ನ್ಯಾ.ಎಸ್ ಆರ್ ನಾಯಕ್ ವಿರುದ್ಧ ಜನಾಧಿಕಾರ ಪರಿಷತ್ ದೂರು

ನಿಯಮಗಳನ್ನು ಉಲ್ಲಂಘಿಸಿ ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ನಾಯಕ್ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.
ನ್ಯಾ.ಎಸ್ ಆರ್ ನಾಯಕ್
ನ್ಯಾ.ಎಸ್ ಆರ್ ನಾಯಕ್

ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ನಾಯಕ್ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್, ಲೋಕಾಯುಕ್ತಕ್ಕೆ  ದೂರು ಸಲ್ಲಿಸಿದೆ.

ಈ ಬಗ್ಗೆ ಲೋಕಾಯುಕ್ತ ಎಡಿಜಿಪಿ ಪರಶಿವಮೂರ್ತಿ ಅವರಿಗೆ ಪರಿಷತ್‍ನ ಅಧ್ಯಕ್ಷ ಆದರ್ಶ ಅಯ್ಯರ್, ಪ್ರಕಾಶ್ ಬಾಬು, ವಿಶ್ವನಾಥ ವಿ.ಬಿ., ರಾಜೇಶ್ ಕುಮಾರ್, ನಾರಾಯಣ, ಜಯರಾಮ ಭಟ್ ಹಾಗೂ ಕಪಾಲಿ ಅವರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಸೊಸೈಟಿ ನೋಂದಣಿ ಕಾಯ್ದೆಯಡಿ ದೂರು ಸಲ್ಲಿಸಿದ್ದಾರೆ. ಎಸ್.ಆರ್.ನಾಯಕ್ ಅವರನ್ನು ಲೋಕಾಯುಕ್ತ ಹುದ್ದೆಗೆ ನೇಮಿಸಬಾರದು ಹಾಗೂ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ನ್ಯಾಯಮೂರ್ತಿಗಳಾಗಿದ್ದ ಸಂದರ್ಭದಲ್ಲಿ  ಎಸ್. ಆರ್. ನಾಯಕ್ 2002-03ನೇ ಸಾಲಿನಲ್ಲಿ ನ್ಯಾಯಾಂಗ ಇಲಾಖೆಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಅಳ್ಳಾಲಸಂದ್ರದಲ್ಲಿರುವ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆಯುವ ಮೂಲಕ ಖರೀದಿ ಗೃಹ ನಿರ್ಮಾಣ  ಸಂಘದ ನಿಯಮಗಳನ್ನು  ಉಲ್ಲಂಘಿಸಿದ್ದಾರೆ. ಸಂಘದ ಬೈಲಾ ಪ್ರಕಾರ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆಯುವ ವ್ಯಕ್ತಿ ಅಥವಾ ಆತನ ಕುಟುಂಬದ ಸದಸ್ಯರ ಹೆಸರಿನಲ್ಲಿ ಬೇರೆ ಯಾವುದೇ ನಿವೇಶನ ಹೊಂದಿರಬಾರದು.

ಆದರೆ, ಎಸ್.ಆರ್. ನಾಯಕ್ ಬೈಲಾ ನಿಯಮ ಉಲ್ಲಂಘಿಸಿ ಸುಳ್ಳು ಮಾಹಿತಿ ನೀಡಿ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆದಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ. ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಖರೀದಿಸುವ ಮುನ್ನವೇ ಅಂದರೆ 1990ರಲ್ಲಿಯೇ  ಎಸ್.ಆರ್.ನಾಯಕ್, ಪತ್ನಿ ಶಾಲಿನಿ ನಾಯಕ್ ಹೆಸರಿನಲ್ಲಿ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಬಿಡಿಎ ನಿವೇಶನ ಪಡೆದಿದ್ದಾರೆ. ಜತೆಗೆ 2001ರಲ್ಲಿ ಆರ್‍ಎಂವಿ ಲೇಔಟ್‍ನ 2ನೇ ಬ್ಲಾಕ್‍ನಲ್ಲಿ 10,200  ಚದರಡಿಯ ಒಂದೂವರೆ ಕೋಟಿ ರು. ಮೌಲ್ಯದ ನಿವೇಶನ ಹಾಗೂ ಗಂಗಮ್ಮನಗುಡಿಯ ಜಾರಕಿಬಂಡೆ ಕಾವಲಿನಲ್ಲಿ ಒಂದು ನಿವೇಶನ ಹೊಂದಿದ್ದಾರೆ. ಆದರೂ ನಿಯಮ ಬಾಹಿರವಾಗಿ ನಿವೇಶನ ಖರೀದಿಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com