ಮುಂಬೈ: ವಿಚಾರವಾದಿ ಗೋವಿಂದ ಪಾನ್ಸರೆ ಕೊಲೆ ಪ್ರಕರಣವನ್ನು ಮರೆತೇ ಬಿಟ್ಟಿದ್ದ ಮಹಾರಾಷ್ಟ್ರ ಪೊಲೀಸರು, ಡಾ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ತನಿಖೆಯ ಮುನ್ನಡೆಯಿಂದ ಎಚ್ಚೆತ್ತು ಆರೋ ಪಿಯನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಇಂಥ ಟೀಕೆ ವ್ಯಕ್ತವಾಗಿದ್ದು, ಕರ್ನಾಟಕ ಪೊಲೀಸರ ತನಿಖೆ ಮುನ್ನಡೆ ಬಳಿಕವಷ್ಟೆ ಮಹಾರಾಷ್ಟ್ರ ಪೊಲೀಸರು ಪಾನ್ಸರೆ ಕೊಲೆ ಆರೋಪಿ ಗಾಯಕವಾಡ ನನ್ನು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಸನಾತನ ಸಂಸ್ಥೆ ವಿರುದ್ಧ ತನಿಖೆಯ ದಿಕ್ಕುತಪ್ಪಿಸಲು ಮಹಾರಾಷ್ಟ್ರ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದೆ. ಸಿಪಿಐ ನಾಯಕ, ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಕಳೆದ ವಾರ ಸನಾತನ ಸಂಸ್ಥೆ ಸದಸ್ಯ ಸಮೀರ್ ಗಾಯಕವಾಡ್‍ನನ್ನು ಬಂಧಿಸಿದ್ದಾರೆ. ಡಾ.ಕಲಬುರ್ಗಿ ಹತ್ಯೆ ಸಂಬಂಧ ಕರ್ನಾಟಕ ಪೊಲೀಸರು ಸನಾತನ ಸಂಸ್ಥೆಯ ಕೈವಾಡ ಶಂಕಿಸಿ ಕೊಲ್ಹಾಪುರ ಹಾಗೂ ಸಾಂಗ್ಲಿಯಲ್ಲಿ ತನಿಖೆ ಕೈಗೊಂಡಿದ್ದರು. ಈ ತನಿಖೆ ವೇಳೆ ದೊರೆತ ಮಹತ್ವದ ಸುಳಿವಿನ ಬಳಿಕವಷ್ಟೇ ಮಹಾ ಪೊಲೀಸರು ಪಾನ್ಸರೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡರು.