ರೈತರ ಬಾಕಿಯಲ್ಲಿ ಅರ್ಧ ಹಣ ಠೇವಣಿ ಮಾಡಬಹುದಲ್ಲವೇ? : ಹೈಕೋರ್ಟ್
ಬೆಂಗಳೂರು: ರೈತರಿಗೆ ಪಾವತಿಸಬೇಕಾದ ಬಾಕಿ ಮೊತ್ತದಲ್ಲಿ ಶೇ.50 ರಷ್ಟಾದರೂ ಬ್ಯಾಂಕ್ ಖಾತೆಯಲ್ಲಿ ಏಕೆ ಠೇವಣಿ ಮಾಡಬಾರದು ಎಂದು ಹೈಕೋರ್ಟ್ ಸಕ್ಕರೆ ಕಾರ್ಖಾನೆಗಳನ್ನು ಪ್ರಶ್ನಿಸಿದೆ. ಕಾರ್ಖಾನೆಗಳಿಂದ ವಶಪಡಿಸಿಕೊಂಡಿದ್ದ ಸಕ್ಕರೆಯನ್ನು ಹರಾಜು ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ನಿರಾಣಿ ಶುಗರ್ಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಶೋಕ ಬಿ ಹಿಂಚಗೇರಿ ಅವರಿದ್ದ ನ್ಯಾಯಪೀಠ, ನೀವು(ಸಕ್ಕರೆ ಕಾರ್ಖಾನೆಗಳು) ರೈತರಿಗೆ ಬಾಕಿ ಇರುವ ಮೊತ್ತವನ್ನು ಪಾವತಿಸದಿರುವ ಒಂದು ಕಾರಣದಿಂದ ಅರ್ಜಿಯನ್ನು ವಜಾಗೊಳಿಸಬಹುದು. ಆದರೆ ಈ ಅಂಶವನ್ನು ಬಿಟ್ಟು ಇತರೆ ಯಾವ ಅಂಶಗಳನ್ನು ಅರ್ಜಿಯಲ್ಲಿ ಕೋರಿದ್ದೀರಿ ಎಂದ ನ್ಯಾಯಪೀಠ, ಬಾಕಿ ಮೊತ್ತದಲ್ಲಿ ಶೇ.50 ರಷ್ಟು ಮೊತ್ತವನ್ನು ಠೇವಣಿ ಮಾಡಬಹುದು ಎಂದು ತಿಳಿಸಿದೆ.
ವಿಚಾರಣೆ ವೇಳೆ ಹಾಜರಿದ್ದ ಸರ್ಕಾರದ ಪರ ವಕೀಲರು, ಸಕ್ಕರೆ ಕೈಗಾರಿಕೆಗಳಿಂದ ವಶಪಡಿಸಿಕೊಂಡಿರುವ ಸಕ್ಕರೆಯನ್ನು ಹರಾಜು ಮಾಡುವುದಕ್ಕೆ ಹೈಕೋರ್ಟ್ ತಡೆ ನೀಡಿದೆ. ಇದರಿಂದಾಗಿ ರೈತರಿಗೆ ಬಾಕಿ ಪಾವತಿಸಲು ಸಾಧ್ಯವಾಗದಂತಾಗಿದೆ. ಆದ್ದರಿಂದ ತಡೆಯನ್ನು ತೆರವು ಮಾಡಬೇಕು ಎಂದು ಮನವಿ ಮಾಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ