ಎನ್.ಎಸ್.ಮೇಘರಿಕ್
ಎನ್.ಎಸ್.ಮೇಘರಿಕ್

ಸರಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್ ಸೆರೆ

ಮನೆಯೊಳಗಿದ್ದರೂ ಹೊರಗಿನಿಂದ ಮನೆಗೆ ಬೀಗ ಹಾಕುವ ಮೂಲಕ ಹಲವು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಇಬ್ಬರು ಇರಾನಿ ತಂಡದ ಸರಗಳ್ಳರು ...
Published on

ಬೆಂಗಳೂರು: ಮನೆಯೊಳಗಿದ್ದರೂ ಹೊರಗಿನಿಂದ ಮನೆಗೆ ಬೀಗ ಹಾಕುವ ಮೂಲಕ ಹಲವು ಬಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಇಬ್ಬರು ಇರಾನಿ ತಂಡದ ಸರಗಳ್ಳರು ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಧಾರವಾಡದಲ್ಲಿದ್ದ ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದು ನಂತರ ಅದನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿ, ಬೈಕ್ ಬಳಸಿ ಅಪಹರಣ ಮಾಡಿ  ಪರಾರಿಯಾಗುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ತಿಳಿಸಿದರು.

ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಧಾರವಾಡ ಜನ್ನತ್‍ನಗರ ನಿವಾಸಿಗಳಾದ ಇರಾನಿ ಮೂಲದ ಅಬುಜರ್ ಅಲಿ (26), ಅಬುಲ್ ಹಸನ್(23) ಹಾಗೂ ಹಾಸನ ಹೊಳೆನರಸೀಪುರ ಮೂಲದ ಗಿರೀಶ್ ರಾಜೇಗೌಡ ಅಲಿಯಾಸ್ ಬಾಂಬೆ ಗಿರೀಶ್(38) ಬಂಧಿತರು. ಮತ್ತಿಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳು ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರುತಿಸಿ ಸರ ಅಪಹರಿಸುತ್ತಿದ್ದರು.

ಈ ಆರೋಪಿಗಳ ಬಂಧನದಿಂದ 2013ರಿಂದ 2015ರವರೆಗೆ ದಾಖಲಾಗಿದ್ದ ಹಲವು ಪ್ರಕರಣಗಳು ಪತ್ತೆಯಾಗಿವೆ. ಬಂಧಿತರಿಂದ ರೂ.  60 ಲಕ್ಷ ಮೌಲ್ಯದ ಚಿನ್ನಾಭರಣ ನಗದು ಹಾಗೂ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಬೀಗ ನೋಡಿ ವಾಪಸ್, ಗಸ್ತಿನಲ್ಲಿ ಪೊಲೀಸ್: ಇರಾನಿಗಳ ಪೂರ್ವಜರು ಧಾರವಾಡದಲ್ಲಿ ನೆಲೆಸಿದ್ದು, ಈ ಗ್ಯಾಂಗ್‍ನ ಸದಸ್ಯರು ಧಾರವಾಡದಲ್ಲೇ ಇದ್ದಾರೆ. ಇವರು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸರಗಳವು ಮಾಡುತ್ತಿದ್ದಾರೆ ಎಂಬ ಮಾಹಿತಿ ಅರಿತ ಪೊಲೀಸರು ಮೂರು ಬಾರಿ ಆರೋಪಿಗಳು ತಂಗಿದ್ದ ನಿವಾಸಕ್ಕೆ ಹೋಗಿದ್ದರು. ಆದರೆ, ಮನೆ ಬೀಗ ಹಾಕಿರುವುದನ್ನು ನೋಡಿ ವಾಪಸಾಗಿದ್ದರು. ಮತ್ತೆ ಆರೋಪಿಗಳ ಕೈಚಳಕ ಕಂಡ ಪೊಲೀಸರು ಮಫ್ತಿಯಲ್ಲಿ ಪೊಲೀಸರನ್ನು ನೇಮಿಸಿ ಆರೋಪಿಗಳ ಚಲನವಲನ ಗಮನಿಸುವಂತೆ ಸೂಚಿಸಿದ್ದರು. ಆಗ ಆರೋಪಿಗಳು ಕಳವು ಮಾಡಿಕೊಂಡು ಬಂದು ಮತ್ತೆ ತನ್ನ ಕುಟುಂಬ ಸದಸ್ಯರ ಜತೆ ಮನೆಯಲ್ಲೇ ತಂಗುತ್ತಿದ್ದರು. ಆದರೆ ಆರೋಪಿಗಳ ಸಹಚರರು ಹೊರಗಿನಿಂದ ಬೀಗ ಹಾಕುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಅರಿತ ಪೊಲೀಸರು ಬೀಗ ಹಾಕಿರುವಾಗಲೇ ದಾಳಿ ನಡೆಸಿ, ಮನೆಯೊಳಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿಸಿದರು.ಹೋಟೆಲ್‍ನಲ್ಲಿ ಕೆಲಸ: ಯಾರಿಗೂ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಆರೋಪಿಗಳು ಹೋಟೆಲ್ ನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದರು. ಹಾಗಾಗಿ ಸದಾ ಮನೆಯ ಹೊರಗೆ ಬೀಗ ಹಾಕಿರುತ್ತಿತ್ತು. ಇದರಿಂದ ಯಾರಿಗೂ ಅನುಮಾನ ಬರುತ್ತಿರಲಿಲ್ಲ.
ಆರೋಪಿಗಳು ತಾವು ತಂದ ಚಿನ್ನವನ್ನು ಗಿರೀಶ್‍ಗೌಡನಿಗೆ ನೀಡಿ ಆತನಿಂದ ಹಣ ಪಡೆಯುತ್ತಿದ್ದರು. ಆಭರಣ ಪಡೆಯುತ್ತಿದ್ದ ಗಿರೀಶ್ ಅದನ್ನು ಚಿನ್ನದ ಅಂಗಡಿಗೆ ಮಾರಾಟ ಮಾಡುತ್ತಿದ್ದ. ಗಿರೀಶ್‍ಗೌಡ ಸಹ ಈ ಹಿಂದೆ ಬಾಂಬೆಯಲ್ಲಿ ಹೋಟೆಲ್ ಉದ್ಯಮ ಮಾಡುತ್ತಿದ್ದ. ಆರೋಪಿಗಳಿಂದ 22 ಸಿಮ್  ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಕಡೆ ಸರಗಳವು ಮಾಡಿದ ನಂತರ ಮತ್ತೆ ಆ ಸಿಮ್ ಬಳಸುತ್ತಿರಲಿಲ್ಲ. ನಕಲಿ ಗುರುತಿನ ಚೀಟಿ ನೀಡಿ ಸಿಮ್ ಖರೀದಿಸುತ್ತಿದ್ದರು. ಹೀಗಾಗಿ ತಪ್ಪಿಸಿಕೊಳ್ಳುತ್ತಿದ್ದರು. ಆರೋಪಿ ಅಬುಜರ್ ಅಲಿ ಈ ಹಿಂದೆ 2010ನೇ ಸಾಲಿನಲ್ಲಿ ಬೆಂಗಳೂರು ನಗರ ಪೊಲೀಸರು ದಸ್ತಗಿರಿ ಮಾಡಿದ್ದರು. ಆ ವೇಳೆ ಆರೋಪಿ ನಗರದ ವಿವಿಧ ಠಾಣೆ ವ್ಯಾಪ್ತಿಯಲ್ಲಿ 68 ಸರಗಳವು ಮಾಡಿರುವುದಾಗಿ ತಿಳಿಸಿದ್ದು, ಆತನ ವಿರುದ್ಧ ದೂರುಗಳು ದಾಖಲಾಗಿದ್ದವು.

ಈಗ 2013ರ ನಂತರ ಆರೋಪಿಗಳ ವಿರುದ್ಧ ಜ್ಞಾನಭಾರತಿ (6 ಪ್ರಕರಣ), ವಿಜಯನಗರ (5 ಪ್ರಕರಣ), ಕಾಮÁಕ್ಷಿಪಾಳ್ಯ, ಚಂದ್ರಾಲೇಔಟ್, ಸಿ.ಕೆ. ಅಚ್ಚುಕಟ್ಟು, ಎಚ್.ಎ.ಎಲ್, ಕೆಂಗೇರಿ, ಮಹದೇವಪುರ, ಸುಬ್ರಹ್ಮಣ್ಯಪುರ, ಯಲಹಂಕ, ಬನಶಂಕರಿ, ಗಿರಿನಗರ, ಕೆ.ಜಿ.ನಗರ, ಸಂಜಯ್ ನಗರ, ವಿದ್ಯಾರಣ್ಯಪುರ,  ಯಲಹಂಕ,  ಆರ್.ಆರ್.ನಗರ ಪೊಲೀಸ್ ಠಾಣೆಗಳ  ವ್ಯಾಪ್ತಿಯಲ್ಲಿ  ಆರೋಪಿಗಳ ವಿರುದ್ಧ 42 ದೂರು ದಾಖಲಾಗಿವೆ.
 
ಆರೋಪಿಗಳಿಗೆ ಎಲೆಕ್ಟ್ರಾನಿಕ್ ಟ್ಯಾಗ್
ಪದೇ ಪದೇ ಅಪರಾಧ ಎಸಗುವವರಿಗೆ ವಿದೇಶದಲ್ಲಿ `ಎಲೆಕ್ಟ್ರಾನಿಕ್ ಟ್ಯಾಗ್' ಅಳವಡಿಸಲಾಗಿರುತ್ತದೆ. ಆಗ ಆತ ಎಲ್ಲಿದ್ದಾನೆ. ಆತನ ಕೃತ್ಯವೇನು ಎಂಬೆಲ್ಲ ಮಾಹಿತಿ ಪೊಲೀಸರಿಗೆ ಸಿಗುತ್ತದೆ. ಆಗ ಇಂತಹ ಘಟನೆಗಳು ನಡೆದಾಗ ಆರೋಪಿ ಎಲ್ಲಿದ್ದ ಎಂಬುದನ್ನು ಆಧರಿಸಿ ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ ಆರೋಪಿಗಳು ಸುಲಭವಾಗಿ ಪತ್ತೆಯಾಗುತ್ತಾರೆ. ಆರೋಪಿಗಳ ಪತ್ತೆಗೆ ಇದು ಸುಲಭದ ಮಾರ್ಗ. ಆದರೆ, ಭಾರತದಲ್ಲಿ ಈ ಪದ್ಧತಿ ಇಲ್ಲ. ಇಂತಹ ಪ್ರಯತ್ನಕ್ಕೆ ಪೊಲೀಸರು ಕೈಹಾಕಿದರೆ ಅವರು ಮಾನವ ಹಕ್ಕುಗಳ ಮೊರೆ ಹೋಗುತ್ತಾರೆ. ಹಾಗಾಗಿ ಪೊಲೀಸರು ಕೆಲವು ವಿಷಯದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಆರೋಪಿಗಳು ಈ ಹಿಂದೆ ಮಹಿಳೆಯರ ಗಮನ ಬೇರೆಡೆ ಸೆಳೆದು ಆಭರಣ ಕಳವು ಮಾಡುತ್ತಿದ್ದರು. ಕಾಲ ಕ್ರಮೇಣವಾಗಿ ಅವರು ಬೈಕ್‍ನಲ್ಲಿ ಬಂದು ಸರಗಳವು ಮಾಡಿ ಮತ್ತೆ ಹಿಂದಿರುಗುತ್ತಿದ್ದರು.

ಚಂದ್ರಶೇಖರ್ ಜಂಟಿ ಪೊಲೀಸ್ ಆಯುಕ್ತ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com