ಸಿಐಡಿ ತನಿಖೆಗೆ ಪೂಜಾರಿ ಒತ್ತಾಯ

ಎತ್ತಿನಹೊಳೆ ಯೋಜನೆ ಎನ್ನುವುದೇ ದೊಡ್ಡ ಹಗರಣ ಎಂದು ಆರೋಪಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ...
ಜನಾರ್ದನ ಪೂಜಾರಿ(ಸಂಗ್ರಹ ಚಿತ್ರ)
ಜನಾರ್ದನ ಪೂಜಾರಿ(ಸಂಗ್ರಹ ಚಿತ್ರ)
Updated on

ಮಂಗಳೂರು: ಎತ್ತಿನಹೊಳೆ ಯೋಜನೆ ಎನ್ನುವುದೇ ದೊಡ್ಡ ಹಗರಣ ಎಂದು ಆರೋಪಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ, ಯೋಜನೆ ಕುರಿತು ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಎತ್ತಿನಹೊಳೆ ಯೋಜನೆ ದೊಡ್ಡ ಹಗರಣ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. 20 ಕೋಟಿ ಹೆಚ್ಚು ಮೊತ್ತದ ಯೋಜನೆಗೆ ಗ್ಲೋಬಲ್ ಟೆಂಡರ್ ಕರೆಯಬೇಕೆಂಬ ಜ್ಞಾನ ಇಲ್ಲವೇ? ಸಿದ್ದರಾಮಯ್ಯ ಅವರ ದಾರಿ ತಪ್ಪಿಸಿ ಬೊಕ್ಕಸ ಕೊಳ್ಳೆ ಹೊಡೆಯುವ ಯತ್ನವಾಗುತ್ತಿದೆ. ಅದಕ್ಕಾಗಿಯೇ ಯೋಜನೆ ಈ ರೂಪಿಸಲಾಗಿದೆ. ಕೋಲಾರದ ಜನ ಅವರನ್ನು ಕ್ಷಮಿಸುವುದಿಲ್ಲ. ಈ ಯೋಜನೆ ಕಾಮಗಾರಿಯ ಗುತ್ತಿಗೆಯನ್ನು ಮೇಘನಾ ಕನ್ ಸ್ಟ್ರಕ್ಷನ್ ಗೆ ನೀಡಲಾಗಿದೆ. ಭ್ರಷ್ಟ ಅಧಿಕಾರಿ ಕಪಿಲ್ ಮೋಹನ್‍ಗೆ ಈ ಸಂಸ್ಥೆಯಲ್ಲಿ ಪಾಲುದಾರಿಕೆ ಇದೆ. ಹೀಗಾಗಿ ಯೋಜನೆ ಬಗ್ಗೆ ಸಿಐಡಿ ತನಿಖೆ ನಡೆಸಬೇಕು ಎಂದು ಪೂಜಾರಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

``ಡಿ.ವಿ. ಸದಾನಂದ ಗೌಡರೇ, ಏಕೆ ಜನರನ್ನು ವಂಚಿಸುತ್ತೀರಿ, ಈ ಯೋಜನೆ 10 ವರ್ಷ ಆಗುವಾಗ 30 ಸಾವಿರ ಕೋಟಿ ಆಗುತ್ತೆ, ಕೇವಲ ಒಂದು ಟಿಎಂಸಿ ನೀರಿಗಾಗಿ ಹಣದ ಹೊಳೆ ಹರಿಸಬೇಕೇ? ನೇತ್ರಾವತಿ ನೀರು ತರುತ್ತೇನೆ ಎಂದು ಹೇಳಿ ಜನರನ್ನು ಮರುಳು  ಮಾಡುತ್ತಿದ್ದೀರಾ? ನಿಮ್ಮ ಡೋಂಗಿ ಚಿಕ್ಕಬಳ್ಳಾಪುರದ ಜನರಿಗೆ ಗೊತ್ತಾದರೆ ಸುಮ್ಮನೆ
ಬಿಡುತ್ತಾರೆಯೇ? ಪೂಜಾರಿ ಅಸ್ತಿತ್ವಕ್ಕಾಗಿ ಏನೇನೊ ಮಾತಾಡ್ತಿದಾರೆ, ಮೊಯ್ಲಿ ಜೊತೆ ಅಸ್ತಿತ್ವಕ್ಕಾಗಿ ಹೋರಾಟ ಮಾಡ್ತಿದಾರೆ ಅಂತಾ ಡಿವಿ ಹೇಳಿದ್ದಾರೆ. ಈ ಡಿವಿಗೆ ತಲೆ ಕೆಟ್ಟಿದೆಯೇ? ನಾನು ಕರಾವಳಿ ಜನರ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ನನಗೆ ಸತ್ಯ ಹೇಳಲು ಭಯವಿಲ್ಲ. ನಾನು ಭೂತಕ್ಕೆ ಬಿಟ್ಟಿರುವ ಹರಕೆ ಕೋಳಿಯಂತೆ, ಯಾವಾಗ ಬೇಕಾದರೂ ತಲೆ ಕಡಿಯಬಹುದು'' ಎಂದು ಸದಾನಂದ ಗೌಡರಿಗೆ ಕುಟುಕಿದರು.

ಉಸ್ತುವಾರಿ ಸಚಿವ ರಮಾನಾಥ ರೈ, ಯುವಜನ ಕ್ರೀಡಾ ಸಚಿವ ಅಭಯಚಂದ್ರ ಜೈನ್‍ಗೆ ಸಮಸ್ಯೆ ಅರ್ಥ ಆಗಿದೆ. ಆದರೆ ಆರೋಗ್ಯ ಸಚಿವ ಯು.ಟಿ.ಖಾದರ್ ನಿಮಿಷಕ್ಕೊಂದು ಮಾತನಾಡುತ್ತಿದ್ದಾರೆ. ಖಾದರ್‍ಗೆ ಏನೂ ತಿಳಿದಿಲ್ಲವೇ? ಮಂಗಳೂರನ್ನು ಸಮುದ್ರದಲ್ಲಿ ಮುಳುಗಿಸುತ್ತೀರಾ ಎಂದು ವ್ಯಂಗ್ಯವಾಡಿದರು.

ಪೂಜಾರಿ ವಿರುದ್ಧ ಆಕ್ರೋಶ
ಚಿಕ್ಕಬಳ್ಳಾಪುರ: ನೀರಾವರಿ ತಜ್ಞ, ಬಯಲುಸೀಮೆ ಪ್ರದೇಶಗಳ ಭಗೀರಥ ಎಂದೇ ಭಾವಿಸಲಾಗಿರುವ ಡಾ.ಪರಮಶಿವಯ್ಯ ಅವರ ಕುರಿತು ಹಗುರವಾಗಿ ಮಾತನಾಡಿರುವ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ವಿರುದ್ಧ ಸೋಮವಾರ ತೀವ್ರ ಆಕ್ರೋಶ
ವ್ಯಕ್ತವಾಯಿತು. ಪೂಜಾರಿಯವರ ಅಣುಕು ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು, ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಶವವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ದಹನ ಮಾಡುವ ಮೂಲಕ ಪೂಜಾರಿಯವರಿಗೆ ವಿಧಿವತ್ತಾಗಿ ದಹನ ಸಂಸ್ಕಾರ ಪೂರೈಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com