ಎನ್‍ಆರ್‍ಐ ವಿದ್ಯಾರ್ಥಿಗಳಿಗೂ 1 ವರ್ಷ ಸೇವೆ ಅನಿವಾರ್ಯ

ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದವರು ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆಯಲ್ಲಿ ಪಾಲ್ಗೊಳ್ಳಬೇಕು, ಅದರಲ್ಲೂ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದವರು ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆಯಲ್ಲಿ ಪಾಲ್ಗೊಳ್ಳಬೇಕು, ಅದರಲ್ಲೂ ಎಂಬಿಬಿಎಸ್ ಕೋರ್ಸ್ ಮುಗಿಸಿದವರು ಗ್ರಾಮೀಣ ಸೇವೆ ಸಲ್ಲಿಸಲೇಬೇಕೆಂದು ಸರ್ಕಾರ ಜಾರಿಗೆ ತಂದಿರುವ ಕಾನೂನಿಂದ ಪಾರಾಗಲು ಬಯಸಿದ್ದ 600ಕ್ಕೂ ಹೆಚ್ಚು ಎನ್‍ಆರ್‍ಐ (ಅನಿವಾಸಿ ಭಾರತೀಯ) ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಗುವ ಮುನ್ಸೂಚನೆಗಳಿಲ್ಲ.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಸ್ತಾಪವಾಗಿದ್ದ ಕಡ್ಡಾಯ ಗ್ರಾಮೀಣ ಸೇವೆ ವಿಧೇಯಕಕ್ಕೆ ಇತ್ತೀಚೆಗಷ್ಟೇ ಒಪ್ಪಿಗೆ ಸಿಕ್ಕಿತ್ತು. ತಕ್ಷಣವೇ ಕಾಯ್ದೆಯನ್ನು ಜಾರಿಗೆ ತಂದ ವೈದ್ಯಕೀಯ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿತು. ಈ ಹಿಂದಿದ್ದ ಕಾನೂನಿನಲ್ಲಿ ಒಂದು ವರ್ಷ ಸೇವೆ ಸಲ್ಲಿಸಲು ಇಷ್ಟವಿಲ್ಲದೇ ಹೋದಲ್ಲಿ ದಂಡಕಟ್ಟಿ ಪದವಿ ಪ್ರಮಾಣಪತ್ರ ಪಡೆಯಲು ಅವಕಾಶವಿತ್ತು. ಆದರೆ ಈಗ ಪದವಿ ಪ್ರಮಾಣಪತ್ರ ಬೇಕೆಂದರೆ ಒಂದು ವರ್ಷ ಸರ್ಕಾರಿ ಸೇವೆ ಅನಿವಾರ್ಯ.

ಒಂದು ವೇಳೆ ಸೇವೆ ಸಲ್ಲಿಸದೇ ಹೋದಲ್ಲಿ ರು. 25 ಲಕ್ಷ ದಂಡ ಕಟ್ಟಬೇಕಾಗುತ್ತದೆ ಮತ್ತು ಪ್ರಮಾಣಪತ್ರವೂ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಸರ್ಕಾರದ ಈ ನಿರ್ಣಯ ಈ ವರ್ಷ ವೈದ್ಯಕೀಯ ಕೋರ್ಸ್ ಮುಗಿಸುವ ಎನ್‍ಆರ್‍ಐ ವಿದ್ಯಾರ್ಥಿಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. 2009ರಲ್ಲಿ ಕೋರ್ಸ್‍ಗೆ ಪ್ರವೇಶ ಪಡೆದ ಎನ್‍ಆರ್‍ಐ ವಿದ್ಯಾರ್ಥಿಗಳು ಇದೀಗ ಕೋರ್ಸ್ ಮುಗಿಸುತ್ತಿದ್ದಾರೆ. ಅಂದರೆ, ಮುಂದಿನ ಮಾರ್ಚ್-ಏಪ್ರಿಲ್‍ನಲ್ಲಿ ಕೋರ್ಸ್ ಪೂರ್ಣಗೊಳ್ಳುತ್ತದೆ.

ತದ ನಂತರ ಒಂದು ವರ್ಷ ಗ್ರಾಮೀಣ ಸೇವೆ ಮಾಡಬೇಕಾಗುತ್ತದೆ. ಆದರೆ, ಈಗಾಗಲೇ ಮುಂದಿನ ಅಧ್ಯಯನ ಕುರಿತು ಯೋಜನೆ ರೂಪಿಸಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ದೇಶಗಳಲ್ಲಿ ಅಲ್ಲಿನ ಪ್ರವೇಶಕ್ಕಾಗಿ ಪರೀಕ್ಷೆಗೆ ನೋಂದಣಿಯಾಗಿದ್ದು ಅದಕ್ಕೆ ತಯಾರಾಗಿದ್ದಾರೆ. ಹೀಗಾಗಿ ಏಕಾಏಕಿ ಸರ್ಕಾರದ ಮಾರ್ಗಸೂಚಿ ಕಂಡು ಬೆಚ್ಚಿಬಿದ್ದಿರುವ 600ಕ್ಕೂ ಹೆಚ್ಚು ಅನಿವಾಸಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಆತಂಕವನ್ನು ಸರ್ಕಾರ ಮುಂದೆ ತೋಡಿಕೊಂಡಿದ್ದರು.

ಕರ್ನಾಟಕ ಸರ್ಕಾರದ ಭಾಗವಾಗಿರುವ ಅನಿವಾಸಿ ಭಾರತೀಯ ಘಟಕಕಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಇಮೇಲ್ ಮೂಲಕ ತಮ್ಮ ಅಹವಾಲು ಮಂಡಿಸಿ, ತಮಗಾಗುವ ಸಮಸ್ಯೆಯನ್ನು ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಎನ್‍ಆರ್‍ಐ ವಿದ್ಯಾರ್ಥಿಗಳ ಅರಿಕೆಯ ಕುರಿತು ಚರ್ಚೆ ನಡೆಸಿದ್ದರು.

ಆದರೆ, ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಈ ಕಡ್ಡಾಯ ಸೇವೆಯಿಂದ ವಿನಾಯಿತಿ ಕೊಡುವುದು ಕಷ್ಟ ಸಾಧ್ಯ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ. ಹೀಗಾಗಿ ಅನಿವಾರ್ಯವಾಗಿ ಎನ್‍ಆರ್‍ಐ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಯೋಜನೆಯನ್ನು ಬದಿಗಿಟ್ಟು ಒಂದು ವರ್ಷ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com