ಲಕ್ಷ ಗ್ರಾಮಕ್ಕೆ ಬಜರಂಗದಳ: ಸುರೇಂದ್ರ ಕುಮಾರ್ ಜೈನ್
ಬೆಂಗಳೂರು: ಮುಂದಿನ ಏಪ್ರಿಲ್ ಒಳಗೆ ಬಜರಂಗದಳವನ್ನು 1 ಲಕ್ಷ ಗ್ರಾಮಗಳಿಗೆ ವಿಸ್ತರಣೆ ಮಾಡುವುದಲ್ಲದೆ, ಪ್ರತಿ ಗ್ರಾಮದಲ್ಲೂ ರಾಮೋತ್ಸವ ಆಚರಣೆ ಮಾಡಲು ಬಜರಂಗದಳ ಸಂಕಲ್ಪ ಮಾಡಿದೆ.
ಎರಡು ದಿನಗಳ ಕಾಲ ನಗರದ ಸರ್ದಾರ್ ಪಟೇಲ್ ಭವನದಲ್ಲಿ ನಡೆದ ಬಜರಂಗದಳದ ರಾಷ್ಟ್ರದ ಅಭಿವೃದ್ಧಿ ಹಾಗೂ ಹಿಂದೂ ಸಮಾಜದ ಉಳಿವಿಗೆ ದೇಶಾದ್ಯಂತ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದು ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಹೇಳಿದರು.
ದೇಶದಲ್ಲಿ ಎಲ್ಲ ಜಾತಿ ಮತಗಳಿಗೆ ಸಮಾನವಾದ ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಜಾರಿಗೊಳಿಸುವಂತೆ ಕೇಂದ್ರಕ್ಕೆ ಒತ್ತಡ ಹೇರಲು ಕೂಡ ನಿರ್ಣಯ ಕೈಗೊಳ್ಳಲಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಸಮಾಜದ ಅಭಿವೃದ್ಧಿ ಕಷ್ಟಕರ. ಈ ವಿದ್ಯಮಾನವನ್ನು ಮುಸ್ಲಿಂ ಸಮುದಾಯ ಹೆಚ್ಚು ಅರಿತುಕೊಳ್ಳುವ ಅವಶ್ಯಕತೆ ಇದೆ. ಮುಂದಿನ ಸಮಾಜಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದ್ದು, ಇಂತಹ ಸನ್ನಿವೇಶಗಳನ್ನು ಎದುರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜನಸಂಖ್ಯಾ ನೀತಿ ಜಾರಿಗೊಳಿಸುವಂತೆ ಕೇಂದ್ರಕ್ಕೆ ಒತ್ತಡ ಹೇರಲು ಬಜರಂಗದಳದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಮದರಸ ನಿಷೇಧಿಸಿ: ಫ್ರಾನ್ಸ್, ಜರ್ಮನಿ ಸೇರಿದಂತೆ ಪಾಕಿಸ್ತಾನಗಳಲ್ಲಿಯೂ ಭಯೋತ್ಪಾದನಾ ಚಟುವಟಿಕೆಗಳ ಕೇಂದ್ರವಾಗಿರುವ ಮದರಸಗಳ ಮೇಲೆ ನಿಷೇಧ ಹೇರಲಾಗುತ್ತಿದೆ. ದೇಶದಲ್ಲೂ ಇದೇ ರೀತಿಯ ನಿರ್ಧಾರ ಕೇಂದ್ರ ಕೈಗೊಳ್ಳುವಂತೆ ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ