ಮತ್ತೆ ವಿವಾದದಲ್ಲಿ ಚೆಲುವಾಂಬ ಆಸ್ಪತ್ರೆ

ಬಾಣಂತಿಯರ ಸರಣಿ ಸಾವಿನಿಂದ ಸುದ್ದಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆ ಈಗ ನವಜಾತ ಶಿಶುಗಳ ಸರಣಿ ಸಾವಿನಿಂದ ಮತ್ತೆ...
ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಬಾಣಂತಿಯರ ಕೊಠಡಿ
ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಬಾಣಂತಿಯರ ಕೊಠಡಿ

ಮೈಸೂರು: ಬಾಣಂತಿಯರ ಸರಣಿ ಸಾವಿನಿಂದ ಸುದ್ದಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆ ಈಗ ನವಜಾತ ಶಿಶುಗಳ ಸರಣಿ ಸಾವಿನಿಂದ ಮತ್ತೆ ವಿವಾದಕ್ಕೆ ಗುರಿಯಾಗಿದೆ.

ಮೂರು ದಿನಗಳಲ್ಲಿ ಆಸ್ಪತ್ರೆಯಲ್ಲಿ 5 ಗಂಡು, ಒಂದು ಹೆಣ್ಣು ಮಗು ಸೇರಿದಂತೆ ಒಟ್ಟು 6 ಶಿಶುಗಳು ಮೃತಪಟ್ಟಿವೆ. ಈ ನಡುವೆ ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದ್ದು, ಈ ಶಿಶುವಿನ ಹೆತ್ತವರ ಪತ್ತೆಗಾಗಿ ವೈದ್ಯರು ಹಾಗೂ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಶೌಚಾಲಯದಲ್ಲಿ ಪತ್ತೆಯಾದ ಶಿಶು ನಂಜನಗೂಡು ತಾಲೂಕು ಕೃಷ್ಣಾಪುರ ನಿವಾಸಿ ರೂಪಾ ಮತ್ತು ಮೂರ್ತಿ ದಂಪತಿಗೆ ಸೇರಿದ್ದು ಎಂಬ ಅನುಮಾನದ ಮೇಲೆ ಚೆಲುವಾಂಬ ಆಸ್ಪತ್ರೆಯ ವೈದ್ಯರು ದೇವರಾಜ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಆಕ್ರೋಶಗೊಂಡ ಮೂರ್ತಿ ಕುಟುಂಬಸ್ಥರು ದೇವರಾಜ ಠಾಣೆಗೆ ಬುಧವಾರ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

ಏನಾಗಿತ್ತು?: ಆಸ್ಪತ್ರೆಯ ಹೆರಿಗೆ ವಾರ್ಡ್ ನ ಶೌಚಾಲಯದಲ್ಲಿ ಮಂಗಳವಾರ ನವಜಾತ ಶಿಶುವಿನ ಶವ ಪತ್ತೆಯಾಗಿತ್ತು. ಈ ಶಿಶು ರೂಪಾ ಮತ್ತು ಮೂರ್ತಿ ದಂಪತಿಗೆ ಸೇರಿದ್ದು ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದರು. ಆದರೆ, ಈ ದಂಪತಿಗೆ ಜನಿಸಿದ್ದ ಹೆಣ್ಣು ಶಿಶು ಸೋಮವಾರವೇ ಮೃತಪಟ್ಟಿತ್ತು.

ವೈದ್ಯರ ದೂರಿನ ಮೇರೆಗೆ ಪೊಲೀಸರು ಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಊರಿನಲ್ಲಿ ಶಿಶುವಿನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾಗಿ ತಿಳಿಸಿದ್ದಾರೆ. ಇದನ್ನು ಪೊಲೀಸರು ನಂಬದ ಕಾರಣ ಮೂರ್ತಿ ಕುಟುಂಬದವರು ಹೂತಿದ್ದ ತಮ್ಮ ಶಿಶುವಿನ ಶವವನ್ನು ಹೊರತೆಗೆದು ಪೊಲೀಸ್ ಠಾಣೆಗೆ ಧಾವಿಸಿ, ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ವೈದ್ಯರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದ ಶಿಶು ಸಾವು: ದೂರು
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಮುದುಗೆರೆ ನಿವಾಸಿ ಚಂದ್ರೇಗೌಡ ಎಂಬುವರ ಪತ್ನಿ ಶೋಭಾ ಅವರು ಚೆಲುವಾಂಬ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ 6ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಅರ್ಧ ಗಂಟೆಯ ನಂತರ ಶಿಶು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಆರೋಗ್ಯವಾಗಿದ್ದ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಕೆಯ ಪತಿ ಚಂದ್ರೇಗೌಡ ದೂರು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com