
ಬೆಂಗಳೂರು; ರಾಜ್ಯದಲ್ಲಿ ಸಂಸದರ ನಿಧಿ ಬಳಕೆ ಕುರಿತ ಲೋಕಸಬೆಯ ಉಪಾಧ್ಯಕ್ಷ ತಂಬಿ ದೊರೈ ನೇತೃತ್ವದ ಸಂಸದೀಯ ಸಮಿತಿ ಸಭೆಯು ಅಧಿಕಾರಿಯೊಬ್ಬರ ಗೈರಿನಿಂದಾಗಿ ರದ್ದಾದ ವಿಲಕ್ಷಣ ಘಟನೆ ಶುಕ್ರವಾರ ನಡೆಯಿತು. ಅಷ್ಟೇ ಅಲ್ಲದೇ ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ರನ್ನು ಮಾಧ್ಯಮಗಳು ಪ್ರತಿಕ್ರಿಯೆ ಕೇಳಲು ಹೋದಾಗ ದಿಕ್ಕಾಪಾಲಾಗಿ ಓಡಿ ಹೋದ ವಿಚಿತ್ರವೂ ಜರುಗಿತು.
ಅಷ್ಟೇ ಅಲ್ಲದೆ ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ವಿಧಾನಸೌಧದ ಎರಡನೇ ಮಹಡಿಯ ಕಚೇರಿಯೊಂದಕ್ಕೆ ಹೋಗಿ ಚಿಲಕ ಹಾಕಿಕೊಂಡ ಅವರು, ಮಾಧ್ಯಮದವರು ಅಲ್ಲಿಂದ ನಿರ್ಗಮಿಸುವವರೆಗೂ ಹೊರಗೆ ಬಾರದೆ ಸಮಯ ದೂಡಿದ್ದಾರೆ. ಈ ಪ್ರಸಂಗಕ್ಕೆ ವಿಧಾನಸೌಧದಲ್ಲಿರುವ ಕಚೇರಿಗಳ ಸಿಬ್ಬಂದಿಯೂ ಸಾಕ್ಷಿಯಾಗಿದ್ದಾರೆ.
ಯಾವ ಸಭೆ, ನಡೆದಿದ್ದೇನು?
ಸಂಸದರ ನಿಧಿ ಬಳಕೆ ಪರಾಮರ್ಶೆ ಸಭೆಗೆ ಮುಖ್ಯ ಕಾರ್ಯದರ್ಶಿ ಗೈರು ಹಾಜರಾದ ಬಗ್ಗೆ ಪ್ರತಿಕ್ರಿಯೆ ಕೇಳಲು ಮಾಧ್ಯಮದವರು ವಿಧಾನಸೌಧದಲ್ಲಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಅಡ್ವೋಕೇಟ್ ಜನರಲ್ ಕಚೇರಿಯಿಂದ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ಲಿಫ್ಟ್ ಮೂಲಕ ಮೂರನೇ ಮಹಡಿಗೆ ಬಂದರು. ಅಲ್ಲಿ ಮಾಧ್ಯಮದವರನ್ನು ಕಂಡ ತಕ್ಷಣ ಅಲ್ಲಿಂದ ಕಾಲ್ಕಿತ್ತು ಮತ್ತೆ ಲಿಫ್ಟ್ನೊಳಗೆ ಹೋದರು.
ಅಲ್ಲಿಂದ ಅವರು ಮೊದಲ ಮಹಡಿಗೆ ಆಗಮಿಸಿದರು. ಎಲೆಕ್ಟ್ರಾನಿಕ್ ಮಾಧ್ಯಮದ ಕ್ಯಾಮೆರಾಮನ್‌ಗಳು ಒಂದನೇ ಮಹಡಿಗೆ ಬಂದು ಮತ್ತೆ ಬೆನ್ನತ್ತಿದಾಗ ಮಹಡಿಯ ಮೆಟ್ಟಿಲುಗಳನ್ನು ದಡಬಡ ಹತ್ತಿ ಓಡಿ ಹೋದ ಜಾಧವ್ ಎರಡನೇ ಮಹಡಿಯ ಕೊಠಡಿಯೊಂದಕ್ಕೆ ಹೋಗಿ ಚಿಲಕ ಹಾಕಿಕೊಂಡರು. ಮಾಧ್ಯಮದವರು ಅಲ್ಲಿಂದ ನಿರ್ಗಮಿಸುವವರೆಗೂ ಹೊರ ಬರಲಿಲ್ಲ.
Advertisement