ಬೆಂಗಳೂರು: ಯಶಸ್ಸು ಗಳಿಸಿದ ಇನ್ವೆಸ್ಟ್ ಕರ್ನಾಟಕ ಸಮ್ಮೇಳನ ಕಳೆದು ಕೇವಲ ಹದಿನೈದು ದಿನಗಳಲ್ಲಿ ರಾಜ್ಯಕ್ಕೆ ಸುಮಾರು 1.33 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಪ್ರಸ್ತಾವನೆ ಬಂದಿದ್ದು, ಅನೇಕ ಉದ್ಯಮಿಗಳನ್ನು ಇಲ್ಲಿ ಹೂಡಿಕೆ ಮಾಡಲು ಕೈ ಬೀಸಿ ಕರೆಯುತ್ತಿದೆ. ಮುಂಬೈನಲ್ಲಿ ನಡೆಯುತ್ತಿರುವ ಮೇಕ್ ಇನ್ ಇಂಡಿಯಾ ಸಪ್ತಾಹದಲ್ಲಿ ಕರ್ನಾಟಕದ ಸೆಮಿನಾರ್ ನಲ್ಲಿ ಇಂಧನ ವಲಯ ಸೇರಿದಂತೆ ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಸಮ್ಮೇಳನದಲ್ಲಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾಹಿತಿ ನೀಡಿದರು.
ಫ್ರಾನ್ಸ್ ನ ಟರ್ ಕೊವಾಕ್ಸ್ ಸಿಸ್ಟಮ್ಸ್ ಗ್ರೂಪ್ ಎಂಬ ಕಂಪೆನಿ ಸಾಗರ ಆಧಾರಿತ ನವೀಕರಣ ಇಂಧನ ಮೂಲ ಯೋಜನೆಗೆ ಸುಮಾರು 2 ಸಾವಿರದ 284 ಕೋಟಿ ರೂಪಾಯಿ ಹೂಡಿಕೆ ಮಾಡಲು ಆಸಕ್ತಿ ತಳೆದಿದೆ. ಅಮೆರಿಕ ಮೂಲದ ಮೆಕ್ ಕಾರ್ಮಿಕ್ ಕಂಪೆನಿ, 150 ಕೋಟಿ ರೂಪಾಯಿ ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು, ಗ್ಲೋಬಲ್ ಮೋಡ್ ಅಂಡ್ ಅಕ್ಸೆಸರೀಸ್ ಪ್ರೈ.ಲಿಮಿಟೆಡ್ 25 ಕೋಟಿ ರೂಪಾಯಿ ಹೂಡಿಕೆಯಲ್ಲಿ ಉತ್ಪಾದಕ ಘಟಕವನ್ನು ಸ್ಥಾಪಿಸಿದ್ದು, ಸುಮಾರು 2 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ.
ಸೋಲಾರ್ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಮುಂದೆ ಬಂದಿದ್ದು, 6 ಸಾವಿರ ಕೋಟಿ ರೂಪಾಯಿ ಹೂಡಿಕೆಯಲ್ಲಿ ಸೋಲಾರ್ ಕೋಶ ಘಟಕವನ್ನು ಸ್ಥಾಪಿಸಲು ಮತ್ತು ಬೀದಿ ದೀಪ, ಐಟಿ ಭದ್ರತೆ, ಕಣ್ಗಾವಲು, ಜಿಪಿಎಸ್ ಗೆ ಬೇಕಾದ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಪರ್ಟ್ ಟೆಲಿಕಾಂ ಸುಮಾರು ಸಾವಿರದ 250 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿವೆ ಎಂದು ದೇಶಪಾಂಡೆ ತಿಳಿಸಿದರು.
Advertisement