ಆರ್ ಟಿಇ ಗಾಗಿ ಸುಳ್ಳು ಮಾಹಿತಿ ನೀಡಿದರೆ ಪೋಷಕರ ವಿರುದ್ಧ ಕ್ರಿಮಿನಲ್ ಕೇಸ್: ಸಚಿವ ಕಿಮ್ಮನೆ ಎಚ್ಚರಿಕೆ

ಸುಳ್ಳು ಮಾಹಿತಿ ನೀಡಿ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಸೀಟು ಪಡೆಯುವ ಪೋಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರ ಚಿಂತನೆ ನಡೆಸಿದೆ.
ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್

ಬೆಂಗಳೂರು: ಸುಳ್ಳು ಮಾಹಿತಿ ನೀಡಿ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಸೀಟು ಪಡೆಯುವ ಪೋಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಶಿವಮೊಗ್ಗ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಆರ್.ಪ್ರಸನ್ನ ಕುಮಾರ್ ಅವರನ್ನು ಅಭಿನಂದಿಸಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ದುರುಪಯೋಗ ತಡೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶಿಕ್ಷಣ ಹಕ್ಕು ಕಾಯ್ದೆಯಡಿ ಸುಳ್ಳು ಆದಾಯ ಪ್ರಮಾಣ ಪತ್ರ ಸೇರಿದಂತೆ ಅನೇಕ ಸುಳ್ಳು ಮಾಹಿತಿಗಳನ್ನು ನೀಡಿ ಆರ್ ಟಿಇ ಸೀಟು ಪಡೆಯಲಾಗುತ್ತಿದೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಇಂಥದ್ದೊಂದು ಚಿಂತನೆಗೆ ಮುಂದಾಗಿದೆ ಎಂದರು.
ಮಕ್ಕಳಿಗೆ ಶೂ ಮತ್ತು ಎರಡು ಜತೆ ಸಾಕ್ಸ್ ಖರೀದಿಗಾಗಿ ಮುಂದಿನ ಒಂದು ವಾರದಲ್ಲಿ ಶಾಲಾ ಅಡಳಿತ ಮಂದಲಿಗೆ ಹಣ ಜಮಾ ಮಾಡಲಾಗುವುದು. ಶಾಲೆಗೆ ದಾನಿಗಳು ದತ್ತಿ ನೀಡಿದರೆ, ಆ ಹಣದಿಂದ ಇನ್ನೂ ಹೆಚ್ಚಿನ ಗುಣಮಟ್ಟದ ಶೂಗಳನ್ನು ಖರೀದಿಸಿದರೆ ಸರ್ಕಾರದ ಅಭ್ಯಂತರವಿಲ್ಲ. ಆದರೆ ಮೂರು ತಿಂಗಳೊಳಗೆ ಶೂ ವಿತರಿಸಿರುವ ಬಗ್ಗೆ ಸರ್ಕಾರಕ್ಕೆ ಬಿಲ್ ಪಾವತಿಸಬೇಕು. ಶೂ ಗುಣಮಟ್ಟದ ಬಗ್ಗೆ ಇನ್ನೂ ಯಾವುದೇ ಮಾನದಂಡಗಳನ್ನು ಸೂಚಿಸಿಲ್ಲ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಆರ್ ಟಿಇ ನಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ: ಕೇಂದ್ರ ಸರ್ಕಾರದ ಆದೇಶದಂತೆ ಖಾಸಗಿ ಶಾಲೆಯಲ್ಲಿನ ಶೇ.25 ಮಕ್ಕಳಿಗೆ ಸರ್ಕಾರ ಹಣ ನೀಡುತ್ತಿದೆ. ಆರ್ ಟಿಇಯಿಂದ ಸರ್ಕಾರಿ ಶಾಲೆಗೆ ಹೊಡೆತ ಬೀಳುತ್ತಿರುವುದು ನಿಜ. ಆದರೆ ಆರ್ ಟಿಇ ರದ್ದುಪಡಿಸುವ ಯಾವುದೇ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com