ವಿವಿಗಳಲ್ಲಿ ಸೈಬರ್ ಸೆಕ್ಯೂರಿಟಿ ಕೋರ್ಸ್
ಬೆಂಗಳೂರು: ರಾಜ್ಯದ ಎಲ್ಲಾ 17 ವಿವಿಗಳಲ್ಲಿ 2016-17ನೇ ಸಾಲಿನಿಂದ ಸೈಬರ್ ಸೆಕ್ಯೂರಿಟಿ ಕೋರ್ಸ್ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಅತಿ ದೊಡ್ಡ ಬೆದರಿಕೆ ಹುಟ್ಟಿಸುತ್ತಿದೆ. ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ (ಐಸಿಟಿ)ಯ ಸಹಾಯದಿಂದ ಸೈಬರ್ ಅಪರಾಧ ತಡೆಗೆ ಈ ಕೋರ್ಸ್ ಬಳಕೆಯಾಗಲಿದೆ. ಆನ್‍ಲೈನ್ ಖರೀದಿ, ಶಿಕ್ಷಣ ವ್ಯವಸ್ಥೆ, ವ್ಯವಹಾರ, ಇ- ಆಡಳಿತ , ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಉನ್ನತ ಮಟ್ಟದ ಭದ್ರತೆ ಒದಗಿಸುವುದು ಕೋರ್ಸಿನ ಆದ್ಯತೆಯಾಗಿದೆ. ಬುದ್ಧಿವಂತ ಹ್ಯಾಕರ್ಸ್ ಗಳು ಐಸಿಟಿ ಪ್ರಕ್ರಿಯೆಯನ್ನು ಹಾಳುಗೆಡವುತ್ತಿದ್ದಾರೆ. ಹೀಗಾಗಿ 1 ಲಕ್ಷ ಸೈಬರ್ ಸೆಕ್ಯೂರಿಟಿ ಪರಿಣಿತರು ಬೇಕಾಗಿದ್ದು, ನೂತನ ಕೋರ್ಸಿನ ಮೂಲಕ ಅಂತಹವರನ್ನು ಸಿದ್ಧಪಡಿಸಲಾಗುವುದು ಎಂದರು.
ವಿವಿಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ರೀತಿಯಲ್ಲಿ ಆರಂಭಿಸಲಾಗುವುದು. ಇದರಲ್ಲಿ ಸೈಬರ್ ಫಾರ್ಸಾನಿಕ್ ಅಂಡ್ ಇನ್ಫಾರ್ಮೆಷನ್ ಸೆಕ್ಯೂರಿಟಿ, ಸೆಕ್ಯೂರಿಟಿ, ಸಿಸ್ಟಂ ಅಂಡ್ ನೆಟ್‍ವರ್ಕ್ ಸೆಕ್ಯೂರಿಟಿ, ಪ್ರಿನ್ಸಿಪಲ್ಸ್ ಆಪ್ ಇನ್ಫಾರ್ಮೆಷನ್ ಸೆಕ್ಯೂರಿಟಿ, ಸ್ಕ್ರಿಪ್ಟಿಂಗ್ ಅಂಡ್ ಕಂಪ್ಯೂಟಿಂಗ್ ಎನ್ವರ್ಮೆಂಟ್ಸ್, ಅಡ್ವಾನ್ಸ್ ಡ್ ಪ್ರಾಬ್ಲಂ ಸಾಲ್ವಿಂಗ್ ಅಂಡ್ ಅದರ್ ರಿಲೇಟೆಡ್ ಡಿಸಿಪ್ಲಿನ್ಸ್ ಕೋರ್ಸುಗಳನ್ನು ಆಯ್ಕೆ ಮಾಡಿ ಅಧ್ಯಯನ ಮಾಡಬಹುದು ಎಂದು ಸಚಿವರು ಮಾಹಿತಿ ನೀಡಿದರು.
ಉದ್ಯೋಗ ಸೃಷ್ಟಿಸಲು ಅನುಕೂಲ: ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಈ ಕೋರ್ಸ್ ತಣಿಸಲಿದೆ. ಈ ಕೋರ್ಸ್ ಜ್ಞಾನ ಮತ್ತು ನೈಪುಣ್ಯತೆ ಗಳಿಸಿಕೊಡಲಿದ್ದು, ಅಂತರ್ಜಾಲ ಸಂಪರ್ಕಗಳ ಮೇಲೆ ನಿಗಾ ವಹಿಸಲಿದೆ. ಇಂದು ಬೇರೆ ಬೇರೆ ಕೈಗಾರಿಕೆಗಳೊಂದಿಗೆ ಸಂಪರ್ಕ ಬೆಳೆಯುತ್ತಿರುವಾಗ ಸೈಬರ್ ಸೆಕ್ಯೂರಿಟಿ ಅತ್ಯಗತ್ಯವಾಗಿದೆ. ವೃತ್ತಿಪರ ಭದ್ರತಾ ವಿಶ್ಲೇಷಣೆಯನ್ನು ವಿನ್ಯಾಸ ಮಾಡುವುದು, ಸ್ಪರ್ಧೆ ರೂಪಿಸುವುದು, ಮೇಲ್ವಿಚಾರಣೆಯನ್ನು ಒಳಗೊಳ್ಳುವುದು, ಭದ್ರತಾ ಕಾರ್ಯ ಮತ್ತು ನಿಗಾ, ಸಾಗಾಣೆ ವಿಶ್ಲೇಷಣೆ ಮತ್ತು ಘಟನೆಯ ಬಗೆಗಿನ ವಿಸ್ತೃತ ಜ್ಞಾನವನ್ನು ಒದಗಿಸುವುದು ಸೈಬರ್ ಸೆಕ್ಯೂರಿಟಿಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ನಾಲ್ಕು ವಿವಿಗಳಿಗೆ ತಲಾ 20 ಕೋಟಿ ಬಿಡುಗಡೆ ದಾವಣಗೆರೆ, ಕಲಬುರ್ಗಿ, ಕನ್ನಡ ವಿವಿ ಮತ್ತು ವಿಜಯಪುರ ಮಹಿಳಾ ವಿವಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ತಲಾ 20 ಕೋಟಿ ಅನುದಾನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸಾ) ಯೋಜನೆಯಡಿ ಅನುದಾನ ನೀಡಲಾಗಿದೆ. ಅಲ್ಲದೆ ನ್ಯಾಕ್ ಮಾನ್ಯತೆ ಪಡೆದ ರಾಜ್ಯದ 92 ಪದವಿ ಕಾಲೇಜುಗಳಿಗೆ ತಲಾ 2 ಕೋಟಿ (ಹೈ.ಕ. ದ 36 ಕಾಲೇಜುಗಳು ಸೇರಿವೆ), ನರಗುಂದ ದಲ್ಲಿ ತಾಂತ್ರಿಕ ಕಾಲೇಜು ನಿರ್ಮಾಣಕ್ಕೆ 26 ಹಾಗೂ ಜೇವರ್ಗಿಯಲ್ಲಿ ಮಾದರಿ ಪದವಿ ನಿಮಾಣಕ್ಕೆ 4 ಕೋಟಿ ಮೀಸಲಿಡಲಾಗಿದೆ. ಈಗ ಆಯ್ಕೆಯಾಗಿರುವ ಕಾಲೇಜುಗಳು ನ್ಯಾಕ್ ಮಾನ್ಯತೆ ಗಿಟ್ಟಿಸಿದ್ದು, ಹಾಲಿ ನ್ಯಾಕ್ ಮಾನ್ಯತೆ ಪಡೆಯುವ ಪ್ರಕ್ರಿಯೆಯಲ್ಲಿರುವ ಕಾಲೇಜುಗಳಿಗೆ 2ನೇ ಹಂತದಲ್ಲಿ ತಲಾ 2 ಕೋಟಿ ನೀಡಲಾಗುವುದು. ಈ ಹಣದ ಸಮರ್ಪಕ ಳಕೆಯ ಉಸ್ತುವಾರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗುವುದು ಎಂದರು.
ರೇಟಿಂಗ್‍ಗೆ ಸಮಿತಿ: ರಾಜ್ಯದ ಎಲ್ಲಾ ವಿವಿಗಳು ಆಯಾ ವಿಭಾಗಗಳಲ್ಲಿನ ಸಾಮರ್ಥ್ಯವನ್ನು ಕಂಡುಹಿಡಿಯಲು ಮತ್ತು ವಿಶ್ಲೇಷಾತ್ಮಕ ವಿಶ್ಲೇಷಣಾ ವರದಿ ತಯಾರಿಸುವ ನಿಟ್ಟಿನಲ್ಲಿ ಪ್ರಾಥಮಿಕ ಮಾನದಂಡವಾಗಿ ಸಂಶೋಧನಾ ನೈಪುಣ್ಯತೆ, ಬೋಧನಾ ನೈಪುಣ್ಯತೆ, ಮಾಧ್ಯಮಿಕ ಮಾನದಂಡವಾಗಿ ಔದ್ಯೋಗಿಕ ಲಭ್ಯತೆ, ನಾವೀನ್ಯತೆ, ಮೂಲಭೂತ ಸೌಕರ್ಯ ಹಾಗೂ ಮೂರನೇ ಹಂತದಲ್ಲಿ ಒಳಗೊಳ್ಳುವಿಕೆ ಹಾಗೂ ಸಾಮಾಜಿಕ ಪರಿಣಾಮವನ್ನು ನಿರ್ದಿಷ್ಟಪಡಿಸಲಾಗಿದೆ. ಈ 3 ಹಂತಗಳಲ್ಲಿ ಆಯಾ ಕಾಲೇಜುಗಳಿಗೆ ರೇಟಿಂಗ್ ನಿರ್ಧರಿಸಲಾಗುವುದೆಂದರು.
ವಿಶ್ವ ಶಿಕ್ಷಣ ವೇದಿಕೆಗೆ ಪಯಣ: ಇಂಗ್ಲೆಂಡ್‍ನಲ್ಲಿ ಒಂದು ವಾರಗಳ ನಡೆಯುವ `ವಿಶ್ವ ಶಿಕ್ಷಣ ವೇದಿಕೆ' ಸಮ್ಮೇಳನದಲ್ಲಿ ಭಾಗವಹಿಸಲು ತಾವು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‍ಲಾಲ್ ಮೀನಾ ಜನವರಿ 17 ರಂದು ತೆರಳುತ್ತಿದ್ದೇವೆ. ಈ ಸಮ್ಮೇಳನದಲ್ಲಿ ವಿಶ್ವದ 100 ಮಂದಿ ಉನ್ನತ ಶಿಕ್ಷಣ ಸಚಿವರು ಪಾಲ್ಗೊಳ್ಳುತ್ತಿದ್ದಾರೆ. ಇಂಗ್ಲೆಂಡ್ ಮತ್ತು ಸ್ಕಾಟ್ ಲೆಂಡ್‍ನ 25 ಸಾವಿರ ವಿದ್ಯಾರ್ಥಿಗಳು ಇಂಗ್ಲಿಷ್ ಐಚ್ಛಿಕ ವಿಷಯ ಕಲಿಕೆಗೆ ಭಾರತಕ್ಕೆ ಆಗಮಿಸುವರು. ಅಲ್ಲದೆ ಅಲ್ಲಿಗೆ ನಮ್ಮ ವಿದ್ಯಾರ್ಥಿಗಳನ್ನೂ ಕಳುಹಿಸಲು ಈ ಸಮ್ಮೇಳನ ವೇದಿಕೆ ಒದಗಿಸಿ ಕೊಡಲಿದೆ. ರಾಜ್ಯದ ಮೈಸೂರು, ಕಲಬುರ್ಗಿ, ಬೆಂಗಳೂರು ವಿವಿಗಳನ್ನು ಶಿಫಾರಸು ಮಾಡಲಾಗಿದ್ದು 2 ವಿವಿಗಳು ಆಯ್ಕೆಯಾಗಿವೆ ಎಂದರು.