
ಬೆಂಗಳೂರು: ಶೂ ಭಾಗ್ಯ ಕಲ್ಪಿಸಿ ಸರ್ಕಾರವೇನೋ ಬೀಗುತ್ತಿದೆ. ಆದರೆ ಶೂಗಳನ್ನು ಖರೀದಿಸುವ ಹೊಣೆ ವಹಿಸಲಾಗಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ ಡಿಎಂಸಿ)ಗಳಿಗೆ ಸರ್ಕಾರದ ನಿರ್ಧಾರ ಇರುಸುಮುರುಸು ಉಂಟುಮಾಡಿದೆ.
ಈ ಯೋಜನೆಗೆ ಸಂಬಂಧಪಟ್ಟ ಹಣವನ್ನು ಶಿಕ್ಷಣ ಇಲಾಖೆ ಎಸ್ ಡಿಎಂಸಿ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. 26 ರೊಳಗೆ ಶೂ ಖರೀದಿ ಪ್ರಕ್ರಿಯೆ ಮುಗಿಸಬೇಕೆಂದು ಉದ್ದೇಶಿಸಲಾಗಿದೆ. ಸಮಸ್ಯೆ ಇರುವುದೇ ಇಲ್ಲಿ. ಶೈಕ್ಷಣಿಕ ವರ್ಷ ಇನ್ನೆರಡು ತಿಂಗಳಲ್ಲಿ ಮುಕ್ತಾಯಗೊಳ್ಳುವುದರಿಂದ ಸರ್ಕಾರ ಅತಿ ಶೀಘ್ರವಾಗಿ ಶೂ- ಸಾಕ್ಸ್ ಗಳನ್ನು ಫಲಾನುಭವಿಗಳ ಪಟ್ಟಿಯಲ್ಲಿರುವ 48 ಲಕ್ಷ ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಅಷ್ಟೊಂದು ಸಂಖ್ಯೆಯಲ್ಲಿ ಶೂ ಮತ್ತು ಸಾಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದೆಯೇ ಹಾಗೂ ಶಾಲಾ ಮಕ್ಕಳಿಗೆ ಸೂಚಿಸುವ ಮಾನದಂಡದ ಶೂ ಮತ್ತು ಸಾಕ್ಸ್ ಅದೇ ಬೆಲೆಗೆ ಸಿಗಲು ಸಾಧ್ಯವೇ ಎಂಬ ಪ್ರಶ್ನೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಸರ್ಕಾರ ಎಸ್ ಡಿಎಂಸಿಗಳಿಗೆ ಹಣ ಬಿಡುಗಡೆ ಮಾಡಲು ಹೇಳಿದೆ. ನಾವು ಮಾಡುತ್ತೇವಷ್ಟೆ. ಸರ್ಕಾರದ ಮಾನದಂಡದಂತೆ ಶೂ ಮತ್ತು ಸಾಕ್ಸ್ ಖರೀದಿಸಬೇಕಾದ್ದು ಎಸ್ ಡಿಎಂಸಿ ಗಳ ಕರ್ತವ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.
ಸರ್ಕಾರ 1 ರಿಂದ 5 ನೇ ತರಗತಿ ವರೆಗಿನ ಮಕ್ಕಳಿಗೆ 225 ರುಪಾಯಿ(ಪ್ರತಿ ವಿದ್ಯಾರ್ಥಿಗೆ) 6 ರಿಂದ 8 ನೇ ತರಗತಿ ವಿದ್ಯಾರ್ಥಿಗೆ 250 ರೂಪಾಯಿ, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗೆ 275 ರೂಪಾಯಿ ನಿಗದಿ ಮಾಡಿದೆ. ಮಾರುಕಟ್ಟೆಯಲ್ಲಿ ಈ ಹಣಕ್ಕೆ ಶೂ-ಸಾಕ್ಸ್ ಕೊಳ್ಳಲು ಸಾಧ್ಯವಿಲ್ಲ ಎಂಬ ಮಾತು ಸಹ ಕೇಳಿಬಂದಿದೆ. ಆದರೆ ಸರ್ಕಾರ ಮಾತ್ರ ಬಿಡುಗಡೆ ಮಾಡಿರುವ ಹಣದಲ್ಲಿ ಶೂ- ಸಾಕ್ಸ್ ಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ನಿಡುವ ಹೊಣೆಯನ್ನು ಎಸ್ ಡಿಎಂಸಿ ಹೆಗಲ ಮೇಲೆ ಹಾಕಿ ಕೈತೊಳೆದುಕೊಂಡಿದೆ. ಎಸ್ ಡಿಎಂಸಿ ಪರಿಸ್ಥಿತಿ ಮಾತ್ರ ಸಮಸ್ಯೆ ನಮಗೆ ಹೆಸರು ಮಾತ್ರ ಸರ್ಕಾರಕ್ಕೆ ಎಂಬಂತಾಗಿದೆ.
ಜನವರಿ ತಿಂಗಳಲ್ಲಿ ಪ್ರತಿ ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಸಾವಿರಾರು ಶೂಗಳನ್ನು ಸರಬರಾಜು ಮಾಡುವುದು ಹೋಲ್ ಸೇಲ್ ಡಿಸ್ಟ್ರಿಬ್ಯೂಟರ್ ಗಳಿಗೂ ಸಾಧ್ಯವಿಲದ ಮಾತು ಸರ್ಕಾರ ಈ ಬಗ್ಗೆ ಪರಾಮರ್ಶೆ ನಡೆಸಬೇಕಿತ್ತು ಎಂದು ಶಾಲಾ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement