ದೈವ ಕೋಪದ ನೆಪವೊಡ್ಡಿ ಗಾಯಕಿ ಮೇಲೆ ಅತ್ಯಾಚಾರ

`ದೈಹಿಕ ಸಂಪರ್ಕ ಮಾಡದಿದ್ದರೆ ದೈವೀ ಅಸಂತೋಷಕ್ಕೆ ಗುರಿಯಾಗುತ್ತೀಯಾ' ದೇವರ ಹೆಸರಿನಲ್ಲಿ ಸಾವಿರಾರು ಭಕ್ತರಿಗೆ ಆಧ್ಯಾತ್ಮದ ಉಪದೇಶ ನೀಡುತ್ತಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಧಾರ್ಮಿಕ ಕ್ಷೇತ್ರಗಳಲ್ಲೇ ರಾಮಕಥಾ ಗಾಯಕಿ ಮೇಲೆ ನಿರಂತರವಾಗಿ...
ರಾಘವೇಶ್ವರ ಸ್ವಾಮೀಜಿ (ಸಂಗ್ರಹ ಚಿತ್ರ)
ರಾಘವೇಶ್ವರ ಸ್ವಾಮೀಜಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: `ದೈಹಿಕ ಸಂಪರ್ಕ ಮಾಡದಿದ್ದರೆ ದೈವೀ ಅಸಂತೋಷಕ್ಕೆ ಗುರಿಯಾಗುತ್ತೀಯಾ' ದೇವರ ಹೆಸರಿನಲ್ಲಿ ಸಾವಿರಾರು ಭಕ್ತರಿಗೆ ಆಧ್ಯಾತ್ಮದ ಉಪದೇಶ ನೀಡುತ್ತಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಧಾರ್ಮಿಕ ಕ್ಷೇತ್ರಗಳಲ್ಲೇ ರಾಮಕಥಾ ಗಾಯಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದರು ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದ್ದ ಗಾಯಕಿ ಕುಟುಂಬಕ್ಕೆ ನೆರವು ನೀಡುವ ನೆಪದಲ್ಲಿ ಆಪ್ತೆಯಾಗಿಸಿಕೊಂಡಿದ್ದ ಸ್ವಾಮೀಜಿ, ರಾಮನ ಹೆಸರಿನಲ್ಲಿ ದೈಹಿಕ ಸಂಪರ್ಕ ಮಾಡದಿದ್ದರೆ ದೈವೀ ಅಸಂತೋಷಕ್ಕೆ ಗುರಿಯಾಗುತ್ತೀಯಾ ಎಂದು ಬೆದರಿಸುತ್ತಿದ್ದರು. ಹೀಗಾಗಿ, ಮಾನಸಿಕವಾಗಿ ಕುಗ್ಗಿ ಹೋಗಿದ್ದ ಗಾಯಕಿ ಮೇಲೆ ಸ್ವಾಮೀಜಿ ನಿರಂತರ ಅತ್ಯಾಚಾರ ಎಸಗುತ್ತಿದ್ದರು ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅತ್ಯಾಚಾರ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್‍ಶೀಟ್ ನಲ್ಲಿ ರಾಘವೇಶ್ವರ ಸ್ವಾಮೀಜಿ ಗಾಯಕಿ ಮೇಲೆ ದೇವರ ಹೆಸರಿನಲ್ಲಿ ನಡೆಸಿದ ಅನಾಚಾರಗಳ ಅನಾವರಣವಾಗಿದೆ. ಸೆ.26ರಂದು 1341 ಪುಟಗಳ ಚಾಜ್ರ್ ಶೀಟ್ ಪೈಕಿ ಮೂರು ಪುಟಗಳಲ್ಲಿ ಪ್ರಕರಣದ ಸಂಕ್ಷಿಪ್ತ ವಿವರಣೆ ನೀಡಲಾಗಿದ್ದು ಅದರಲ್ಲಿ ಗಾಯಕಿಯನ್ನು ಬೇರೆ ಬೇರೆ ಊರುಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿರುವುದನ್ನು ಉಲ್ಲೇಖಿಸಲಾಗಿದೆ. ಅದರಲ್ಲೂ ಸ್ವಾಮೀಜಿ ಪ್ರವಚನ ಕಾರ್ಯಕ್ರಮಗಳು ನೀಡುತ್ತಿದ್ದದ್ದೂ ಧಾರ್ಮಿಕ ಕ್ಷೇತ್ರಗಳಲ್ಲೇ. ಮಠದ ಮುಖ್ಯ ಗಾಯಕಿಯಾಗಿದ್ದ ಮಹಿಳೆಯನ್ನು ಪ್ರವಚನ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಭಕ್ತರ ಮನೆಗಳು ಹಾಗೂ ಕೆಲವೊಮ್ಮೆ ದೇವಸ್ಥಾನದ ಅರ್ಚಕರ ಮನೆಗಳಲ್ಲೇ ಸ್ವಾಮೀಜಿ ವಾಸ್ತವ್ಯ ಹೂಡುತ್ತಿದ್ದರು. ಈ ವೇಳೆ ಹಗಲು, ರಾತ್ರಿ ಅತ್ಯಾಚಾರ ಎಸಗುತ್ತಿದ್ದರು ಎಂದು ಹೇಳಿಕೆ ನೀಡಿರುವ ಬಗ್ಗೆ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.

ನೊಂದ ಗಾಯಕಿ, ಅವರ ಪೂರ್ವಿಕರು ಮೊದಲಿನಿಂದಲೂ ರಾಮಚಂದ್ರಾಪುರ ಮಠದ ಭಕ್ತರು. ಪ್ರೇಮಲತಾ ಅಲ್ಲಿ ಪ್ರಧಾನ ಗಾಯಕಿ. ರಾಮಕಥಾ ನಡೆಯುವಾಗ ಅವರನ್ನು ಕಂಡು
ಮೋಹಗೊಂಡ ಆಕರ್ಷಿತರಾದ ಸ್ವಾಮೀಜಿ, ಅವರನ್ನು ದೈಹಿಕವಾಗಿ ಅನುಭವಿಸಲು ನಿರ್ಧರಿಸಿದ್ದರು. ಸಭೆಯ ನೆಪದಲ್ಲಿ ಅವರನ್ನು ಕರೆದೊಯ್ದು, ಲೈಂಗಿಕಕ್ರಿಯೆಗೆ ಪ್ರಚೋದನೆ ನೀಡಿ ತಮ್ಮ ಬಯಕೆ ಈಡೇರಿಸಿಕೊಳ್ಳುತ್ತಿದ್ದರು ಎಂದು ಆರೋಪ ಪಟ್ಟಿಯಲ್ಲಿದೆ. ಸ್ವಾಮೀಜಿ ಆದ ನೀವು ಈ ರೀತಿ ಮಾಡುವುದು ಸರಿಯೇ ಎಂದು ಗಾಯಕಿ ಪ್ರಶ್ನಿಸಿದಾಗ, ಇದು ರಾಮನ ಬಯಕೆ. ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದರೆ ದೈವದ ಅಸಂತೋಷಕ್ಕೆ ಗುರಿಯಾಗುತ್ತೀಯಾ. ಕುಟುಂಬ ಸರ್ವನಾಶವಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದರು. ಪೀಠದ ಮೇಲೆ ಅಪಾರ ನಂಬಿಕೆ ಹೊಂದಿದ್ದ ಗಾಯಕಿ, ದೈವದ ಹೆಸರು ಬಂದಾಗ ಸ್ವಾಮೀಜಿಯ ಮಾತಿನಂತೆ ನಡೆದುಕೊಳ್ಳುತ್ತಿದ್ದರು. 2011ರ ಅಕ್ಟೋಬರ್‍ನಲ್ಲಿ ಮೊದಲ ಬಾರಿ ಅತ್ಯಾಚಾರ ನಡೆದಿತ್ತು.

ಜೋಧ್‍ಪುರ, ಮುಂಬೈ, ದೆಹಲಿ, ಹೃಷಿಕೇಶ, ಗೋಕರ್ಣದ ಅಶೋಕೆ, ಶಿವಮೊಗ್ಗ ಜಿಲ್ಲೆ ಹೊಸನಗರ, ಮೈಸೂರು, ಕುಮಟಾ, ಸಿರಸಿ, ಸಿದ್ದಾಪುರ, ಮಂಗಳೂರು, ಸಿಗಂದೂರು, ಹೊರನಾಡು, ಉಡುಪಿ, ಮುದೋಳ ಹಾಗೂ ಅಂತಿಮವಾಗಿ 2014ರ ಜೂನ್ 26 ಮತ್ತು 27ರಂದು ಬೆಂಗಳೂರಿನ ಗಿರಿನಗರ ಮಠದಲ್ಲಿ ಸ್ವಾಮೀಜಿ ಅತ್ಯಾಚಾರ ಎಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ರಾಮಕಥಾ ಆಯೋಜಿಸುತ್ತಿದ್ದ ಸಂಘಟಕರು ಸ್ವಾಮೀಜಿಗೆ ಹಾಗೂ ಕಲಾವಿದರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡುತ್ತಿದ್ದರು.ಆದರೆ, ಸ್ವಾಮೀಜಿ ಏಕಾಂತ ಸೇವೆ ಅಥವಾ ಸಭೆಯ ನೆಪದಲ್ಲಿ ಪ್ರೇಮಲತಾ ಅವರನ್ನು ತಮ್ಮ ಕೊಠಡಿಗೆ ಕರೆಸಿಕೊಳ್ಳುತ್ತಿದ್ದರು. ಕೆಲವು ಕಡೆ ದಿನಕ್ಕೆ ಒಂದು ಬಾರಿ ಅತ್ಯಾಚಾರ ನಡೆದಿದ್ದರೆ, ಮತ್ತೆ ಕೆಲ ಕಡೆ ದಿನಕ್ಕೆ ಮೂರ್ನಾಲ್ಕು ಬಾರಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ಹೀಗಾಗಿ ಎಷ್ಟು ಬಾರಿ ಅತ್ಯಾಚಾರ ಎಂಬುದನ್ನು ಸಂತ್ರಸ್ತೆ ನಿಖರವಾಗಿ ಹೇಳಿಲ್ಲ.

ವಿಶ್ರಾಂತಿ ಕೊಠಡಿ ವ್ಯವಸ್ಥೆ ಇಚ್ಛಿಸದಿದ್ದಾಗ ಆ ಪ್ರದೇಶದಲ್ಲಿರುವ ತಮ್ಮ ಭಕ್ತರು ಹಾಗೂ ಅರ್ಚಕರ ಮನೆಗಳಿಗೆ ಪ್ರೇಮಲತಾ ಅವರನ್ನು ಕರೆದೊಯ್ದು ವಾಂಛೆ ತೀರಿಸಿಕೊಂಡಿದ್ದಾರೆ. ಈ ಬಗ್ಗೆ ಪಂಚನಾಮೆ ನಡೆಸಲು ಸಹಕರಿಸಿದ ಹಾಗೂ ವಸತಿ ಸೌಲಭ್ಯ ಕಲ್ಪಿಸಿದ 45 ಮಂದಿ ಭಕ್ತರ ಹೇಳಿಕೆಗಳನ್ನು ಸಿಐಡಿ ಅಧಿಕಾರಿಗಳು ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಶ್ರೀರಾಮನ ಮೇಲಿದ್ದ ಭಕ್ತಿ ಹಾಗೂ ಭಯ, ಪತಿ ತನ್ನನ್ನು ತೊರೆಯಬಹುದು ಎಂಬ ಅಂಜಿಕೆ, ಮಕ್ಕಳ ಭವಿಷ್ಯದ ಬಗ್ಗೆ ಆತಂಕ, ಹೀಗೆ ಹಲವು ಕಾರಣಗಳಿಂದ ಪ್ರೇಮಲತಾ ಎಲ್ಲವನ್ನೂ ಮುಚ್ಚಿಟ್ಟಿದ್ದರು. ಆದರೆ, ಸ್ವಾಮೀಜಿಯ ಕಿರುಕುಳ ಹೆಚ್ಚಾದಾಗ ಅವರು ಪತಿ ದಿವಾಕರ್ ಶಾಸ್ತ್ರಿ ಬಳಿ ಹೇಳಿದ್ದರು. ಅಂತಿಮವಾಗಿ ಗಿರಿನಗರ ಮಠದಲ್ಲಿ ಅತ್ಯಾಚಾರ ನಡೆದ ಬಳಿಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com