
ಬೆಂಗಳೂರು: ಸಾಫ್ಟ್ ವೇರ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿ ಅಪಾರ್ಟ್ ಮೆಂಟ್ ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಾಡುಗೋಡಿಯ ಮಹಾವೀರ್ ಕಿಂಗ್ಸ್ ಪ್ಲೇಸ್ ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ಕುಸುಮರಾಣಿ ಕೊಲೆಯಾದವರು. ಪಂಜಾಬ್ ಮೂಲದವರಾದ ಇವರು ವೈಟ್ ಫೀಲ್ಡ್ ನಲ್ಲಿರುವ ಐಬಿಎಂ ಸಾಫ್ಟ್ ವೇರ್ ಕಂಪನಿ ಉದ್ಯೋಗಿಯಾಗಿದ್ದರು. ಗೆಳತಿ ಐಟಿಪಿಎಲ್ ನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ನಿಧಿ ಶರ್ಮಾ ಕೆಲಸ ಮುಗಿಸಿ ರಾತ್ರಿ 8ರ ಸುಮಾರಿಗೆ ಮನೆಗೆ ವಾಪಸಾದಾಗ ಕೊಲೆ ಘಟನೆ ಬೆಳಕಿಗೆ ಬಂದಿದೆ. ಕುಸುಮರಾಣಿ ಅವರ ಕುತ್ತಿಗೆಗೆ ವಿದ್ಯುತ್ ವೈರ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
ಕೊಲೆಯಾದ ಕುಸುಮರಾಣಿ ಅವರು ವಿವಾಹವಾಗಲು ಸಂಗಾತಿಯ ಹುಡುಕಾಟದಲ್ಲಿದ್ದರು.ಅದಕ್ಕಾಗಿ ವಧು ವರರ ಮಾಹಿತಿಯ ವೆಬ್ ಸೈಟ್ ಗಳನ್ನು ಹೆಚ್ಚಾಗಿ ನೋಡುತ್ತಿದ್ದರು ಎನ್ನಲಾಗಿದೆ. ಇದೀಗ ಅವರ ಕೊಲೆ ಹಲವು ಅನುಮಾನ ಹುಟ್ಟು ಹಾಕಿದೆ. ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಚಿತನಿಂದಲೇ ಕೊಲೆಶಂಕೆ: ಪರಿಚಿತ ವ್ಯಕ್ತಿಯೇ ಕುಸುಮ ರಾಣಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ 11.30 ರ ಸುಮಾರಿಗೆ ಅಪಾರ್ಟ್ ಮೆಂಟ್ ನಿಂದ ವ್ಯಕ್ತಿಯೊಬ್ಬ ಮೊಬೈಲ್ ನಿಂದ ಕುಸುಮರಾಣಿ ಅವರಿಗೆ ಕರೆ ಮಾಡಿದ್ದಾನೆ. ಬಳಿಕ ಕುಸುಮರಾಣಿ ಅವರು ಕೆಳಗೆ ಬಂದು ಸೆಕ್ಯೂರಿಟಿ ಪುಸ್ತಕದಲ್ಲಿ ಆ ವ್ಯಕ್ತಿಯ ಮಾಹಿತಿ ಎಂಟ್ರಿ ಮಾಡಿ ಒಳಗೆ ಕರೆದು ಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಇನ್ನು ಕುಸುಮರಾಣಿ ಮನೆಯೊಳಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಬ ಆ ವ್ಯಕ್ತಿಯ ಚಲನವಲನ ಅಸ್ಪಷ್ಟವಾಗಿ ದಾಖಲಾಗಿದೆ. ಹಾಗಾಗಿ ಆ ಪರಿಚಿತ ವ್ಯಕ್ತಿಯೇ ಕುಸುಮರಾಣಿ ಕೊಲೆ ಮಾಡಿರುವ ಸಾಧ್ತೆ ದಟ್ಟವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಗಾಗಲೇ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿದ್ದು ಪರಿಶೀಲಿಸಲಾಗುತ್ತಿದೆ. ಘಟನೆ ದಿನ ವ್ಯಕ್ತಿಯೊಬ್ಬ ಕುಸುಮರಾಣಿ ಅವರೊಂದಿಗೆ ಇರುವುದು ದೃಶ್ಯಾವಳಿಯಲ್ಲಿ ದಾಖಲಾಗಿದೆ. ತನಿಖೆಯಲ್ಲಿ ಕೊಲೆಗಾರನ ಬಗ್ಗೆ ಸಣ್ಣ ಸುಳಿವು ಲಭ್ಯವಾಗಿದೆ.
Advertisement