800 ಕೋಟಿ ಮೌಲ್ಯದ ಹತ್ತೊಂಬತ್ತು ಎಕರೆ ವಶ

ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಹೊಸಕೆರೆಹಳ್ಳಿಯಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಿರುವ ಜಿಲ್ಲಾಡಳಿತ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಹೊಸಕೆರೆಹಳ್ಳಿಯಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಿರುವ ಜಿಲ್ಲಾಡಳಿತ ಅಪಾರ ಮೌಲ್ಯದ 19 ಎಕರೆ ಭೂಮಿಯನ್ನು ವಶಕ್ಕೆ ಪಡೆದಿದೆ. ಜಮೀನಿನಲ್ಲಿದ್ದ ಕಮ್ಮವಾರಿ ಸಂಘದ ಕಟ್ಟಡವನ್ನೂ ನೆಲಸಮ ಮಾಡಲಾಗಿದೆ.

ಹೊಸಕೆರೆಹಳ್ಳಿಯ ಸರ್ವೆ ನಂ 75/1, 75/2 ಗಳಲ್ಲಿ ಒಟ್ಟು 19.36 ಎಕರೆ ಜಮೀನು ಇದ್ದು, ಇವುಗಳಲ್ಲಿ ಸರ್ಕಾರಿ `ಬಿ'ಖರಾಬು 15 ಎಕರೆ 27 ಗುಂಟೆ ಇತ್ತು. ಸರ್ವೆ ನಂ 75/1 9-36 ಎಕರೆ ಒಟ್ಟು ವಿಸ್ತೀರ್ಣದಲ್ಲಿ 7.27 'ಬಿ' ಖರಾಬು ಇದ್ದು ಇದರಲ್ಲಿ ಸರ್ಕಾರಿ ಸಂಸ್ಥೆಗಳಾದ ಕೆಐಎಡಿಬಿಗೆ 1-34 ಎಕರೆ, ಬಿ.ಡಿ.ಎ ಗೆ 1-10 ಎಕರೆ, ಹಾಗೂ ನೈಸ್ ಗೆ 15 ಗುಂಟೆ ನೀಡಲಾಗಿತ್ತು. ಉಳಿದ 2.9 ಎಕರೆ ದಾಖಲೆ ಪ್ರಕಾರ ಸರ್ಕಾರಿ ಒಡೆತನದಲ್ಲಿ ಖಾಲಿ ಇತ್ತು. ಇದರಲ್ಲಿ ನಂಜುಡಸ್ವಾಮಪ್ಪ ಎಂಬುವರು ಕ್ರಮವಾಗಿ 1.9 ಹಾಗೂ 1.2 ಎಕರೆ ಮಾಲೀಕತ್ವ ಹೊಂದಿದ್ದಾರೆ. ಸರ್ಕಾರಿ ಸಂಸ್ಥೆಗಳಾದ ಕೆಐಎಡಿಬಿಗೆ 11ಗುಂಟೆ, ಬಿ.ಡಿ.ಎ ಗೆ 2.16 ಎಕರೆ, ಹಾಗೂ ನೈಸ್ ಗೆ 14 ಗುಂಟೆ ನೀಡಲಾಗಿತ್ತು. ಉಳಿದ 2.36 ಎಕರೆ ದಾಖಲೆ ಪ್ರಕಾರ ಸರಕಾರಿ ಒಡೆತನದಲ್ಲಿ ಖಾಲಿ ಇದೆ. ಸರ್ಕಾರಿ ಜಾಗವನ್ನು ಸ್ಥಳೀಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅತಿಕ್ರಮಿಸಿ ನಕಲಿ ದಾಖಲೆ ಮಾಡಿದ್ದರು. ಜಾಗವನ್ನು ಹಲವರಿಗೆ ಬಾಡಿಗೆ ನೀಡಿ ಪ್ರತಿ ತಿಂಗಳು ಅಂದಾಜು 5 ರಿಂದ 8ಲಕ್ಷದವರೆಗೆ ಬಾಡಿಗೆ ವಸೂಲು ಮಾಡುತ್ತಿದ್ದರು.

ಇವರೆಲ್ಲ ತಲೆ ಮರೆಸಿಕೊಂಡಿದ್ದು ನಕಲಿ ಹೆಸರುಗಳಿಂದ ವ್ಯವಹರ ನಡೆಸಿರುವುದು ಕಂಡುಬಂದಿದೆ. ಈ ಜಾಗದಲ್ಲಿದ್ದ ಕಮ್ಮವಾರಿ ಸಂಘದ ಮೂರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಸೇರಿದಂತೆ ಅಂಗಡಿ ಮಳಿಗೆಗಳನ್ನು ಕೆಡವಲಾಗಿದೆ. ಇವುಗಳಲ್ಲಿ ಕೆಲವು ಬಾಡಿಗೆ ಮಳಿಗೆಗಳಾಗಿದ್ದು ಸ್ಥಳೀಯ ಸಂಸ್ಥೆಗಳಿಂದ ನಕಲಿ ದಾಖಲೆ ಆಧಾರದ ಮೇಲೆ ಖಾತೆ ಮಾಡಿಸಿಕೊಂಡಿದ್ದರು. ನಂಜುಂಡಸ್ವಾಮಿ ಎಂಬುವರು ಭೂ ಒಡೆತನ ಕುರಿತಂತೆ ದಾಖಲೆ ಹಾಜರುಪಡಿಸಿ, ಭೂಮಿಯ ಖರಾಬು ಜಮೀನು ತಮಗೆ ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಸರ್ವೆ ನಂ 75/1 ರಲ್ಲಿ ಒಟ್ಟು ವಿಸ್ತೀರ್ಣ 10.36 ಎಕರೆ ಇದ್ದು, ಇದರಲ್ಲಿ 8 ಎಕರೆ ಸರ್ಕಾರಿ ಖರಾಬು ಜಮೀನಾಗಿದೆ. ಉಳಿದ ಜಾಗದಲ್ಲಿ ಕೆಲವು ಭಾಗ ವರ್ತುಲ ರಸ್ತೆಗೆ ಹೋಗಿದೆ. ಮನೆಗಳವರಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದರು.

ವಶವಾದ ಭೂಮಿಯಲ್ಲಿ ಥೀಮ್ ಪಾರ್ಕ್: ಈ ಭೂಮಿಯಲ್ಲಿ ಮಕ್ಕಳ ಚಟುವಟಿಕೆಗಾಗಿ ಸಿನೆಮಾ, ಕಲಾ ಚಟುವಟಿಕೆ, ಥೀಮ್  ಪಾರ್ಕ್ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕಮ್ಮವಾರಿ ಸಂಘಂ ಕಟ್ಟಡ ಇದ್ದ ಸ್ಥಳವನ್ನು ಗಿರಿನಗರ ಪೊಲೀಸ್  ಠಾಣೆ ಕಟ್ಟಡಕ್ಕಾಗಿ ಮೀಸಲಿಡಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com