
ಬೆಂಗಳೂರು:ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ನಡುವಿನ ಲಾಬಿ ತೀವ್ರಗೊಂಡಿದ್ದು, ಆಕಾಂಕ್ಷಿಗಳು ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಇದೀಗ ಹೆಬ್ಬಾಳು ಉಪಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಸಂಸತ್ತಿನ ಪ್ರತಿಪಕ್ಷ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆಗೆ ದುಂಬಾಲು ಬಿದ್ದಿದ್ದಾರೆ. ಹಾಗೆಯೇ ಕೆಲವು ಅಲ್ಪಸಂಖ್ಯಾತ ಮುಖಂಡರು ಸಚಿವ ರೋಷನ್ ಬೇಗ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಕ್ಷೇತ್ರದ ಆಕಾಂಕ್ಷಿ, ಸಿಎಂ ಆಪ್ತರೆಂದೇ ಗುರುತಿಸಿಕೊಂಡಿರುವ ರೇವಣ್ಣ, ಭಾನುವಾರ ಸದಾಶಿವನಗರದಲ್ಲಿರುವ ಖರ್ಗೆ ನಿವಾಸಕ್ಕೆ ಭೇಟಿ ನೀಡಿದರು. ಗೆಲ್ಲುವ ಸಾಧ್ಯತೆಯನ್ನು ಮನವರಿಕೆ ಮಾಡಿದ ಅವರು, ಪಕ್ಷದ ಟಿಕೆಟ್ ಗಾಗಿ ವಿನಂತಿಸಿದರು. ಹಾಗೆಯೇ ಮತ್ತೊಬ್ಬ ಶಾಸಕ ಭೈರತಿ ಸುರೇಶ್ ಈಗಾಗಲೇ ಕ್ಷೇತ್ರಾದ್ಯಂತ ಓಡಾಡಿ ಕಾಂಗ್ರೆಸ್ ನಿಂದಲೂ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿರುವ ಬಗ್ಗೆಯೂ ರೇವಣ್ಣ ಪ್ರಸ್ತಾಪಿಸಿದರು ಎನ್ನಲಾಗಿದೆ. ಇನ್ನೊಂದೆಡೆ ಸಚಿವ ರೋಷನ್ ಬೇಗ್ ಮತ್ತು ರಾಜ್ಯಸಭಾ ಸದಸ್ಯ ಕೆ.ರೆಹಮಾನ್ ಖಾನ್ ನೇತೃತ್ವದ ನಿಯೋಗ ಖಾಸಗಿ ಹೊಟೇಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಹೆಬ್ಬಾಳು ಕ್ಷೇತ್ರ ಸೇರಿದಂತೆ ಜಿಪಂ, ತಾಪಂ ಚುನಾವಣೆಯಲ್ಲೂ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿನಂತಿಸಿದರು.
ಇಂದು ಕೆಪಿಸಿಸಿ ಸಭೆ: ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೆಪಿಸಿಸಿ ಜಿಲ್ಲಾ ಪದಾಧಿಕಾರಿಗಳು ಮತ್ತು ವೀಕ್ಷಕರ ಸಭೆ ಇಂದು ನಡೆಯಲಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಯಿಂದ ಈಗಾಗಲೇ 30 ಜಿಲ್ಲೆಗಳಿಗೂ ವೀಕ್ಷಕರನ್ನು ನೇಮಿಸಲಾಗಿದೆ. ಇವರು ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಅಭ್ಯರ್ಥಿಯಾಗಿರುವವರ ಮಾಹಿತಿ ಸಂಗ್ರಹಿಸಿ ವರದಿಯನ್ನು ಸಿದ್ದಪಡಿಸುತ್ತಿದ್ದಾರೆ.
ಉಪಸಮರಕ್ಕೆ ಕಾಂಗ್ರೆಸ್ ಸಜ್ಜು: ಮೂರು ವಿಧಾನಸಭಾ ಕ್ಷೇತ್ರಗಳ ಉಪ ಸಮರಕ್ಕೆ ರಾಜಕೀಯ ಪಕ್ಷಗಳಲ್ಲಿ ಕಸರತ್ತು ಶುರುವಾಗಿದ್ದು, ಈ ತಯಾರಿಯಲ್ಲಿ ಕಾಂಗ್ರೆಸ್ ಎಲ್ಲ ಪಕ್ಷಗಳಿಗಿಂತ ವೇಗವಾಗಿ ಹೆಜ್ಜೆ ಇಡುತ್ತಿದೆ.
ಇಷ್ಟು ದಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಕಡೆ ಮುಖ ಮಾಡಿದ್ದ ಕಾಂಗ್ರೆಸ್ ಈಗ ಉಪ ಚುನಾವಣೆಯತ್ತ ವೇಗದ ಹೆಜ್ಜೆ ಹಾಕಿದೆ. ಜನವರಿ 22ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜನವರಿ 20ರ ನಂತರ ಚುನಾವಣಾ ತಯಾರಿ ಆರಂಭಿಸುವ ಸಾಧ್ಯತೆ ಇದೆ.
Advertisement