
ಬೆಂಗಳೂರು: ಸರ್ಕಾರದ ಎಲ್ಲಾ ಜಾಹಿರಾತುಗಳು ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸೀಸ್(ಎಂಸಿಎ) ಮೂಲಕವೇ ಮಾಧ್ಯಮಗಳಿಗೆ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಪನಿಯ ನೂತನ ಹೆಸರು ಮತ್ತು ಲಾಂಛನ ಅನಾವರಣ ಮಾಡಿ ಮಾತನಾಡಿದ ಅವರು, ಎಂಸಿ ಅಂಡ್ ಎ ಸಂಸ್ಥೆಯು ಉದ್ಯಮಗಳ ಬೆಳವಣಿಗೆಗೆ ನಿಲ್ಲಬೇಕು. ಹಾಗೆಯೇ ಉದ್ಯಮಗಳು ಈ ಸಂಸ್ಥೆಯು ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳಬೇಕು. ಇದು ಸ್ಪರ್ಧಾತ್ಮಕ ಯುಗವಾದ್ದರಿಂದ ಹೆಚ್ಚಿನ ಪರಿಣಿತಿಯ ಅವಶ್ಯಕತೆ ಇದೆ. ಸಂಸ್ಥೆಯ ಮೂಲಕ ಹೊಸ ಬೇಡಿಕೆಗೆ ಅಡಿ ಇಡುವಾಗ ಮೌಲ್ಯವರ್ಧಿತ ಸೇವೆ ಮಾನದಂಡವಾಗುತ್ತದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.
ಎಂಸಿಎ ಸಂಸ್ಥೆಯ ಪ್ರಮುಖ ಕಾರ್ಯ ಪ್ರಚಾರದ ಜವಾಬ್ದಾರಿ. ಖಾಸಗಿ ವಲಯದ ಬೆಳವಣಿಗೆಯನ್ನು ಜತೆಗೆ ತೆಗೆದುಕೊಂಡು ಸರ್ಕಾರದ ಉದ್ಯಮಗಳನ್ನು ಬೆಳೆಸುವ ಬಗ್ಗೆ ಚಿಂತಿಸಬೇಕು. ಕೇವಲ ಕೇಂದ್ರ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ರಾಜ್ಯಾದ್ಯಂತ ವಿಸ್ತರಿಸುವಂತಿರಬೇಕು ಎಂದು ಕಿವಿಮಾತು ಹೇಳಿದರು. ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸೀಸ್ ಅಧ್ಯಕ್ಷ ಎಲ್.ಎನ್ ಮೂರ್ತಿ ಮಾತನಾಡಿ 40 ವರ್ಷ ಪಕ್ಷದಲ್ಲಿ ಕಷ್ಟಪಟ್ಟಿದ್ದಕ್ಕಾಗಿ ಈ ಹುದ್ದೆ ನೀಡಿತು. ನನಗೆ ಸಿಕ್ಕ ಅವಧಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಿದ್ದೇನೆ. ಎಲ್ಲಾ ಸರ್ಕಾರಿ ಜಾಹಿರಾತು ನಮ್ಮ ಮೂಲಕವೇ ಹೋಗಬೇಕೆನ್ನುವ ಕಾನೂನು ಉಲ್ಲಂಘನೆಯಾಗುತ್ತಿದೆ. ಸದ್ಯ 140 ಮಂದಿ ಕೆಲಸ ಮಾಡುತ್ತಿದ್ದು, ಇನ್ನೂ 140 ಹುದ್ದೆಗಳನ್ನು ಸೃಷ್ಟಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸರ್ಕಾರದ ಪ್ರಚಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲವಾದ್ದರಿಂದ ಆ ಜವಾಬ್ದಾರಿಯನ್ನು ನಿರ್ವಹಿಸಲು ಮತ್ತಷ್ಟು ಹುದ್ದೆಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
Advertisement