಶೋಕ್ ಹಾಗೂ ಭಾಸ್ಕರ್ ಬಳಿ
ಮಾತನಾಡಿ ಎಂದರು.

ಸಿದ್ದರಾಮರೆಡ್ಡಿ ಹಾಗೂ ಹೊಸಮನಿಗೆ ಸಬ್ ಕಾಂಟ್ರ್ಯಾಕ್ಟ್ ಕೊಡಿಸಿದರೆ ಅದರಲ್ಲಿ ಶೇ.2ರಷ್ಟು ಕಮೀಷನ್, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ 50 ಲಕ್ಷ ಹಾಗೂ ಚನ್ನಬಸಪ್ಪ ಅವರ ಕೇಸ್ ಕ್ಲಿಯರ್ ಮಾಡಲು 20 ಲಕ್ಷ ರೂಪಾಯಿ ನೀಡಬೇಕೆಂದು ಅಶ್ವಿನ್‍ರಾವ್ ಹೇಳಿದ್ದಾರೆಂದು ನಂತರ ಅಶೋಕ್ ಹಾಗೂ ಭಾಸ್ಕರ್ ಹೇಳಿದರು. ಈ ವೇಳೆ ಅನುಮಾನಗೊಂಡ ಚನ್ನಬಸಪ್ಪ ಅವರು ಫೋನ್‍ನಲ್ಲಿ, ನನ್ನದು ಲೋಕಾಯುಕ್ತ ಕೇಸ್.ಅಶ್ವಿನ್‍ರಾವ್ ಹೇಗೆ ಕ್ಲಿಯರ್ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಅದಕ್ಕೆ ಭಾಸ್ಕರ್ ಮತ್ತು ಅಶೋಕ್, ಅಶ್ವಿನ್‍ರಾವ್ ಅವರು ಪಿ.ವಿ ನರಸಿಂಹರಾವ್ ಅವರ ಮೊಮ್ಮಗನೂ ಹೌದು ಕರ್ನಾಟಕ ಲೋಕಾಯುಕ್ತ
ಭಾಸ್ಕರ್‍ರಾವ್ ಅವರ ಮಗನೂ ಹೌದು ಎಂದರು.

ಈ ಎಲ್ಲ ಬೆಳವಣಿಗೆಗಳ ಬಳಿಕ ಭಾಸ್ಕರ್ ಹಾಗೂ ಅಶೋಕ್ ಅವರು ನಿರಂತರವಾಗಿ ಫೋನ್ ಮಾಡಿ ನಿಮ್ಮ ಕೆಲಸ ಆಗುತ್ತಿದೆ ಹಣ ಸಿದ್ಧವಾಗಿಟ್ಟುಕೊಳ್ಳಿ ಎನ್ನುತ್ತಿದ್ದರು. ನಮ್ಮ ಕೆಲಸವಾದರೆ ನಾವು ಹಣ ಕೊಡುತ್ತೇವೆ. ಆದರೆ, ಚನ್ನಬಸಪ್ಪ ಅವರ ಬಳಿ ಅಷ್ಟು ಹಣ ಇಲ್ಲ. ಲಾಯರ್ ಶುಲ್ಕ ಎಷ್ಟು ಆಗುತ್ತದೆ ಅಷ್ಟು ಮಾತ್ರ ಕೊಡುತ್ತೇನೆ ಎಂದರು.ಈ ನಡುವೆ ನಾವು ಅಶ್ವಿನ್‍ರಾವ್ ಅವರಿಗೆ ನೇರವಾಗಿ ಕರೆ ಮಾಡಿ ವಿಚಾರಿಸುತ್ತಿದ್ದೆವು. ಭಾಸ್ಕರ್ ಹಾಗೂ ಅಶೋಕ್ ಸೇರಿ ನಮ್ಮ ಕೆಲಸ ಮಾಡಿಕೊಡಲು ಹಣ ನೀಡುವಂತೆ ಪೀಡಿಸುತ್ತಿದ್ದರು. ಮುಂಗಡವಾಗಿ
ಖರ್ಚಿಗೆ 5 ಲಕ್ಷ  ರೂಪಾಯಿ ನೀಡುವಂತೆ ಹೇಳಿದರು. ಅದಕ್ಕಾಗಿ ಹಣ ವ್ಯವಸ್ಥೆ ಮಾಡಿ ತಾಜ್ ವೆಸ್ಟೆಂಡ್‍ಗೆ ಬಂದಾಗ ಭಾಸ್ಕರ್, ಅಶೋಕ್ ಹಣವನ್ನು ರಾಜಶೇಖರ್ ಎಂಬಾತನಿಗೆ ನೀಡಲು ಹೇಳಿದರು. ಅದರಂತೆ ರಾಜಶೇಖರ್ ಗೆ ನೀಡಿದ್ದೆ. ಎರಡು ಬಾರಿ ಹೈದ್ರಾಬಾದ್‍ಗೆ ಹೋಗುವಾಗ ತಲಾ 50 ಸಾವಿರದಂತೆ 1 ಲಕ್ಷ ಹಣವನ್ನು ಭಾಸ್ಕರನಿಗೆ ನೀಡಿದ್ದೆ. ಅದಾದ ಕೆಲ ದಿನಗಳಲ್ಲಿ ಎಲ್ಲ ವ್ಯಕ್ತಿಗಳ ಮೊಬೈಲ್ ಫೋನ್ ನಂಬರ್ ಗಳು ಸ್ವಿಚ್ ಆಫ್ ಆಗಿವೆ.

ಬೇನಾಮಿ ಹೆಸರಿನಲ್ಲಿ ಅಶ್ವಿನ್ ಸಿಮ್
ಎಂಸಿಎ ಪದವಿಧರನಾಗಿರುವ ನನಗೆ ಅಶ್ವಿನ್ ಯರಬಾಟಿ 2012ರಿಂದ ಪರಿಚಯ. ಸಿಕಂದರಾಬಾದ್ ಲುಂಬಿನಿ ಪಾರ್ಕ್ ಸಿಕ್ರೆಟರಿಯೇಟ್ ಬಳಿ ನಡೆದ ವಿಂಟೇಜ್ ಕಾರ್ ಷೋನಲ್ಲಿ ಪರಿಚಯವಾಗಿದ್ದರು. ಆಗಾಗ ಭೇಟಿ ಮಾಡುತ್ತಿದ್ದರು. ಬೋಯಿಗುಡದಲ್ಲಿರುವ ಗ್ಯಾರೇಜ್‍ನಲ್ಲಿ ಕೆಲಸ ಮಾಡುತ್ತಿದ್ದೆ.

ಭೇಟಿಯಾದಾಗೆಲ್ಲ ಏನಾದರೂ ಕೆಲಸವಿದ್ದರೆ ಹೇಳಿ ಎಂದು ಅಶ್ವಿನ್ ಅವರಿಗೆ ಕೇಳಿದ್ದೆ. ಅವರು
ನಮ್ಮ ಅಕ್ಷದಾ ಮೋಟರ್ ಗ್ಯಾರೇಜ್ ಉಸ್ತುವಾರಿ ನೋಡು. ಬೇರೆ ಇದ್ದರೆ ತಿಳಿಸುತ್ತೇನೆ ಎಂದರು.ಅದಕ್ಕೆ ನಾನು ಒಪ್ಪಿ ಕೆಲಸಕ್ಕೆ ಸೇರಿದ್ದೆ. ಅಶ್ವಿನ್ ಅವರು ಹಳೇ ಕಾರು ಖರೀದಿಸಿ ಗ್ಯಾರೇಜ್‍ನಲ್ಲಿ ವಿಂಟೇಜ್ ಲುಕ್ ಬರುವಂತೆ ಮಾಡಿ ಮಾರಾಟ ಮಾಡುತ್ತಿದ್ದರು. ಯಾವಾಗಲಾದರೂ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬರುತ್ತಿದ್ದರು. ಒಮ್ಮೆ ಅವರು 2 ಸಿಮ್ ಬೇಕು.ಬೇರೆಯವರ ಹೆಸರಿನಲ್ಲಿ ಖರೀದಿಸಿ ತಂದು ಕೊಡು ಎಂದಿದ್ದರು. ಬಾಲಾಜಿ ಟಂಕಿ ಎಂಬ ವ್ಯಕ್ತಿಯ ವೋಟರ್ ಐಡಿ ಝರಾಕ್ಸ್ ಪ್ರತಿ ಇದೆ ಎಂದಾಗ ಅದೇ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ಕೊಡಲು ಹೇಳಿದರು. ಅದರಂತೆ 2 ಸಿಮ್ ಗಳನ್ನು ಅವರಿಗೆ ನೀಡಿದ್ದೆ. ಅಧಿಕಾರಿಗಳೊಂದಿಗೆ ಮಾತನಾಡಲು ಅಶ್ವಿನ್ ರಾವ್ ಬಳಸುತ್ತಿದ್ದುದು ಇವೇ ಸಿಮ್ ಕಾರ್ಡ್‍ಗಳನ್ನು.


ಗಂಗಾರಾಮ್ ಬಡೇರಿಯಾಗೆ 5 ಕೋಟಿ ಡಿಮಾಂಡ್

1989ರ ಐಎಎಸ್ ಬ್ಯಾಚ್‍ಗೆ ಸೇರಿದ್ದ ನಾನು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭವದು. 2015ರ ಫೆಬ್ರವರಿಯಲ್ಲಿ ಒಬ್ಬ
ವ್ಯಕ್ತಿ ಮೊಬೈಲ್‍ಗೆ ಕಾಲ್ ಮಾಡಿ ಲೋಕಾಯುಕ್ತರನ್ನು ಭೇಟಿಯಾಗುವಂತೆ ತಿಳಿಸಿದರು. ಇಲಾಖೆಯ ಕೆಲಸ ಎಂದುಕೊಂಡು ಕಚೇರಿಗೆ ಬರಬೇಕಾ ಎಂದು ಕೇಳಿದೆ. ಅದಕ್ಕೆ, ಆ ವ್ಯಕ್ತಿ ಲೋಕಾಯುಕ್ತರ ಮನೆಗೆ ಬರಬೇಕು ಎಂದರು. ನೀವು ಯಾರು ಎಂದು ಕೇಳಿದಾಗ, ಲೋಕಾಯುಕ್ತರ ಪಿಎ ಎಂದು ಹೇಳಿದ.

ಮರುದಿನ ಅದೇ ವ್ಯಕ್ತಿ ಕರೆ ಮಾಡಿದ ಕಾರಣ ಕ್ರೆಸೆಂಟ್ ರಸ್ತೆಯಲ್ಲಿರುವ ಲೋಕಾಯುಕ್ತರ ನಿವಾಸಕ್ಕೆ ತೆರಳಿದ್ದೆ. ಕರೆ ಮಾಡಿದ ವ್ಯಕ್ತಿ ತಾನು ಕೃಷ್ಣರಾವ್ ಎಂದು ಪರಿಚಯಿಸಿಕೊಂಡು ಒಳಗೆ ಇದ್ದ ಇನ್ನೊಬ್ಬ ವ್ಯಕ್ತಿ ಲೋಕಾಯುಕ್ತರ ಮಗ ಅಶ್ವಿನ್ ಎಂದು ಪರಿಚಯಿಸಿದರು. ಬಳಿಕ ಅಶ್ವಿನ್,ನಿಮ್ಮ ಇಲಾಖೆಯಲ್ಲಿ ತುಂಬಾ ದೂರುಗಳಿವೆ.ನೀವು ಕೃಷ್ಣರಾವ್ ಜತೆ ಮಾತನಾಡಿಕೊಂಡು ಸರಿ ಮಾಡಿಕೊಳ್ಳಿ ಎಂದು ಇಂಗ್ಲಿಷ್ ಹಾಗೂ ತೆಲುಗು ಮಿಶ್ರಿತ ಭಾಷೆಯಲ್ಲಿ ಹೇಳಿದರು. ಆಗ ನಾನು ಇಲಾಖೆಯಲ್ಲಿ ಮಾವುದೇ ದೂರುಗಳು ಇಲ್ಲ ಎಂದೆ. ಅದಕ್ಕೆ ಕೃಷ್ಣರಾವ್, ಲೋಕಾಯುಕ್ತ ಎಡಿಜಿಪಿ ಬಳಿ ಮಾತನಾಡಿ ನಿಮ್ಮ ಎಲ್ಲ ದೂರುಗಳನ್ನು ಬಗೆಹರಿಸುತ್ತೇನೆ. ನೀವು ಏನಾದರೂ ಮಾಡಬೇಕು ಎಂದು ತಿಳಿಸಿದರು. ಆದರೆ, ನಾನು ಏನನ್ನೂ ಮಾತನಾಡದೆ ಅಲ್ಲಿಂದ ಹೊರಟುಬಿಟ್ಟೆ.ಒಂದು ವಾರದ ಬಳಿಕ ಮತ್ತೆ ಕರೆ ಮಾಡಿದ ವ್ಯಕ್ತಿ, ಲೋಕಾಯುಕ್ತರ ಮಗ ಅಶ್ವಿನ್ ಹೇಳಿದ ವಿಚಾರದ ಬಗ್ಗೆ ನೀವು ಏನೂ ಮಾತನಾಡಿಲ್ಲ. ನಾನು ಏಟ್ರಿಯಾ ಹೋಟೆಲ್‍ನಲ್ಲಿದ್ದು ಕೂಡಲೇ ಬಂದು ಮಾತನಾಡಿ ಎಂದು ಹೇಳಿದ.

ಇದರಿಂದ ತುಂಬಾ ಕೋಪ ಬಂದಿತ್ತು. ಹೀಗೆ ಬಿಟ್ಟರೆ ಇವರು ಮುಂದುವರಿಸುತ್ತಾರೆಂದು ಹೋಟೆಲ್‍ಗೆ ಹೋಗಿದ್ದೆ.ಅಲ್ಲಿ ಕೃಷ್ಣರಾವ್ ಎಂಬಾತನ ಭೇಟಿ ಮಾಡಿದಾಗ ನಿಮ್ಮ ಇಲಾಖೆಗೆ ಪ್ರತಿ ವರ್ಷ 5 ಸಾವಿರ ಕೋಟಿಗೂ ಅಧಿಕ ಅನುದಾನ ಬರುತ್ತದೆ. ಅದರಲ್ಲಿ ಅಶ್ವಿನ್ ಅವರಿಗೆ 5 ಕೋಟಿ ರೂಪಾಯಿ ನೀಡಬೇಕು.ಇಲ್ಲದಿದ್ದರೆ ನಿಮಗೆ ತೊಂದರೆಯಾಗುತ್ತದೆ ಎಂದ.ಆಗ, ನನ್ನ ಮೇಲೆ ಯಾವುದೇ ಕಂಪ್ಲೆಂಟ್ ಇಲ್ಲ.ನೀವು ಏನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ಎಂದು ದಬಾಯಿಸಿ ಅಲ್ಲಿಂದ ಬಂದುಬಿಟ್ಟೆ.ಅದಾದ 2 ದಿನಗಳ ಬಳಿಕ ಮತ್ತೆ ಆ ವ್ಯಕ್ತಿ ಕರೆ ಮಾಡಿ ಭೇಟಿ ಮಾಡಲು ಹೇಳುತ್ತಿದ್ದ. ಅಲ್ಲದೇ,ಅಶ್ವಿನ್ ನಂಬರ್ ನೀಡಿ ಮಾತನಾಡಲು ಹೇಳಿದ.ಅಶ್ವಿನ್‍ಗೆ ಕರೆ ಮಾಡಿದ ನಾನು ಪದೇ ಪದೇ ಕರೆ ಮಾಡುವುದು ಬೇಡ. ನನ್ನ ಮೇಲೆ ಯಾವುದೇ ಕಂಪ್ಲೆಂಟ್ ಇಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ತಿಳಿಸಿದೆ. ಅದಾದ ನಂತರ ಅವರಿಂದ ಯಾವುದೇ ಕರೆ ಬಂದಿರಲಿಲ್ಲ. ಬಳಿಕ ಕೃಷ್ಣರಾವ್ ಎಂಬಾತ ವಿ.ಭಾಸ್ಕರ್ ಎನ್ನುವುದು ಗೊತ್ತಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com