
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಂಬಂಧಿ ರಾಜಾ ಬಾಗಮನೆ ಎಂಬುವರಿಗೆ ಸೇರಿದೆ ಎನ್ನಲಾದ ಬಾಗಮನೆ ಟೆಕ್ ಪಾರ್ಕ್ ಭೈರಸಂದ್ರ ಕೆರೆ ಒತ್ತುವರಿ ಮಾಡಿರುವುದು ದೃಢಪಟ್ಟಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಭೂ ದಾಖಲೆಗಳ ಜಂಟಿ ನಿರ್ದೇಶಕರು ಮಂಗಳವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಂಕರ್ ಅವರಿಗೆ ವರದಿ ಸಲ್ಲಿಸಿದ್ದಾರೆ.
ಕೆರೆ ಒತ್ತುವರಿ ಕುರಿತು ಸದನ ಸಮಿತಿ ಅಧ್ಯಕ್ಷ ಶಾಸಕ ಕೆ.ಬಿ.ಕೋಳಿವಾಡ ಎರಡು ದಿನದ ಹಿಂದೆಯಷ್ಟೇ ಕೆರೆ ಒತ್ತುವರಿ ಮಾಡಿಕೊಂಡಿರುವ ಖಾಸಗಿ ಕಂಪನಿಗಳ ವಿವರವನ್ನು ಬಹಿರಂಗಪಡಿಸಿದ್ದರು. ಇದರ ಬೆನ್ನಲ್ಲೇ, ಭೂ ದಾಖಲೆಗಳ ಜಂಟಿ ನಿರ್ದೇಶಕರು ಈ ವರದಿ ಸಲ್ಲಿಸಿದ್ದಾರೆ. ಒಂದು ವರ್ಷದಿಂದಲೂ ನನೆಗುದಿಗೆ ಬಿದ್ದಿದ್ದ ಕಾರ್ಯವನ್ನು ಭೂ ದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್ ಪೂರ್ಣಗೊಳಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಉನ್ನತ ಮೂಲಗಳು ಖಚಿತಪಡಿಸಿವೆ. ಕೆ.ಆರ್.ಪುರಂ ಹೋಬಳಿ ಭೈರಸಂದ್ರ ಗ್ರಾಮದ 12 ಎಕರೆ 21 ಗುಂಟೆ ವಿಸ್ತೀರ್ಣದ ಕೆರೆ ಪ್ರದೇಶದಲ್ಲಿ ಬಾಗಮನೆ ಟೆಕ್‍ಪಾರ್ಕ್ ೨ ಎಕರೆ 10 ಗುಂಟೆ ಒತ್ತುವರಿ ಮಾಡಿದೆ. ಇದರಲ್ಲಿ 9 ಗುಂಟೆ ಪ್ರದೇಶದಲ್ಲಿ ಟೆಕ್‍ಪಾಕ್ರ್ ನ ಮುಖ್ಯ ಆಡಳಿತ ಕಟ್ಟಡ, 21 ಗುಂಟೆಯಲ್ಲಿ ಕಾರ್ ಪಾರ್ಕಿಂಗ್ ಮತ್ತು 27 ಗುಂಟೆಯಲ್ಲಿ ಹೊರ ಕಾರ್ ಪಾರ್ಕಿಂಗ್ ಗೆಂದು ಕಾಂಪೌಂಡ್ ಹಾಕಿಕೊಂಡಿದೆ ಎಂಬ ಮಾಹಿತಿ ಭೂ ದಾಖಲೆಗಳ ಜಂಟಿ ನಿರ್ದೇಶಕರ ವರದಿಯಲ್ಲಿದೆ ಎನ್ನಲಾಗಿದೆ.
ಅದೇ ರೀತಿ, ಕೆರೆಯ ಪೂರ್ವ ಭಾಗದಲ್ಲಿನ 7.50 ಗುಂಟೆಯನ್ನು ಟೆಕ್‍ಪಾರ್ಕ್‍ನ ವಿವಿಧ ಉಪಯೋಗಗಳಿಗಾಗಿ ಬಳಸಿ ಕೊಂಡಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ಹೇಳಿದ್ದು, ಇದಲ್ಲದೆ 1 ಎಕರೆ ವಿಸ್ತೀರ್ಣದಲ್ಲಿ ಸಿಮೆಂಟ್ ರಸ್ತೆಯನ್ನು ಕಂಪನಿ ನಿರ್ಮಿಸಿ ನಿರ್ವಹಣೆ ,ಮಾಡುತ್ತಿದೆ ಎಂದೂ ಹೇಳಿದ್ದಾರೆ ಎನ್ನಲಾಗಿದೆ. ಟೆಕ್ ಪಾರ್ಕ್ ಜತೆಯಲ್ಲೇ ಕಾಗ್ನಿಜೆಂಟ್ ಹೆಸರಿನ ಕಂಪನಿ ಕೂಡ ಭೈರಸಂದ್ರ ಕೆರೆಯನ್ನು ಒತ್ತುವರಿ ಮಾಡಿಕೊಂಡಿದೆ ಎಂಬ ಮಾಹಿತಿಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement