
ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ನೀಡಿರುವ ತೀರ್ಪು ಭಾಷೆಯನ್ನು ಅವನತಿಯತ್ತ ಕೊಂಡೊಯ್ಯಲಿದೆ. ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ಮುಖ್ಯಮಂತ್ರಿಗಳು ದಕ್ಷಿಣ ಭಾರತದ ಇತರೆ ರಾಜ್ಯಗಳ ಸಿಎಂಗಳ ಜತೆ ಚರ್ಚಿಸಿ ಸಂವಿಧಾನ ತಿದ್ದುಪಡಿಗೆ ಆಗ್ರಹಿಸಬೇಕು ಎಂದು ಸಾಹಿತಿ ದೇ. ಜವರೇಗೌಡ ಒತ್ತಾಯಿಸಿದರು.
ಕುವೆಂಪು ಕಲಾನಿಕೇತನ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಷಯಕ್ಕೆ ಸಂಬಂದಿಸಿದಂತೆ ಸಮಾಜದಿಂದಾಗಲಿ ಸಾಹಿತಿಗಳಿಂದಾಗಲಿ ಟೀಕೆ ಟಿಪ್ಪಣಿಗಳು ಕಂಡುಬಂದಿಲ್ಲ ಹಾಗಾಗಿ ಸರ್ಕಾರಕ್ಕೆ ಮೊರೆಯಿಡುವುದೊಂದೇ ಬಾಕಿ ಇದೆ ಎಂದರು.
ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಮಾತನಾಡಿ, ಜನಪದ ಕ್ಷೇತ್ರದ ಮೌಲ್ಯಗಳನ್ನು ಹೊರತೆಗೆದ ದೇಜಗೌ, ಜನಪದ ಸಾಹಿತ್ಯದ ಸಂರಕ್ಷಣೆ, ಬೆಳವಣಿಗೆ ಹೆಚ್ಚು ಕೊಡುಗೆಗಳನ್ನು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಸಿ.ಪಿ. ಕೃಷ್ಣ ಕುಮಾರ್ ಅವರಾ ಶತಮಾನದ ಶಾರದೆ ಪುಸ್ತಕ ಬಿಡುಗಡೆ ಮಾಡಲಾಯಿತು. ದೇಜಗೌ, ಸೂಲಗಿತ್ತಿ ನರಸಮ್ಮ, ನಾಗತಿಹಳ್ಳಿ ರಮೇಶ್ ಮತ್ತು ಅಶ್ವಿನಿ ಅಂಗಡಿಯವರಿಗೆ ವಿಶ್ವಮಾನವ ಕುವೆಂಪು ಉದಯ ರವಿ ಪ್ರಶಸ್ತಿ ಜತೆಗೆ ರೂ. 20 ಸಾವಿರ ನಗದು ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಸಾಹಿತಿಗಳಾದ ಡಾ. ಲತಾ ರಾಜಶೇಖರ್, ಪ್ರೊ ಕೆ. ಭೈರವಮೂರ್ತಿ, ನೇಗಿಲ ಯೋಗಿ ಸಂಸ್ಥೆ ಸಂಸ್ಥಾಪಕಾಧ್ಯಕ್ಷ ಡಾ. ರಾಜಶೇಖರ್, ಗಾಯಕ ಅಪ್ಪುಗೆರೆ ತಿಮ್ಮರಾಜು, ಕುವೆಂಪು ಕಲಾನಿಕೇತನ ಅಧ್ಯಕ್ಷ, ಡಿ. ಪ್ರಕಾಶ್ ಹಾಜರಿದ್ದರು.
Advertisement