
ತುಮಕೂರು: ಮಡೆಸ್ನಾನ ಅಸ್ಪೃಶ್ಯತೆ ಆಚರಣೆಗೆ ಸಮ. ಮಡೆಸ್ನಾನ ನಡೆಸಲು ಆಸ್ಪದ ಕೊಡುವ ಮಠ, ದೇವಸ್ಥಾನ ಅಥವಾ ಯಾರೇ ಆದರೂ ಅವರ ವಿರುದ್ಧ ಕೇಸ್ ದಾಖಲಿಸ ಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದರು.
ದೇವರಾಯನದುರ್ಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ದಲಿತ ಸೇನೆ ಸಮಿತಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟನೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಲ್ವರ್ಗದವರು ಊಟ ಮಾಡಿದ ಎಂಜಲೆಲೆಗಳ ಮೇಲೆ ಕೆಳ ವರ್ಗದ ಜನರು ಉರುಳಾಡುವ ಮಡೆಸ್ನಾನಕ್ಕೆ ಧಾರ್ಮಿಕ ಲೇಪ ಹಚ್ಚಲಾಗಿದೆ. ಸಮಾನತೆಯ ಆಶಯ ಹೊಂದಿರುವ ಸಂವಿಧಾನ ವಿರೋಧ ಮಡೆಸ್ನಾನದ ವಿರುದ್ಧ ಹೋರಾಟ ಅನಿವಾರ್ಯ ಎಂದು ತಿಳಿಸಿದರು.
ದೇಶಾದ್ಯಂತ ಏಕರೂಪ ಶಿಕ್ಷಣ ಪದ್ಧತಿ ಜಾರಿಯಾಗಬೇಕು. ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿ ಆಗೋವರೆಗೂ ಸಮಗ್ರ ಆರ್ಥಿಕ ಅಭಿವೃದ್ಧಿ ಅಸಾಧ್ಯ. ಆರ್ಥಿಕ ಅಭಿವೃದ್ಧಿಗೆ ಅರ್ಥವೂ ಇಲ್ಲ. ಎಲ್‍ಜೆಪಿ, ದಲಿತ ಸೇನೆ ಮೂಲ ಉದ್ದೇಶ ಇರುವುದು ವರ್ಗರಹಿತ ಸಮಾಜ. ಇದಕ್ಕಾಗಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು. ಎಸ್‍ಸಿ,
ಎಸ್‍ಟಿ ಕೋಟಾ ಭರ್ತಿಯಾಗುತ್ತಿಲ್ಲ: ಐಎಎಸ್, ಐಪಿಎಸ್ ರೀತಿಯಲ್ಲೇ ಇಂಡಿಯನ್ ಜ್ಯುಡಿಷಿಯಲ್ ಸರ್ವಿಸ್( ಐಜೆಎಸ್) ಜಾರಿಯಾಗಬೇಕು. ಸ್ವಾತಂತ್ರ್ಯ ಬಂದು 69 ವರ್ಷಗಳು ಕಳೆದರೂ ಉನ್ನತ ಹುದ್ದೆಗಳು ಎಸ್‍ಸಿ, ಎಸ್‍ಟಿ ಕೋಟಾದಡಿ ಭರ್ತಿಯಾಗುತ್ತಿಲ್ಲ ಎಂದು ವಿಷಾದಿಸಿದ ಪಾಸ್ವಾನ್, ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಜಾರಿಗೆ ತರಬೇಕು. ಬಡ್ತಿಯಲ್ಲೂ ಮೀಸಲು ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
Advertisement