ನಮ್ಮ ಮುಸ್ಲಿಂ ಯುವಕರು ಐಸಿಸ್ ಕಡೆ ವಾಲುತ್ತಿಲ್ಲ: ರಾಜನಾಥ್ ಸಿಂಗ್

ಅನೇಕ ರಾಷ್ಟ್ರಗಳಲ್ಲಿ ಮುಸ್ಲಿಂ ಯುವಕರು ಐಸಿಸ್ ಸಂಘಟನೆ ಕಡೆ ವಾಲುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ...
ಬೆಂಗಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅದಮ್ಯ ಚೇತನ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎ.ಎಸ್. ಕಿರಣಕುಮಾರ್ ಅವರನ್ನು ಗೃಹ ಸಚಿವ ರಾಜನಾಥ್ ಸಿಂಗ್ ಸನ್ಮಾನಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅದಮ್ಯ ಚೇತನ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎ.ಎಸ್. ಕಿರಣಕುಮಾರ್ ಅವರನ್ನು ಗೃಹ ಸಚಿವ ರಾಜನಾಥ್ ಸಿಂಗ್ ಸನ್ಮಾನಿಸಿದರು.

ಬೆಂಗಳೂರು: ಅನೇಕ ರಾಷ್ಟ್ರಗಳಲ್ಲಿ ಮುಸ್ಲಿಂ ಯುವಕರು ಐಸಿಸ್ ಸಂಘಟನೆ ಕಡೆ  ವಾಲುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಇದಕ್ಕೆ ನಮ್ಮ ದೇಶದ  ಮುಸ್ಲಿಂ ಕುಟುಂಬಗಳಲ್ಲಿರುವ ಕೌಟುಂಬಿಕ ಮೌಲ್ಯ ಇದಕ್ಕೆ ಕಾರಣ ಎಂದು ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಅದಮ್ಯ ಚೇತನ ಸಂಸ್ಥೆಯು ಇಲ್ಲಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ  ಹಮ್ಮಿಕೊಂಡಿರುವ ಸೇವಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ  ಮುಸ್ಲಿಂ ಕುಟುಂಬಗಳು ತಮ್ಮ ಮಕ್ಕಳನ್ನು ಐಸಿಸ್ ಸಿದ್ಧಾಂತದೆಡೆ ವಾಲದಂತೆ ನೋಡಿಕೊಳ್ಳುತ್ತಿವೆ.  ಅದಕ್ಕೆ  ಕೌಟುಂಬಿಕ ಮೌಲ್ಯ ಕಾರಣ. ಬೇರೆ ರಾಷ್ಟ್ರಗಳಲ್ಲಿ ಐಸಿಸ್ ಮೇಲಿನ ಒಲವು  ಹೆಚ್ಚಾಗುತ್ತಿರುವಾಗ ಭಾರತದಲ್ಲಿ ವ್ಯತಿರಿಕ್ತ ಬೆಳವಣಿಗೆ ಇದೆ, ಇದು ಸಾಮಾನ್ಯ ವಿಷಯವೇನಲ್ಲ ಎಂದು ಅಭಿಪ್ರಾಯಪಟ್ಟರು.

ದೇಶದ ಹೊರಗಿನಿಂದ ಆಗುವ ದಾಳಿಯನ್ನು ತಡೆಯುವ ಜೊತೆಗೆ ಆಂತರಿಕ ಭದ್ರತೆ ನೀಡುವುದು ನಮ್ಮ ಇಲಾಖೆಯ ಹೊಣೆಗಾರಿಕೆ. ನಾವು ಆತಂಕವಾದ, ಮೂಲಭೂತವಾದವನ್ನು ಹತ್ತಿಕ್ಕುವ ಮೂಲಕ ಭಾರತವನ್ನು ಸುರಕ್ಷಿತವಾಗಿ ಕಾಪಾಡುವ ಹೊಣೆ ಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದರು. 

ರಾಜ್ಯಪಾಲ ವಜುಬಾಯಿ ವಾಲಾ ಮಾತನಾಡಿ, ಉಗ್ರವಾದಿಗಳು ದೇಶದೊಳಗಿನ ಹೊರಗಿನವರಲ್ಲ,  ಆದರೆ ಉಗ್ರವಾದಕ್ಕೆ ದೇಶದೊಳಗೆ ಪ್ರೋತ್ಸಾಹ ಸಿಗಬಾರದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು. ಹೆದರಿದರೆ ಸತ್ತಂತೆ ಎಂಬ ಮಾತಿದೆ, ಹೀಗಾಗಿ ಎಲ್ಲರೂ ಸಂಘಟಿತರಾಗಿ ಆತಂಕವಾದವನ್ನು ಹತ್ತಿಕ್ಕಬೇಕೆಂದು ಕರೆ ನೀಡಿದರು.

ಆದಿಚುಂಚನಗಿರಿ ಸಂಸ್ಥಾನದ  ನಿರ್ಮಲಾನಂದನಾಥ ಸ್ವಾಮೀಜಿ, ಮಂತ್ರಾಲಯ ರಾಘವೇಂದ್ರ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ಟಿವಿ ಸಮೂಹ ಸಂಸ್ಥೆ  ಮುಖ್ಯಸ್ಥ ಜಗದೀಶ್ ಚಂದ್ರ, ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ಅನಂತ ಕುಮಾರ್, ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಗೌರವ ಸಮರ್ಪಣೆ: ಇಸ್ರೋ ಅಧ್ಯಕ್ಷ ಎ.ಎಸ್. ಕಿರಣಕುಮಾರ್, ರಕ್ಷಣಾ ಸಚಿವರ ವೈಮಾನಿಕ ಸಲಹೆಗಾರ ಸತೀಶ್ ರೆಡ್ಡಿ, ಎಐಸಿಟಿಇ ಅಧ್ಯಕ್ಷ ಡಾ. ಅನಿಲ್ ಸಹಸ್ರಬುದ್ಧೆ, ಡಿಆರ್‍ಡಿಓ ಮಹಾ ನಿರ್ದೇಶಕ (ವೈಮಾನಿಕ) ತಮಿಳ್ ಮಣಿ ಸೇರಿದಂತೆ ವಿವಿಧ ಸಂಶೋಧನಾ ಸಂಸ್ಥೆಗಳ  ಪ್ರಮುಖರು, ಸಾಧಕ ವಿಜ್ಞಾನಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.  

ಗಮನ  ಸೆಳೆದ ವಂದೇಮಾತರಂ: ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಆಯೋಜನೆಗೊಂಡಿದ್ದ ಸಾಮೂಹಿಕ ವಂದೇ ಮಾತರಂ ಗಾಯನ ಗಮನ ಸೆಳೆಯಿತು.  ಹಿರಿಯ  ಸಂಗೀತ ಕಲಾವಿದರ ನೇತೃತ್ವದಲ್ಲಿ ತರಬೇತಿ ಪಡೆದುಕೊಂಡಿದ್ದ ಹತ್ತು ಸಾವಿರಕ್ಕೂ ಹೆಚ್ಚು  ಗಾಯಕರು ಸಭಾ ಕಾರ್ಯಕ್ರಮದ ಮುನ್ನ ವಂದೇ ಮಾತರಂ ಹಾಡಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com